ಬೀದಿ ವ್ಯಾಪಾರಸ್ಥರಿಗೆ ಪಿ.ಎಮ್. ಸ್ವ ನಿಧಿ ಸಮೃದ್ಧಿ ಯೋಜನೆ ತರಬೇತಿ
ರನ್ನ ಬೆಳಗಲಿ 12: ಬೀದಿ ವ್ಯಾಪಾರಸ್ಥರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು, ಉತ್ತಮ ಆರೋಗ್ಯ ಜೊತೆಗೆ ಆರ್ಥಿಕ ಅಭಿವೃದ್ಧಿ ಹೊಂದಬೇಕು ಎಂದು ಡಾ. ಚಂದ್ರಕಾಂತ ಹೊಸೂರ ಅವರು ಕರೆ ನೀಡಿದರು. ಪಟ್ಟಣದ ಬಂದ ಲಕ್ಷ್ಮೀ ದೇವಸ್ಥಾನದ ಕವಿ ಚಕ್ರವರ್ತಿ ರನ್ನ ಸಾಂಸ್ಕೃತಿಕ ಭವನದಲ್ಲಿ ಶನಿವಾರದಂದು ಜಿಲ್ಲಾಡಳಿತ, ಜಿಲ್ಲಾ ಕೌಶಲ್ಯಾಭಿವೃದ್ಧಿ ಉದ್ಯಮ ಶೀಲತೆ ಹಾಗೂ ಜೀವನೋಪಾಯ ಇಲಾಖೆ ಬಾಗಲಕೋಟೆ, ಪಟ್ಟಣ ಪಂಚಾಯತ ಕಾರ್ಯಾಲಯ ರನ್ನ ಬೆಳಗಲಿ ಆಶ್ರಯದಲ್ಲಿ ಡೇ-ನಲ್ಮ್ ಯೋಜನೆ ಅಡಿಯಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಪಿ.ಎಮ್. ಸ್ವ ನಿಧಿ ಸಮೃದ್ಧಿ ಯೋಜನೆ ಕುರಿತು ತರಬೇತಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿವೆ ಅದರಲ್ಲಿ "ಅತ್ಮ ನಿರ್ಭರ ಭಾರತ" ಈ ಯೋಜನೆ ಮೂಲಕ ರನ್ನ ಬೆಳಗಲಿ ಪಟ್ಟಣ ಪಂಚಾಯತ ಕಾರ್ಯಾಲಯ ವ್ಯಾಪ್ತಿಯಲ್ಲಿ ಬರುವ ಬ್ಯಾಂಕುಗಳಿಂದ ಪಿ.ಎಂ. ಸ್ವ-ನಿಧಿಯಡಿ ಸಾಲ ಪಡೆದಿರುವ ಬೀದಿಬದಿ ವ್ಯಾಪಾರಿಗಳು, ಬ್ಯಾಂಕುಗಳ ಸಾಲವನ್ನು ಮರುಪಾವತಿಸಿದಾಗ ಡಿಜಿಟಲ್ ಮೂಲಕ ಮರುಪಾವತಿಸಿದಲ್ಲಿ ಬಡ್ಡಿ ಸಹಾಯ ಧನದೊಂದಿಗೆ ಹೆಚ್ಚುವರಿಯಾಗಿ ಸಹಾಯಧನದ ಮೊತ್ತ 100 ರೂ. ರಂತೆ ಉತ್ತೇಜನ ಮೊತ್ತ ಈ ಯೋಜನೆಯಡಿ ಡಿಜಿಟಲ್ ಮೂಲಕ ಪಡೆಯಬಹುದಾಗಿರುತ್ತದೆ. ಇದರ ಸದುಪಯೋಗ ಎಲ್ಲಾ ಬೀದಿ ಬದಿ ವ್ಯಾಪರಿಗಳು ಪಡೆಯಬೇಕು. ಆಯಾ ಬ್ಯಾಂಕ್ಗಳಲ್ಲಿ ಅಗತ್ಯ ಮಾಹಿತಿ ಹಾಗೂ ತರಬೇತಿಗಳನ್ನು ನೀಡಲಾಗುವುದು ಪಿ.ಎಂ. ಸ್ವ-ನಿಧಿ ಯೋಜನೆಯಡಿ ಬೀದಿಬದಿ ವ್ಯಾಪಾರಿಗಳು ಮತ್ತು ಅವರ ಕುಟುಂಬದ ಸದಸ್ಯರುಗಳಿಗೆ ಒಂದೇ ವೇದಿಕೆಯಲ್ಲಿ 8 ಕಲ್ಯಾಣ ಯೋಜನೆಗಳನ್ನು ಲಿಂಕ್ ಮಾಡಲಾಗಿದೆ. ಅರ್ಜಿ ನಮೂನೆಯನ್ನು ಹೇಗೆ ಭರ್ತಿ ಮಾಡಬೇಕು? ಯಾವ ದಾಖಲೆಗಳು ಬೇಕು? ಯೋಜನೆಯ ಲಾಭ ಎಲ್ಲಿ ಸಿಗುತ್ತದೆ? ಎಂಬ ಹತ್ತು ಹಲವು ಮಾಹಿತಿಗಳನ್ನು ತಿಳಿಸಿ, 2014ರಲ್ಲಿ ಬೀದಿ ವ್ಯಾಪಾರಸ್ಥರಿಗಾಗಿ ಜಾರಿಗೊಂಡ ಆರೋಗ್ಯ ರಕ್ಷಣೆ ಕಾಯ್ದೆ ಬಗ್ಗೆ ಮಾಹಿತಿ ನೀಡಿ ಉತ್ತಮ ಆರೋಗ್ಯ ಜೊತೆಗೆ ಸರಕಾರದ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಹೊಸೂರ ಅವರು ತಿಳಿಸಿದರು. ಅನ್ನಪೂರ್ಣೇಶ್ವರಿ ಮಹಿಳಾ ಒಕ್ಕೂಟದ ಅಧ್ಯಕ್ಷ ಸಾಯವ್ವ ತೋಳನೂರ ಬೀದಿ ಬದಿ ವ್ಯಾಪಾರಸ್ಥರ ಸೌಲಭ್ಯಗಳು ನೇರವಾಗಿ, ಫಲಾನುಭವಿಗಳಿಗೆ ತಲುಪುವಂತಾಗಬೇಕು ಎಂದು ತಿಳಿಸಿದರು. ಸಿದ್ದು ಸಾಂಗ್ಲಿಕರ ವಕೀಲರು ಕೇಂದ್ರ ಸರಕಾರದ ಯೋಜನೆಗಳು ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಇರುವ ಉತ್ತಮ ಯೋಜನೆಗಳಾಗಿವೆ. ಬೀದಿ ವ್ಯಾಪಾರಸ್ಥರ ಬದುಕು ಉತ್ತಮಗೊಳ್ಳಲು ಬೇಕಾದ ಮೂಲಭೂತ ಅವಶ್ಯಕತೆಗಳನ್ನು ವಿವಿಧ ಕಾರ್ಯಕ್ರಮಗಳಾಗಿ ಒದಗಿಸಿದ. ಕೇಂದ್ರ ಸರ್ಕಾರದ ಯೋಜನೆಯ ಲಾಭವನ್ನು ಎಲ್ಲ ಬೀದಿ ಬದಿ ವ್ಯಾಪಾರಿಗಳು ಪಡೆದುಕೊಳ್ಳಬೇಕು. ಬೀದಿ ಬದಿ ವ್ಯಾಪಾರಸ್ಥರಿಗೆ ತಮ್ಮ ಸಂತೆಯ ಸರಕುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಅವಶ್ಯವಿರುವ ಸ್ಥಳಾವಕಾಶವನ್ನು ಪಂಚಾಯಿತಿ ಮಟ್ಟದಲ್ಲಿ ಚರ್ಚಿಸಿ ಸೂಕ್ತ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಪಟ್ಟಣ ಪಂಚಾಯತ ಅಧ್ಯಕ್ಷೆ ರೂಪಾ ಸದಾಶಿವ ಹೊಸಟ್ಟಿ ಬೀದಿ ಬದಿ ವ್ಯಾಪಾರಸ್ಥರ ವಿವಿಧ ಯೋಜನೆಗಳ ಮಾಹಿತಿ ಹೊಂದಿರುವ ಭಿತ್ತಿ ಪತ್ರಗಳನ್ನು ಉದ್ಘಾಟಿಸಿ, ತರಬೇತಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ಮಹಾನದಿ ಮಹಿಳಾ ಒಕ್ಕೂಟದ ಅಧ್ಯಕ್ಷ ಬಿಸ್ಮಿಲಾ ಅತ್ತಾರ, ಪ,ಪಂ ಸ್ಥಾಯಿ ಸಮಿತಿ ಚೇರ್ಮನ್ ಪ್ರವೀಣ ಬರಮನಿ, ಸದಸ್ಯರಾದ ಪ್ರವೀಣ ಪಾಟೀಲ, ನೀಲಕಂಠ ಸೈದಾಪುರ, ಮುಬಾರಕ ಅತ್ತಾರ, ನಾಮ ನಿರ್ದೇಶಕ ಸದಸ್ಯರಾದ ಬಸು ಗೌರಣ್ಣವರ ಮುಖಂಡರಾದ ಸಂಗಪ್ಪ ಅಮಾತಿ, ಸದಾಶಿವ ಹೊಸಟ್ಟಿ, ಮಲ್ಲಪ್ಪ ಮಲಾವಡಿ, ಮಹಾಲಿಂಗಪ್ಪ ಕೊಣ್ಣೂರ, ಮಹಾಲಿಂಗಪ್ಪ ಪುರಾಣಿಕ, ಸಂಗಪ್ಪ ರಾಮದುರ್ಗ ಪ.ಪಂ ಪ್ರಥಮ ದರ್ಜೆ ಸಹಾಯಕರಾದ ಪರಶುರಾಮ ನಾಗನೂರ ವೇದಿಕೆ ಮೇಲೆ ಉಪಸ್ಥಿತರಿದ್ದರು. ಹಂಸ ಧ್ವನಿ ಎನ್.ಜಿ.ಓ ಹುಲ್ಯಾಳ ಸಂಸ್ಥಾಪಕ ಶಿವಾನಂದ ಬಾಡನ್ನವರ ನಿರೂಪಿಸಿದರು, ಕಾಡು ಜಿಲ್ಪಿ ಕಲಾವಿದ ಕಾರ್ಯಕ್ರಮಕ್ಕೆ ವಂದಿಸಿದರು.