ನವದೆಹಲಿ, ಫೆ ೧೨ : ತಮ್ಮ ಭಾರತ ಪ್ರವಾಸದ ವೇಳೆ ಲಕ್ಷಾಂತರ ಮಂದಿ ಸ್ವಾಗತ ನೀಡಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ತಮಗೆ ತಿಳಿಸಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಹಾಗಾಗಿ, ತಮ್ಮ ಭಾರತ ಪ್ರವಾಸವನ್ನು ಅತ್ಯಂತ ಆಸಕ್ತಿಯಿಂದ ಎದುರು ನೋಡುತ್ತಿರುವುದಾಗಿ ಟ್ರಂಪ್ ತಿಳಿಸಿದ್ದಾರೆ.
ಫೆಬ್ರವರಿ ೨೪, ೨೫ ರಂದು ಎರಡು ದಿನಗಳ ಕಾಲ ಡೊನಾಲ್ಡ್ ಟ್ರಂಪ್ ದಂಪತಿ ಭಾರತಕ್ಕೆಭೇಟಿ ನೀಡಲಿದ್ದು, ನವದೆಹಲಿ ಹಾಗೂ ಗುಜರಾತ್ ನ ಅಹಮದಾಬಾದ್ ನಗರಗಳಲ್ಲಿ ಪ್ರವಾಸ ನಡೆಸಲಿದ್ದಾರೆ ಎಂದು ಶ್ವೇತಭವನ ಪ್ರಕಟಿಸಿದ ನಂತರ ಟ್ರಂಪ್ ಮಾಧ್ಯಮಗಳಿಗೆ ಈ ವಿಷಯ ತಿಳಿಸಿದ್ದಾರೆ.
ಪ್ರಧಾನಿ ಮೋದಿ ನನಗೆ ಉತ್ತಮ ಸ್ನೇಹಿತ. ಅವರು ಬಹಳ ಸಂಭಾವಿತರು ಎಂದು ಟ್ರಂಪ್ ಕೊಂಡಾಡಿದ್ದಾರೆ.
ಮೋದಿ ಅವರೊಂದಿಗೆ ತಾವು ಇತ್ತೀಚಿಗೆ ದೂರವಾಣಿ ಮಾತುಕತೆ ನಡೆಸಿದ್ದಾಗಿ ಟ್ರಂಪ್ ತಿಳಿಸಿದ್ದಾರೆ. ವಿಮಾನ ನಿಲ್ದಾಣದಿಂದ ಕ್ರಿಕೆಟ್ ಸ್ಟೇಡಿಯಂವರೆಗೆ ಲಕ್ಷಾಂತರ ಜನರು ತಮ್ಮನ್ನು ಸ್ವಾಗತಿಸಲಿದ್ದಾರೆ ಎಂದು ಮೋದಿ ತಿಳಿಸಿದ್ದಾರೆ ಎಂದು ಟ್ರಂಪ್ ಹೇಳಿದರು.
ನ್ಯೂ ಹ್ಯಾಂಪ್‌ಷೈರ್ ನಲ್ಲಿ ಇತ್ತೀಚೆಗೆ ನಡೆದ ತಮ್ಮ ಸಮಾವೇಶಕ್ಕೆ ೫೦,೦೦೦ ಜನ ಬಂದಿದ್ದರು, ಆದರೆ ಮೋದಿಯವರ ಸಂಖ್ಯೆಗೆ ಹೋಲಿಸಿದರೆ ಇದು ತೃಪ್ತಿಕರವಾಗಿಲ್ಲ ಎಂದು ಟ್ರಂಪ್ ವ್ಯಂಗ್ಯವಾಗಿ ನುಡಿದಿದ್ದಾರೆ.