ಲೋಕದರ್ಶನ ವರದಿ
ಧಾರವಾಡ 03: ಎಲ್ಲ ಅಪೇಕ್ಷೆಗಳಿಂದ ಹೊರಬಂದು ಮನುಷ್ಯ ಮುಕ್ತನಾದಾಗಲೇ ಮುಕ್ತಿಯ ಬೆಳಗು ಗೋಚರವಾಗಲು ಸಾಧ್ಯವಾಗುತ್ತದೆ ಎಂದು ಹೆಬ್ಬಳ್ಳಿ ಬ್ರಹ್ಮಚೈತನ್ಯಾಶ್ರಮದ ಶ್ರೀದತ್ತಾವಧೂತ ಮಹಾರಾಜರು ಪ್ರತಿಪಾದಿಸಿದರು.
ಅವರು ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ಜರುಗುತ್ತಿರುವ ಗ್ರಾಮದೇವತಾ ಜಾತ್ರಾಮಹೋತ್ಸವದ ಅಂಗವಾಗಿ ಗ್ರಾಮದ ಪಂಚಗೃಹ ಹಿರೇಮಠದ ಆವರಣದಲ್ಲಿ ಹಮ್ಮಿಕೊಂಡಿರುವ 9 ದಿನಗಳ 'ಸದ್ಭಾವನಾ ಧರ್ಮ ಸಮಾವೇಶ'ವನ್ನು ಉದ್ಘಾಟಿಸಿ ಮಾತನಾಡಿದರು. ದೇಹಭಾವವನ್ನು ಕಳೆದು ಆತ್ಮಭಾವದಿಂದ ಬದುಕುವುದುದೇ ಶ್ರೇಷ್ಠ ಜೀವನ ವಿಧಾನವಾಗಿದ್ದು, ಆತ್ಮಬುದ್ಧಿಯ ಸುಖವೇ ನಿಜವಾದ ಸುಖವಾಗಿದೆ. ಭಗವಂತನ ಅಸ್ತಿತ್ವದ ಭಾವನಾತ್ಮಕ ಸಂಬಂಧವನ್ನು ಕಾಪಾಡಿಕೊಂಡು ಬದುಕಿನ ರಹದಾರಿಯಲ್ಲಿ ಧರ್ಮ ಪ್ರಜ್ಞೆಯನ್ನು ಅಳವಡಿಕೊಳ್ಳಬೇಕು ಎಂದರು.
ಉಪದೇಶಾಮೃತ ನೀಡಿದ ಸುಳ್ಳದ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ವಿವಿಧತೆಯಲ್ಲಿ ಏಕತೆಯನ್ನು ಕಾಣುವುದೇ ಎಲ್ಲ ಜಾತ್ರೆಗಳ ಮೂಲ ಉದ್ದೇಶವಾಗಿದೆ. ಕೂಡಿ ಬಾಳುವ ಸತ್ಸಂಗವನ್ನು ಹೊಂದಿ ಜೀವನ ಕ್ರಮದ ಸಹೋದರ ಭಾವವನ್ನು ಇಮ್ಮಡಿ-ಮುಮ್ಮಡಿಗೊಳಿಸಿಕೊಂಡು ಸಾತ್ವಿಕ ಜೀವನ ವಿಧಾನವನ್ನು ಹೊಂದಬೇಕೆನ್ನುವುದೇ ಜಾತ್ರಾ ಮಹೋತ್ಸವಗಳ ಆಂತರ್ಯದ ಆಶಯವಾಗಿದೆ ಎಂದರು.
ಸದಾಶಯ ನುಡಿ ಸಿಂಚನ ನೀಡಿದ ಅಮ್ಮಿನಬಾವಿ ಪಂಚಗೃಹ ಹಿರೇಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು, ನಮ್ಮೊಳಗಿನ ಸಂತೋಷ ಮತ್ತು ಆನಂದ ಮೇಲ್ನೋಟಕ್ಕೆ ಎರಡೂ ಒಂದೇ ಎನಿಸಿದರೂ ಸಹ, ಬಾಹ್ಯ ಲೌಕಿಕ ಪ್ರಪಂಚದ ಖುಷಿ ಸಂತೋಷವೆನಿಸುತ್ತದೆ. ಅಲೌಕಿಕ ಮತ್ತು ಪಾರಮಾಥರ್ಿಕವಾದ ಶಾಶ್ವತ ಖುಷಿಯು ಆನಂದವೆನಿಸುತ್ತದೆ. ಕೇವಲ ಯಾತ್ರೆ-ಜಾತ್ರೆಗಳನ್ನು ನೋಡಿ ಸಂತೋಷ ಪಡುವುದಕ್ಕಿಂತ ನಿತ್ಯವೂ ಅಂತರಂಗದ ಯಾತ್ರೆಯಲ್ಲಿ ಆನಂದವನ್ನು ಅನುಭವಿಸಬೇಕು ಎಂದರು.
ಮುಂಬೈದ ಬಾಬಾ ಅಟೋಮಿಕ್ ರಿಸರ್ಚ ಸೆಂಟರ್ ಅಣುವಿಜ್ಞಾನಿ ಸಂಗಯ್ಯ ಶಿವಯ್ಯನಮಠ ಹಾಗೂ ತಾಲೂಕು ಪಂಚಾಯತಿ ಸದಸ್ಯ ಸುರೇಂದ್ರ ದೇಸಾಯಿ ಮಾತನಾಡಿದರು. ಬಸಯ್ಯ ಗುಡಿ, ಅಪ್ಪಣ್ಣ ದೇಶಪಾಂಡೆ, ಬಸವರಾಜ ಕೊಳ್ಳಿ, ವಿ.ಬಿ. ಕೆಂಚನಗೌಡರ, ಚೆಂಬಣ್ಣ ಉಂಡೋಡಿ, ರಾಮಣ್ಣ ಹುಲ್ಲೂರ, ಶಿವಪ್ಪ ಹೂಲಿ, ರಜನೀಶ ಸವಣೂರ, ಚೆಂಬಣ್ಣ ಪೂಜಾರ, ಚಂದ್ರು ಶೆಟ್ಟರ ಇದ್ದರು. ವಿಜಯಕುಮಾರ ಇಟಗಿ ಸ್ವಾಗತಿಸಿದರು. ಸೋಮಲಿಂಗಶಾಸ್ತ್ರಿ ಗುಡ್ಡದಮಠ ವಂದಿಸಿದರು.
ಗುರುರಕ್ಷೆಯ ಗೌರವ : ಗ್ರಾಮದ ಜೈನ ಸಮಾಜದ ಗಣ್ಯರಾದ ವಿಜಯಾನಂದ ದೇಸಾಯಿ, ಭುಜಬಲಿ ದೇಸಾಯಿ, ಮಹಾವೀರ ದೇಸಾಯಿ, ಎಸ್.ಆರ್. ಶಿವಯ್ಯನಮಠ, ಎಸ್.ಎನ್.ದೇಸಾಯಿ, ಅಶೋಕ ಪದಕಿ, ಕಾಳಪ್ಪ ಬಡಿಗೇರ, ಬಸಪ್ಪ ವಾಲಿ, ಉಮೇಶ ಶಿರಕೋಳ, ಬಸವರಾಜ ಮಂಟೂರ ಅವರಿಗೆ ಶ್ರೀಗಳು ಶಾಲು ಹೊದಿಸಿ ಗುರುರಕ್ಷೆಯ ಗೌರವ ನೀಡಿ ಆಶೀರ್ವದಿಸಿದರು.