ಪರಿಶಿಷ್ಟರ 11 ಸಾವಿರ ಅರ್ಜಿಗಳಲ್ಲಿ 88 ಮಂದಿಗೆ ಮಾತ್ರ ಮುದ್ರಾ ಯೋಜನೆಯ ಸಾಲ : ರಾಮ್‍ಶಂಕರ್ ಕಥೇರಿಯಾ

ಬೆಂಗಳೂರು, ಫೆ 14 :    ರಾಜ್ಯದಲ್ಲಿರುವ ಪರಿಶಿಷ್ಟ ಸಮುದಾಯದ ಸಮಸ್ಯೆಗಳು ಹಾಗೂ ಅವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ನ್ಯಾಯಯುತವಾಗಿ ದೊರೆಯಬೇಕಾದ ಸವಲತ್ತು ಸೌಲಭ್ಯಗಳ ವಿಚಾರದಲ್ಲಿ ರಾಜ್ಯ ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಅಧ್ಯಕ್ಷ ರಾಮ್‍ಶಂಕರ್ ಕಥೇರಿಯಾ ತಿಳಿಸಿದ್ದಾರೆ.

ರಾಜ್ಯದಲ್ಲಿ ಪರಿಶಿಷ್ಟ ಸಮುದಾಯದ ಸ್ಥಿತಿಗತಿ ಕುರಿತು ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ ಎರಡು ದಿನಗಳ ಕಾಲ ರಾಜ್ಯಕ್ಕೆ ಭೇಟಿ ನೀಡಿ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿತು. 

ಬಳಿಕ ಇಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಪರಿಶಿಷ್ಟರ ಪರಿಸ್ಥಿತಿ ಉತ್ತಮವಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‍ನಲ್ಲಿ ಸಂಪನ್ಮೂಲ ಹಂಚಿಕೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ರಾಜ್ಯದಲ್ಲ್ಲಿ ಶೇ 17.15 ರಷ್ಟು ಪರಿಶಿಷ್ಟ ಜಾತಿ ಜನಸಂಖ್ಯೆ ಇದ್ದು ಶೇಕಡ 17 ರಷ್ಟು ಹಣ ಮೀಸಲಿರಿಸಲಾಗಿದೆ.  ಇದೊಂದು ಸಂತಸದ ವಿಚಾರವಾಗಿದ್ದು, ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ವ್ಯವಸ್ಥೆ, ವಿದ್ಯಾರ್ಥಿ ವೇತನ ವಿತರಣೆ ಹಾಗೂ ಸಮುದಾಯ ಭವನ ನಿರ್ಮಾಣದಲ್ಲೂ ಕರ್ನಾಟಕದ ಸ್ಥಿತಿ ಉತ್ತಮವಾಗಿದೆ ಎಂದರು. 

ಬ್ಯಾಂಕ್ ಸಾಲ ಮತ್ತು ಹೊಸ ಸ್ವಂತ ಉದ್ಯೋಗಗಳನ್ನು ಆರಂಭಿಸುವ ವಿಚಾರದಲ್ಲಿ ಮಾತ್ರ ಕರ್ನಾಟಕದ ಪರಿಶಿಷ್ಟ ಜಾತಿ ಯುವ ಸಮೂಹ ಸದುಪಯೋಗಪಡಿಸಿಕೊಳ್ಳುವಲ್ಲಿ ಹಿಂದೆ ಬಿದ್ದಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಗಳಾದ ಮುದ್ರಾ ಸಾಲ ಯೋಜನೆ, ಸ್ಪಾರ್ಟ್ ಅಪ್ ಸಾಲ ವಿಚಾರದಲ್ಲಿ ಪರಿಶಿಷ್ಟರಿಗೆ ಸೌಲಭ್ಯ ನಿರೀಕ್ಷಿತ ಮಟ್ಟದಲ್ಲಿ ಸಿಕ್ಕಿಲ್ಲ. ಈ ಸಂಬಂಧ ರಾಜ್ಯ ಮುಖ್ಯ ಕಾರ್ಯದರ್ಶಿಯವರಿಗೆ ಕ್ರಮಕೈಗೊಳ್ಳಲು ಸೂಚಿಸಿದ್ದು, ತಕ್ಷಣವೇ ಬ್ಯಾಂಕ್ ಮುಖ್ಯಸ್ಥರ ಸಭೆ ಕರೆದು ಸೂಚನೆ ನೀಡುವಂತೆ ಸಲಹೆ ಮಾಡಲಾಗಿದೆ ಎಂದರು. 

ರಾಜ್ಯದಲ್ಲಿ ಮುದ್ರಾ ಯೋಜನೆಯಡಿ ಒಟ್ಟು 11 ಸಾವಿರ ಅರ್ಜಿ ಸಲ್ಲಿಕೆಯಾಗಿದ್ದು, ಕೇವಲ 88  ಮಂದಿ ಮಾತ್ರ ಸಾಲ ಪಡೆದುಕೊಂಡಿದ್ದಾರೆ.  ಇದು ಪ್ರಧಾನಿಯವರ ಮಹತ್ವಾಂಕ್ಷೆ ಯೋಜನೆಯಾಗಿದ್ದು ಹೆಚ್ಚು ಗಮನಕೊಡುವಂತೆ ಸೂಚಿಸಲಾಗಿದೆ ಎಂದರು. 

ರಾಜ್ಯದಲ್ಲಿ ಪ್ರಧಾನ ಮಂತ್ರಿ ಆವಾಜ್ ಯೋಜನೆ, ಉಜ್ವಲ ಯೋಜನೆಯಲ್ಲಿ ಪರಿಶಿಷ್ಟರಿಗೆ ಅವಕಾಶಗಳು ಸಿಕ್ಕಿರುವುದು ತೃಪ್ತಿಕರವಾಗಿದೆ. ಪೊಲೀಸ್ ಅಧಿಕಾರಿಗಳೊಂದಿಗೆ ಜತೆ ಸಭೆ ನಡೆಸಿದ್ದು, ಪರಿಶಿಷ್ಟರ ಮೇಲಿನ ಕೊಲೆ ಮತ್ತು ಅತ್ಯಾಚಾರ ಪ್ರಕರಣದ ಅಂಕಿ ಆಂಶ ಪರಿಶೀಲಿಸಲಾಯಿತು.  ದೇಶದ ಅಂಕಿ ಅಂಶಕ್ಕೆ ಹೋಲಿಸಿದರೆ ಕರ್ನಾಟಕದ ಸ್ಥಿತಿ ಉತ್ತಮವಾಗಿದೆ. ನಕಲಿ ಪ್ರಮಾಣ ಪತ್ರ ಬಳಸುವವರ ಬಗ್ಗೆ ಗಂಭೀರ ಕ್ರಮಕೈಗೊಳ್ಳಬೇಕು.   ಪರಿಶೀಲನೆಗೆ ರಾಜ್ಯ ಮಟ್ಟದಲ್ಲಿ ಸಮಿತಿ ರಚಿಸಬೇಕು.  ತಪ್ಪಿತಸ್ಥರ ಮೇಲೆ ಎಫ್.ಐ.ಆರ್. ದಾಖಲಿಸಿ ಕೆಲಸದಿಂದ ವಜಾ ಮಾಡಬೇಕು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಸದಸ್ಯರು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಮ್. ವಿಜಯ್ ಭಾಸ್ಕರ್, ಕೇಂದ್ರ ಹಾಗೂ ರಾಜ್ಯ ಸರ್ಕಾರದ  ಉನ್ನತ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.