ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ ಆಶೀರ್ವಾದ ಕಾರ್ಯಕ್ರಮದಲ್ಲಿ ತಂದೆ, ತಾಯಿ ಪಾದ ಪೂಜೆ
ಗಂಗಾವತಿ 13: ತಾಲ್ಲೂಕಿನ ಶ್ರೀರಾಮನಗರದ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ10 ಮತ್ತು 12ನೆಯ ತರಗತಿಯ ವಿದ್ಯಾರ್ಥಿಗಳಿಗೆ ‘ಆಶೀರ್ವಾದ-2025' ಎಂಬ ಹೆಸರಿನಲ್ಲ್ಲಿ ಭಾರತೀಯ ಸಂಸ್ಕೃತಿಯ ಅರಿವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಲು ಹಾಗೂ ವಿದ್ಯಾರ್ಥಿಗಳು ಪರೀಕ್ಷಾ ಪೂರ್ವದಲ್ಲಿ ದೈವ ಸ್ವರೂಪರಾದ ತಮ್ಮ ತಂದೆ-ತಾಯಿಗಳ ಆಶೀರ್ವಾದವನ್ನು ಪಡೆಯಲು ಅನುಕೂಲವಾಗುವಂತೆ 10 ಮತ್ತು 12ನೆಯ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ‘ಆಶೀರ್ವಾದ' ಎಂಬ ಸಮಾರಂಭವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಒಟ್ಟು 550 ವಿದ್ಯಾರ್ಥಿಗಳಿಂದ ಅವರ ತಂದೆ-ತಾಯಿಗಳಿಗೆ ಪಾದ ಪೂಜೆಯನ್ನು ನೆರವೇರಿಸಲಾಯಿತು. ಈ ಕಾರ್ಯಕ್ರಮದ ಭವ್ಯವಾದ ವೇದಿಕೆಯಲ್ಲಿ ಭಾರತಕಂಡ ಮಹಾನ್‌ತತ್ವಜ್ಞಾನಿ ಹಾಗೂ ಸಮಾಜ ಸುಧಾರಕರಾದ ಸ್ವಾಮಿ ವಿವೇಕಾನಂದರ ಜನ್ಮದಿನದ ಪ್ರಯುಕ್ತ ರಾಷ್ಟ್ರೀಯ ಯುವ ದಿನದ ಆಚರಣೆಯ ಅಂಗವಾಗಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಸಿ, ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಸೂರಿಬಾಬು ನೆಕ್ಕಂಟಿ ಅವರು ಇಂದು ಸಮಾಜದಲ್ಲಿ ನೈತಿಕ ಮೌಲ್ಯಗಳು ಅದಃಪತನ ಹೊಂದುತ್ತಿದ್ದು, ಈ ದಿಶೆಯಲ್ಲಿ ಜಾಗೃತವಾಗಿರುವ ನಮ್ಮ ಸಂಸ್ಥೆಯು ಶಾಲೆಯ ಸಂಪ್ರದಾಯಂತೆ ಪ್ರತಿ ವರ್ಷವೂ 10 ಮತ್ತು 12ನೆಯ ತರಗತಿಯ ವಿದ್ಯಾರ್ಥಿಗಳಿಂದ ಅವರತಂದೆ ತಾಯಿಗಳಿಗೆ ಪಾದಪೂಜೆಯನ್ನು ಮಾಡಿಸುವದರ ಮೂಲಕ, ಮಕ್ಕಳಲ್ಲಿ ಮಾತೃ ದೇವೋಭವ, ಪಿತೃದೇವೋಭವ, ಆಚಾರದೇವೋಭವ, ಅತಿಥಿದೇವೋಭವ ಎಂಬ ಸಂಸ್ಕಾರವನ್ನು ಬೆಳಸಲು ಪ್ರಯತ್ನಿಸುತ್ತಿದ್ದು, ಈ ಮೂಲಕ ತಂದೆ-ತಾಯಿಗಳನ್ನು ಪೂಜಿಸುವ, ಗೌರವಿಸುವ ಮನೋಭಾವವನ್ನು ಮೂಡಿಸಿ ಭವಿಷ್ಯದ ಸುಸಂಸ್ಕೃತ ನಾಗರಿಕರನ್ನಾಗಿಸುವ ಸಣ್ಣ ಪ್ರಯತ್ನವನ್ನು ಮಾಡಿದ್ದು, ಎಲ್ಲ ವಿದ್ಯಾರ್ಥಿಗಳು ತಂದೆ-ತಾಯಿಗಳನ್ನು, ಗುರು- ಹಿರಿಯರನ್ನು ಗೌರವಿಸುವ ಮೂಲಕ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯ ಅತಿಥಿಗಳಾದ ಮಾಜಿ ಸಚಿವರಾದ ಮಲ್ಲಿಕಾರ್ಜುನ ನಾಗಪ್ಪ ಅವರು ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯು ಮಕ್ಕಳಲ್ಲಿ ಶಿಕ್ಷಣದ ಜೊತೆಗೆಉತ್ತಮ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳುತ್ತಿರುವ ಇಂತಹ ಕಾರ್ಯಕ್ರಮಗಳು ನಿಜವಾಗಿಯು ಪ್ರಶಂಸನಾರ್ಹ ಎಂದು ತಿಳಿಸಿ, ಮಕ್ಕಳು ಉತ್ತಮ ಸಂಸ್ಕಾರವನ್ನು ಪಡೆದು ತಂದೆ-ತಾಯಿಗಳಿಗೆ ಗೌರವವನ್ನು ತರುವಂತಹ ಸಾಧನೆಯನ್ನು ಮಾಡಬೇಕೆಂದು ತಿಳಿಸಿದರು.ಅಷ್ಟೇ ಅಲ್ಲದೆ ಈ ಶಾಲೆಯಲ್ಲಿ ವಿದ್ಯಾರ್ಥಿಗಳು ಪಡೆಯುತ್ತಿರುವ ಶಿಕ್ಷಣವು ಯಾವುದೇ ಅಂತರಾಷ್ಟ್ರೀಯ ಸಂಸ್ಥೆಗೆ ಹೋಲಿಸಿದರೆ ಕಡಿಮೆ ಇಲ್ಲ ಎಂದು ತಿಳಿಸಿದರು. ಇಲ್ಲಿನ ಶಿಕ್ಷಣ ಹಾಗೂ ಸಂಸ್ಕೃತಿಯೂ ಎಲ್ಲ ಜಿಲ್ಲೆಗಳಲ್ಲಿಯೂ ಹೆಸರುವಾಸಿಯಾಗಿದೆ. ಆದಕಾರಣ ಇಂದು ಸುಮಾರು 25 ಜಿಲ್ಲೆಯ ವಿದ್ಯಾರ್ಥಿಗಳು ಇಲ್ಲಿಅಧ್ಯಯನ ಮಾಡುತ್ತಿದ್ದು, ಅವರೆಲ್ಲರೂ ಉತ್ತಮ ವಿದ್ಯಾಭ್ಯಾಸ ಮಾಡಿ ರಾಷ್ಟ್ರಮಟ್ಟದಲ್ಲಿ ಉನ್ನತ ಸಾಧನೆಯನ್ನು ಮಾಡುವ ಮೂಲಕ ಶಾಲೆಯ ಕೀರ್ತಿಯನ್ನು ರಾಷ್ಟ್ರದಾದ್ಯಂತ ಬೆಳಗಬೇಕು ಎಂದು ಕರೆನೀಡಿದರು.ಈ ಕಾರ್ಯಕ್ರಮದಲ್ಲಿ ಅತ್ಯಂತ ಸಂತೋಷದಿಂದ ಭಾಗವಹಿಸಿದ್ದ ಎಲ್ಲ ಪಾಲಕರು ತಮ್ಮ ಮಕ್ಕಳಿಂದ ಪಾದ ಪೂಜೆಯನ್ನು ಸ್ವೀಕರಿಸಿ. ಮಕ್ಕಳನ್ನು ಹರಸಿ, ಆಶೀರ್ವದಿಸಿ, ಶಾಲೆಯು ಆಯೋಜಿಸಿದ ಪಾದಪೂಜೆ ಎಂಬ ಅರ್ಥಪೂರ್ಣವಾದ ಕಾರ್ಯಕ್ರಮದ ಕುರಿತು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ವಾಣಿಜ್ಯೋದ್ಯಮಿಗಳಾದ ಮನ್ನೆಕೃಷ್ಣಮೂರ್ತಿ, ರೈತ ಮುಖಂಡರಾದ ಡಿ. ಆರ್.ಪ್ರಸಾದ್, ಆರ್.ಸೂರ್ಯ ಪ್ರಕಾಶ್‌ರಾವ್, ಚಿಲಕೂರಿರಮೇಶ್, ರೇವಣಪ್ಪ ಸಂಗಟಿ, ಶಾಲೆಯ ಉಪಾಧ್ಯಕ್ಷರಾದ ಆದರ್ಶ ನೆಕ್ಕಂಟಿ, ಶಾಲೆಯ ಆಡಳಿತ ನಿರ್ದೇಶಕರಾದ ಹೆಚ್. ಕೆ ಚಂದ್ರಮೋಹನ್, ಶಾಲೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ನರೇಶ್. ವೈ, ಪಿ.ಯುಕಾಲೇಜಿನನಿರ್ದೇಶಕರು ಹಾಗೂ ಪ್ರಾಂಶುಪಾಲರಾದ ಟಿ. ಜಗನ್ನಾಥ್‌ರಾವ್, ಪದವಿ ಕಾಲೇಜಿನ ಆಡಳಿತ ನಿರ್ದೇಶಕರಾದ ಕೃಷ್ಣ ಪ್ರಸಾದ್, ಪದವಿ ಕಾಲೇಜಿನ ಶೈಕ್ಷಣಿಕ ನಿರ್ದೇಶಕರಾದಶ್ರೀಮತಿ ನಳಿನಿ, ವಿದ್ಯಾನಿಕೇತನ ಐ.ಸಿಎಸ್.ಇ ಸ್ಕೂಲ್‌ನ ಶೈಕ್ಷಣಿಕ ನಿರ್ದೇಶಕರಾದ ಅಲ್ಲೂರಿ ಹಿಮಬಿಂದು, ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಿ. ಎಮ್. ಅಭಿಷೇಕ್, ಶಾಲೆಯ ಶೈಕ್ಷಣಿಕ ಮುಖ್ಯಸ್ಥರಾದ ಕೃಷ್ಣವೇಣಿ, ಕ್ಯಾಂಪಸ್ ಮ್ಯಾನೇಜರ್ ಜಿ. ನಾಗೇಶ್ವರ್‌ರಾವ್, ಶಾಲೆಯ ಪ್ರಾಂಶುಪಾಲರಾದ ಸುಭದ್ರಾದೇವಿ, ಎಲ್ಲಾ ಪಾಲಕರು, ಶಾಲೆಯ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.