ಸ್ಮಶಾನ ದಾರಿಗೆ ಜಮೀನು ನೀಡಿದವರಿಗೆ ಬೇರೆ ಸ್ಥಳದಲ್ಲಿ ಜಮೀನು ನೀಡಲು ಸೂಚನೆ : ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ

ಹಾವೇರಿ 30:  ಕಳ್ಳಿಹಾಳ ಗ್ರಾಮದಲ್ಲಿ ಪರಿಶಿಷ್ಟ ಜನಾಂಗದವರ ಸ್ಮಶಾನಕ್ಕೆ ದಾರಿಗೆ ಜಮೀನು  ನೀಡುವ ಮಾಲೀಕರಿಗೆ ಪರ್ಯಾಯವಾಗಿ ಅಷ್ಟೇ ಜಮೀನು ಬೇರೆ ಸ್ಥಳದಲ್ಲಿ ನೀಡುವುದಾಗಿ ಮನವೋಲಿಸಿ ಸ್ಮಾನಕ್ಕೆ ದಾರಿ ವ್ಯವಸ್ಥೆ ಮಾಡುವಂತೆ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಸೂಚನೆ ನೀಡಿದರು. 

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಜನರ ಮೇಲಿನ ದೌರ್ಜನ್ಯ ನಿಯಂತ್ರಣ ಹಾಗೂ ಜಿಲ್ಲಾ ಜಾಗೃತಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಹಳ ದಿನದಿಂದ ಸಮಸ್ಯೆ ಇದ್ದು,  ದಾರಿಗೆ ಜಮೀನು ನೀಡುವ ಭೂ ಮಾಲೀಕರಿಗೆ ಸ್ಮಶಾನ ಅಥವಾ ಬೇರೆ ಸ್ಥಳದಲ್ಲಿ ಅವರಿಗೆ ಜಮೀನು ನೀಡುವ ಮೂಲಕ ಸ್ಮಶಾನಕ್ಕೆ ದಾರಿ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದರು. 

ಹಾವೇರಿ ತಾಲೂಕಿನ ತೋಟದ ಯಲ್ಲಾಪುರ  ಗ್ರಾಮದಲ್ಲಿ ತುಂಗಾ ಮೇಲ್ದಂಡೆ ಯೋಜನೆ ಕೆನಾಲ್ ನಿರ್ಮಾಣ ಮಾಡಲು ಅಗತ್ಯಕ್ಕಿಂತ ಹೆಚ್ಚಿನ ಜಮೀನು ಭೂಸ್ವಾಧೀನಮಾಡಿಕೊಳ್ಳಲಾಗಿದ್ದು, ಹೆಚ್ಚುವರಿ ಜಮೀನನ್ನು  ರೈತರಿಗೆ  ಮರಳಿ ನೀಡಬೇಕು ಎಂದು ಸಮಿತಿಯ ಅಧಿಕಾರೇತರ ನಾಮನಿರ್ದೇಶಿತ ಸದಸ್ಯ ರಮೇಶ ಆನವಟ್ಟಿ ಅವರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ, ಜಿಲ್ಲಾಧಿಕಾರಿಗಳು ಭೂಸ್ವಾಧೀನ ಜಮೀನು ವಿಷಯವಾಗಿ ನೀರಾವರಿ ನಿಗಮ ಕ್ರಮಕೈಗೊಳ್ಳಬೇಕಾಗುತ್ತದೆ. ಹಾಗಾಗಿ ಸರ್ವೇ ನಂಬರ ಸಹಿತ ಜಮೀನ ವಿವರನ್ನು  ನಿರಾವರಿ ನಿಗಮದ ಕಚೇರಿಗೆ ಪತ್ರ ಬರೆಯಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ರಾಣೇಬೆನ್ನೂರು ತಾಲೂಕು ಬೇಲೂರ ಗ್ರಾಮದ  ನಿವಾಸಿಗೆ ಹಂಚಿಕೆ ಮಾಡಲಾದ ಜಾಗದಲ್ಲಿ ಬೇರೆಯವರು  ಮನೆ ನಿರ್ಮಾಣಮಾಡಿದ ಪ್ರಕರಣ ನ್ಯಾಯಾಲದಲ್ಲಿ ಇತ್ಯರ್ಥವಾದ ಕಾರಣ, ಫಲಾನುಭವಿಗೆ ಬರುವ ದಿನಗಳಲ್ಲಿ ಗ್ರಾಮ ಪಂಚಾಯತಿಂದ ನಿವೇಶನ ಹಂಚಿಕೆ  ಮಾಡುವಾಗ ಆದ್ಯತೆ ಮೇರೆಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.  

ಸಮಿತಿಯ ಅಧಿಕಾರೇತರ ನಾಮನಿರ್ದೇಶಿತ ಸದಸ್ಯ ಮುತ್ತುರಾಜ ಮಾದರ ಅವರು ಮಾತನಾಡಿ, ಸವಣೂರು ತಾಲೂಕು ಚಿಕ್ಕಮುಗದೂರ ಸರ್ಕಾರಿ ಶಾಲೆಯಲ್ಲಿ ಖಾಲಿ ಇರುವ  ಮುಖ್ಯ ಅಡುಗೆ ಸಿಬ್ಬಂದಿ ಸ್ಥಾನಕ್ಕೆ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ವರ್ಗದವರನ್ನು ನೇಮಕ ಮಾಡಬೇಕು. ಈವರೆಗೆ ನೇಮಕ ಮಾಡಿಲ್ಲ. ಕೆಲವು ಶಾಲೆಗಳಲ್ಲಿ ಪರಿಶಿಷ್ಟ ವರ್ಗದವರನ್ನು ಮಾತ್ರ ನೇಮಕಮಾಡಿಕೊಳ್ಳಲಾಗುತ್ತಿದೆ ಎಂದು ಸಭೆಯ ಗಮನಕ್ಕೆ ತಂದರು. 

ಜಿಲ್ಲಾಧಿಕಾರಿಗಳು ಮಾತನಾಡಿ, ಸರ್ಕಾರದ ಮಾರ್ಗಸೂಚಿ ಪ್ರಕಾರ  ಮೀಸಲಾತಿ ಅನ್ವಯ ಅಡುಗೆ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಬೇಕು ಹಾಗೂ ಖಾಲಿ ಇರುವ ಸ್ಥಳಗಳಲ್ಲಿ ಕೂಡಲೇ ಅಡುಗೆ ಸಿಬ್ಬಂದಿ ನೇಮಕ್ಕೆ ಕ್ರಮವಹಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ ಅವರು ಮಾತನಾಡಿ,  ಜನವರಿ-2024 ರಿಂದ ಸೆಪ್ಟೆಂಬರ್‌-2024ರವರೆಗೆ ವಿವಿಧ 40 ದೌರ್ಜನ್ಯ ಪ್ರಕರಣಗಳಲ್ಲಿ ರೂ.33 ಲಕ್ಷ ಪರಿಹಾರ ನೀಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. 

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಸವಣೂರ ಉಪವಿಭಾಗಾಧಿಕಾರಿ ಮಹ್ಮದ ಖೀಜರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಶ್ರೀಮತಿ ಮಮತಾ,  ಡಿವೈ.ಎಸ್‌.ಪಿ. ಪಾಟೀಲ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ, ತಹಶೀಲ್ದಾರ ಶ್ರೀಮತಿ ಶರಣಮ್ಮ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಮಿತಿಯ ಅಧಿಕಾರೇತರ ನಾಮನಿರ್ದೇಶಿತ ಸದಸ್ಯರಾದ  ಶಿದ್ದಲಿಂಗಪ್ಪ ಹೊನ್ನಪ್ಪನವರ, ಹೊನ್ನಪ್ಪ ಯಲಿಗಾರ, ಫಕ್ಕೀರೇಶ ಕಾಳಿ, ಶ್ರೀಧರ ಆನವಟ್ಟಿ,  ಎನ್‌.ಎಂ.ಗಾಳೆಮ್ಮನವರ ಇತರರು ಉಪಸ್ಥಿತರಿದ್ದರು. ಉಪಸ್ಥಿತರಿದ್ದರು.