ಪ್ರಯತ್ನಶೀಲತೆಯೇ ಸಾಧನೆಗೊಂದು ಮೈಲಿಗಲ್ಲು...

ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ) 


ಸರ್‌.ಎಂ. ವಿಶ್ವೇಶ್ವರಯ್ಯರವರ ಪ್ರಕಾರ, "ಯಶಸ್ಸು ಎಂಬುದು ಜೀವನದಲ್ಲಿ ಯಾವುದೊಂದು ಸಂದರ್ಭದಲ್ಲಿ ತನ್ನದೇ ಆದ ರೀತಿಯಲ್ಲಿ ಲಭಿಸುತ್ತದೆ.  ಅದಕ್ಕಾಗಿ ನೀನು ತಡಪಡಿಸುವುದೆ ಬೇಡ. ನೀನು ಕಾರ್ಯದಲ್ಲಿ ಶೃದ್ಧೆ-ನಿಷ್ಠೆಯಿಟ್ಟು, ಸತತ ಪ್ರಯತ್ನಶೀಲತೆಯಿಂದ ದುಡಿ, ಆ ನಿನ್ನ ಪ್ರಯತ್ನಕ್ಕೆ ಮುಂದೊಂದು ದಿನ ಪ್ರತಿಫಲವಾಗಿ ದೊರೆಯುತ್ತದೆ" ಎಂದು ಹೇಳಿದ್ದಾರೆ. ಆದ್ದರಿಂದ ಪ್ರಯತ್ನಶೀಲತೆ ಎಂಬುದು ವ್ಯಕ್ತಿಯ ಜೀವನದ ಸಫಲತೆಗೆ ಇರಲೇಬೇಕಾದ ಅತ್ಯಂತ ಮುಖ್ಯವಾದ ಗುಣಲಕ್ಷಣವಾಗಿದೆ. ಪ್ರಯತ್ನಶೀಲತೆಯಂತಹ ಗುಣವುಳ್ಳವನು ಆತ ನಿಜವಾಗಿಯೂ ಒಬ್ಬ ಛಲಗಾರನೂ ಮತ್ತು ಹಠವಾದಿಯೂ ಆಗಿರುತ್ತಾರೆ. ಹೀಗೆ ನಾವು ಹಿಡಿದ ಕಾರ್ಯವನ್ನು ಸಿದ್ದಿಸುವವರೆಗೆ ಅಥವಾ ನೆರವೇರುವವರೆಗೆ ವಿರಮಿಸದೇ ಎದುರಾಗುವ ಎಲ್ಲ ತೊಂದರೆ, ಸಂಕಷ್ಟ, ಸಮಸ್ಯೆ, ಅಡಚಣೆ, ಸಮರ್ಥವಾಗಿ ಎದುರಿಸುವ ಛಲಗಾರಿಕೆಯೊಂದಿಗೆ ನಿರಂತರ ಅಧ್ಯಯನ, ಸತತ ಪ್ರಯತ್ನ, ಕಠಿಣ ಪರಿಶ್ರಮ, ದೃಢ ಸಂಕಲ್ಪ ಮತ್ತಯ ಸಾಧಿಸಿಯೇ ತೀರುತ್ತೇನೆಂಬ ಆತ್ಮಬಲದೊಂದಿಗೆ ಹೋರಾಡುತ್ತಾನೆ. ಹೀಗೆ ಆತನ ನಿರಂತರ ಪ್ರಯತ್ನಶೀಲತೆಯೇ ನಮಗೆ ವಿಜಯಮಾಲೆಯನ್ನು ತಂದು ಕೊಡುವುದರ ಯಾವುದೇ ಸಂದೇಹವಿಲ್ಲ. 

ನಾವು ಜೀವನದಲ್ಲಿ ಕಂಡ ಕನಸು ಅಥವಾ ಗುರಿಯ ಸಾಧನೆಯ ಪಥದಲ್ಲಿ ನಾವು ಮಾಡುವ ಪ್ರಾಮಾಣಿಕ ಪ್ರಯತ್ನದ ಮೇಲೆ ಅಚಲವಾದ ನಂಬಿಕೆಯಿಟ್ಟು ಯಾವುದೇ ಫಲಾಪೇಕ್ಷೆಯಿಲ್ಲದೇ ಕಠಿಣ ಪರಿಶ್ರಮ ವಹಿಸಿ ದುಡಿದರೆ ಸೋಲೆಂಬ ಮಾತೇ ಇರುವುದಿಲ್ಲ. ಪ್ರಯತ್ನವೆಂಬುದು ಗೆಲುವಿನ ಮಹಡಿಗೆ ಮೊದಲನೆಯ ಮೆಟ್ಟಿಲುಇದ್ದಂತೆ. ಸಾಮಾನ್ಯವಾಗಿ ಬಹಳಷ್ಟು ಜನರು ಜೀವನದ ಪ್ರಥಮ ಪ್ರಯತ್ನದಲ್ಲಿಯೇ ಯಶಸ್ಸು ಸಿಗಬೇಕೆಂದು ಬಯಸುತ್ತಾರೆ. ಮೊದಲ ಪ್ರಯತ್ನದಿಂದಲೇ ಬಹುಶಃ ಯಾರಿಗೂ ಯಶಸ್ಸು ಲಭಿಸಿದ ಉದಾಹರಣೆಗಳಿಲ್ಲ. ಒಂದು ವೇಳೆ ದೊರೆತರೂ ಅದರಿಂದ ಜೀವನದಲ್ಲಿ ಸುಖ ನೀಡಲಾರದು. ಹೀಗೆ ಅಸಾಧ್ಯವಾದುದು ಈ ಜಗತ್ತಿನಲ್ಲಿಯೇ ಇಲ್ಲ. ನಾವು ನಮ್ಮಲಿರುವ ಶಕ್ತಿ-ಸಾಮರ್ಥ್ಯಗಳ ಬಗ್ಗೆ ಅರಿತು ಅಂದುಕೊಂಡಿದ್ದನ್ನು ಸಾಧಿಸುವ ನಿಟ್ಟಿನಲ್ಲಿ ಜೀವನದಲ್ಲಿ ಅಸಾಧ್ಯವಾದುದು ಎಂಬುದಿಲ್ಲ. ಯಾರು ಕಾರ್ಯಶ್ರದ್ಧೆ, ಸಮಚಿತ್ತ, ಸತತ ಪ್ರಯತ್ನ, ನಿರಂತರ ಪರಿಶ್ರಮ ಮತ್ತು ಧನಾತ್ಮಕ ಆಲೋಚನೆ ಮತ್ತು ಸಾಧಿಸಿಯೇ ತೀರುತ್ತೇನೆಂಬ ಛಲದೊಂದಿಗೆ ಹೋರಾಡುತ್ತಾರೋ ಅವರು ಖಂಡಿತವಾಗಿಯೂ ಸಾಧನೆಯ ಶಿಖರವನ್ನು ಮುಟ್ಟುತ್ತಾರೆ.  

ಇಂಗ್ಲೀಷ್ ಕಡಲ್ಗಾಲುವೆಯನ್ನು ಈಜಿ ವಿಶ್ವ ದಾಖಲೆ ಮಾಡಿದ ಮೊಟ್ಟಮೊದಲ ಭಾರತೀಯ ಅಂಗವಿಕಲೆ ಜಾನಕಿಯವರ ಸಾಧನೆ ನಮಗೆಲ್ಲ ಸ್ಪೂರ್ತಿಯಾಗಲಿ: ಬೆಂಗಳೂರಿನಲ್ಲಿ ರಹವಾಸಿಯಾಗಿರುವ ಸಿಂಡಕೇಟ್ ಬ್ಯಾಂಕಿನ ಉದ್ಯೋಗಿ ಜಾನಕಿಯು ತನ್ನ ಸಣ್ಣ ವಯಸ್ಸಿನಲ್ಲಿಯೇ ಆಕಸ್ಮಾತಕ್ಕಾಗಿ ತಮ್ಮ ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡು ಅಂಗವಿಕಲೆಯಾದರು. ನನ್ನ ಜೀವನದಲ್ಲಿ ಏಕೆ ಹೀಗಾಯಿತು? ಇನ್ನು ಮುಂದೆ ಏನು ಮಾಡುವುದು ಎಂದು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳದೇ ಏನನ್ನಾದರೂ ಮಹತ್ತರವಾದ ಸಾಧನೆಯನ್ನು ಮಾಡಬೇಕೆಂಬ ಮಹದಾಸೆ ಮತ್ತು ಮಹತ್ವಕಾಂಕ್ಷೆಯನ್ನು ಹೊಂದಿದ್ದಳು. ತನ್ನ ಜೀವನದಲ್ಲಿ ಆಡಿದ ವಿಧಿಯಾಟದ ನೆಪದಲ್ಲಿ ದುಃಖಿಸುತ್ತಾ ಮೂಲೆಯಲ್ಲಿ ಕುಳಿತುಕೊಂಡಳು ಅಂದುಕೊಂಡಿರಾ, ಖಂಡಿತಾ ಇಲ್ಲ. ಆಕೆಯಲ್ಲಿರುವ ದೃಢವಾದ ಆತ್ಮವಿಶ್ವಾಸ ಮತ್ತು ಸಾಧಿಸಬೇಕೆಂಬ ಛಲಗಾರಿಕೆಯೊಂದಿಗೆ ಕಿಂಚಿತ್ತೂ ವಿಚಲಿತಳಾಗದೇ ಸತತ ಪ್ರಯತ್ನ, ಕಠಿಣ ಪರಿಶ್ರಮ, ಸಕಾರಾತ್ಮಕ ಚಿಂತನೆ, ಹಿಡಿದ ಸಾಧಿಸಿಯೇ ತೀರುತ್ತೇನೆಂಬ ಅಚಲ ನಂಬಿಕೆಯಿಂದ ಅಂಗಲವಿಕಲ ಕ್ರೀಡೆಗಳಲ್ಲಿ ಸಕ್ರೀಯವಾಗಿ ಸ್ಪರ್ಧಾತ್ಮಕ ಮನೋಭಾವದೊಂದಿಗೆ ಭಾಗವಹಿಸಿದಳು.  

ಆಕೆಯ ಸಣ್ಣ ಸಣ್ಣ ಪ್ರಯತ್ನಗಳು, ಸಾಧನೆಗಳು ಆಕೆಯನ್ನು ಅಷ್ಟಕ್ಕೆ ಸಂತೃಪ್ತಿ ಪಡಿಸಲಿಲ್ಲ. ಜೀವನದಲ್ಲಿ ಯಾವುದಾದರೂ ಸಾಧನೆಗೈದು ಮಹತ್ತರವಾದ ಮೈಲಿಗಲ್ಲನ್ನು ಸ್ಥಾಪಿಸಬೇಕೆಂಬ ಏಕಮೇವ ಉದ್ದೇಶದಿಂದ ತನ್ನಲ್ಲಿರುವ ಆತ್ಮಬಲದೊಂದಿಗೆ ನಿರಂತರವಾಗಿ ಪ್ರಯತ್ನಶೀಲಳಾದಳು. ಅದಕ್ಕಾಗಿ ಸೂಕ್ತ ತರಬೇತಿ ಪಡೆದು, ನಿರಂತರ ಪರಿಶ್ರಮ ಮತ್ತು ದೃಢ ಸಂಕಲ್ಪದೊಂದಿಗೆ ಛಲದಂಕ ಮಲ್ಲನಂತೆ ಹಿಡಿದ ಸಾಧನೆಯ ಬೆನ್ನು ಹತ್ತಿ ಮುಂದೊಂದು ದಿನ ಆಕೆಯು ಜಗತ್ಪಸಿದ್ಧ ಇಂಗ್ಲೀಷ್ ಕಡಲ್ಗಾಲುವೆಯನ್ನು ಈಜಿದ ಮೊಟ್ಟ ಮೊದಲ ಭಾರತೀಯ ಅಂಗವಿಕಲತೆ ಎಂಬ ಹೆಗ್ಗಳಿಕೆಗೆ ಪಾತ್ರಳಾದಳು. ಪ್ರಯತ್ನಶೀಲತೆಗೆ ಅಂಗವಿಕಲೆ ಜಾನಕಿಯು ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದ್ದಾಳೆ. ಆಕೆಯು ದೈಹಿಕವಾಗಿ ಕುಂದುಹೋಗಿದ್ದರೂ ತನಗೇನು ಆಗಿಲ್ಲವೆಂಬ ಈಸಬೇಕು ಇದ್ದು ಜಯಿಸಬೇಕೆಂಬ ಗಾದೆಯಂತೆ, ನಾನು ಯಾವುದೇ ಸಾಧನೆ ಮಾಡಬಲ್ಲೆನೆಂಬ ಆತ್ಮವಿಶ್ವಾಸ ಆಕೆಯನ್ನು ಇಂಗ್ಲೀಷ್ ಕಡಲ್ಗಾಲುವೆಯನ್ನು ಈಜಿ ವಿಶ್ವದಾಖಲೆ ಮಾಡಿ ಹೆಸರುವಾಸಿಯಾದಳು. ಆದ್ದರಿಂದ ಆ ದೇವರು ನಮಗೆ ಎಲ್ಲವನ್ನು ದಯಪಾಲಿಸಿದರೂ ನನಗೆ ಅದಿಲ್ಲ, ಇದಿಲ್ಲ, ಆರ್ಥಿಕ ಪರಿಸ್ಥಿತಿಯಿಲ್ಲ, ಈಗ ಟೈಮ್ ಸರಿಯಾಗಿಲ್ಲ, ಹಣೆಬರಹ-ಅದೃಷ್ಟವನ್ನು ನಂಬಿ ಇಂದು ಬೇಡ ನಾಳೆ-ನಾಡಿದು ಮಾಡೋಣ ಎಂಬಂತೆ ಅಮೂಲ್ಯವಾದ ಸಮಯವನ್ನು ವೃಥಾ ಕಾಲಹರಣ ಮಾಡುತ್ತಾ ಬದುಕಿನಲ್ಲಿ ಏನನ್ನು ಸಾಧಿಸದೇ ಹಾಗೆಯೇ ಪಯಣವನ್ನು ಮುಗಿಸಿಬಿಡುತ್ತೇವೆ. ಅಂಗವಿಕಲೆಯಾಗಿದ್ದರೂ ಆಕೆಯು ಯಾವುದಕ್ಕೂ ಅಂಜದೇ ಅಳುಕದೇ, ನನ್ನ ಜೀವನದಲ್ಲಿ ಹೀಗಾಯಿತಲ್ಲ ಎಂದು ಚಿಂತಾಕ್ರಾಂತಳಾಗಿ ಕುಳಿತುಕೊಳ್ಳದೇ ಕೇವಲ ಸತತ ಪ್ರಯತ್ನ, ಕಠಿಣ ಪರಿಶ್ರಮ ಮತ್ತು ಸಾಧಿಸಬಲ್ಲನೆಂಬ ಆತ್ಮವಿಶ್ವಾಸವೇ ಶ್ರೇಷ್ಠವಾದ ಸಾಧನೆಗೈಯಲು ಸಹಕಾರಿಯಾಯಿತು ಎಂಬ ವಿಷಯವನ್ನು ನಾವೆಲ್ಲರೂ ಮನಗಾಣಬೇಕು.  

ಕೊನೆಯ ನುಡಿ: ಶ್ರೇಷ್ಠ ಆಂಗ್ಲ ಸಾಹಿತಿ ವಿಲಿಯಂ ಶೇಕ್ಸಪೀಯರ್ ಅವರು "ನಮ್ಮ ಹಣೆಬರಹವನ್ನು ನಿರ್ಧರಿಸುವ ಜವಾಬ್ದಾರಿ ನಕ್ಷತ್ರಗಳ ಮೇಲಿಲ್ಲ. ಅದು ನಮ್ಮ ಮೇಲೆ ಮತ್ತು ನಮ್ಮ ಪ್ರಯತ್ನಗಳ ಮೇಲೆ ಇರುತ್ತದೆ"ಎಂದು ಹೇಳಿದ್ದಾರೆ. ಆದ್ದರಿಂದ ನಾವು ಯಾವುದೇ ಕಾರ್ಯಸಾಧನೆ ಅಥವಾ ಗುರಿಯ ಬೆನ್ನತ್ತಿ ಹೊರಟಾಗ ಮೊದಲು ನಮ್ಮನ್ನು ನಾವು ನಂಬಬೇಕು. ಕೇವಲ ಯಶಸ್ಸು ಅಥವಾ ಸಾಧನೆಯ ಬಗ್ಗೆ ಚಿಂತಿಸಿದರೆ ಸಾಲದು. ಆ ಗುರಿಯ ಬೆನ್ನೇರಿ ಮಾಡುತ್ತಿರುವ ಸಣ್ಣ ಸಣ್ಣ ಒಂದೊಂದು ಪ್ರಯತ್ನ ನಮ್ಮನ್ನು ಗುರಿ ತಲುಪಲು ಪೂರಕವಾಗುತ್ತದೆ. ಆ ಪ್ರತಿಯೊಂದು ಪ್ರಯತ್ನ ಮುಂದೆ ನಮ್ಮನ್ನು ಸಾಧನೆಯ ಶಿಖರದ ಮುಟ್ಟಲು ಹೆಜ್ಜೆಯಾಗುತ್ತದೆ.  ಆ ಪ್ರಯತ್ನಶೀಲತೆಯೇ ಯಶಸ್ಸು ಅಥವಾ ಸಾಧನೆಗೊಂದು ಮೈಲಿಗಲ್ಲು ಆಗುತ್ತದೆ ಎಂದು ಹೇಳಬಹುದು. ಒಂದು ಸಲ ಸೋಲುಂಟಾದಾಗ ಕಾರಣವೇನೆಂದು ಸೂಕ್ಷ್ಮವಾಗಿ ನಮ್ಮನ್ನು ಪ್ರಶ್ನಿಸಿಕೊಂಡು ದೃಢವಾದ ಮತ್ತು ಎಚ್ಚರಿಕೆಯ ಹೆಜ್ಜೆಗಳನ್ನಿಟ್ಟು ಮತ್ತೆ ಪ್ರಯತ್ನಿಸಿ, ಮಗದೊಮ್ಮೆ ಪ್ರಯತ್ನಿಸಿ, ಮುಂದೊಂದು ದಿನ ಖಂಡಿತವಾಗಿ ನೀವು ಗೆಲುವೆಂಬ ಸಾಗರವನ್ನು ಈಜಬಲ್ಲಿರಿ ಮತ್ತು ಅದರಲ್ಲಿ ಜಯಶಾಲಿಗಳಾಗಬಲ್ಲಿರಿ. ಆದ್ದರಿಂದ ನಾವು ಮಾಡುವ ಕೆಲಸ-ಕಾರ್ಯಗಳ ನೆರವೇರಿಕೆಯಲ್ಲಿ ಅಥವಾ ಗುರಿ ಸಾಧನೆಯಲ್ಲಿ ನಮ್ಮಷ್ಷಕ್ಕೆ ನಾವು ಪ್ರಯತ್ನಿಸೋಣ. ನಮ್ಮ ಆ ಪ್ರಯತ್ನಶೀಲತೆಯೇ ನಮಗೊಂದು ಯಶಸ್ಸನ್ನು ತಂದು ಕೊಡುವುದರಲ್ಲಿ ಯಾವುದೇ ಸಂಶಯವಿಲ್ಲವೆನ್ನುವುದೇ ನನ್ನ ಆಭಿಮತ.