ಇನ್ನು ಮುಂದೆ ಹುಚ್ಚನ ರೀತಿ ಆಡಲ್ಲ, ನನ್ನನ್ನು ಕ್ಷಮಿಸಿ: ಹುಚ್ಚ ವೆಂಕಟ್

maniac Venkat

ಬೆಂಗಳೂರು, ನ.30-ಈ ಹಿಂದೆ ಹಲವು ತಪ್ಪುಗಳನ್ನು ತಿಳಿದೋ ತಿಳಿಯದೆಯೋ ಮಾಡಿದ್ದೇನೆ, ಇನ್ನು ಮುಂದೆ ಹುಚ್ಚನ ರೀತಿ ಆಡಲ್ಲ. ಯಾರ ಜತೆಯೂ ಗಲಾಟೆ ಮಾಡಿಕೊಳ್ಳುವುದಿಲ್ಲ. ನನ್ನನ್ನು ಕ್ಷಮಿಸಿ ಎಂದು ಚಿತ್ರನಟ ಹುಚ್ಚ ವೆಂಕಟ್ ಮನವಿ ಮಾಡಿದ್ದಾರೆ. 

ಪ್ರೆಸ್‍ಕ್ಲಬ್‍ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ಕಡೆಗಳಲ್ಲಿ ಜಗಳ ಆದ ನಂತರ ಜನ ನನ್ನ ಹತ್ತಿರ ಬರಲು ಹೆದರುತ್ತಿದ್ದಾರೆ. ಇದು ನನ್ನ ಮನಸ್ಸಿಗೆ  ತುಂಬಾ ನೋವುಂಟು ಮಾಡಿದೆ. ಯಾರೊಂದಿಗೆ ಗಲಾಟೆ ಮಾಡಿಕೊಳ್ಳುವುದಿಲ್ಲ. ಶೂಟಿಂಗ್ ಗೆ ಹೋದ ವೇಳೆ ಕೆಲ ದುರ್ಘಟನೆಗಳು ನಡೆದಿದ್ದರಿಂದ ಈ ಹಿಂದೆ ಗಲಾಟೆ ಮಾಡಿದೆ. ಅಪ್ಪನ ದುಡ್ಡು ಹಾಳು ಮಾಡಿ, ಆರ್ಥಿಕವಾಗಿ ಸಂಕಷ್ಟದಲ್ಲಿದ್ದೇನೆ. ಇನ್ನು ಮೇಲೆ ಸಂಪಾದನೆ ಮಾಡಿ ಸ್ವಾವಲಂಬಿ ಬದುಕು ಸಾಗಿಸುತ್ತೇನೆ ಎಂದರು. 

ಈ ಹಿಂದೆ ನನ್ನೊಂದಿಗೆ ಸೆಲಿ ತೆಗೆದುಕೊಳ್ಳಲು ಅಭಿಮಾನಿಗಳು ಸದಾ ಹುರುಪಿನಿಂದ ಬರುತ್ತಿದ್ದರು. ಈಗವರು ಹೆದರುತ್ತಿದ್ದಾರೆ. ನನ್ನ ಬಳಿ ಬಂದರೆ ನಾನು ಹಲ್ಲೆ ಮಾಡಬಹುದು ಎನ್ನುವ ಹೆದರಿಕೆ ಇದೆ. ಹೀಗೆ ಮಾತನಾಡಿಕೊಳ್ಳುವುದನ್ನು ನಾನು ಕೇಳಿದ್ದೇನೆ. ಈ ಹಿಂದೆ ತಪ್ಪು ಮಾಡಿದವರನ್ನು ನೋಡಿದರೆ ಕೋಪ ಬರುತ್ತಿತ್ತು. ಈಗ ಯಾರ ಮೇಲೆಯೂ ಕೋಪವಿಲ್ಲ. ಬಿಗ್‍ಬಾಸ್ ಮನೆಗೆ ಪ್ರವೇಶ ನೀಡಿದರೆ ಗೆಸ್ಟ್ ಆಗಿ ಹೋಗಿ ಬರುತ್ತೇನೆ. ಒಂದು ದಿನ ಅಥವಾ ಒಂದು ಗಂಟೆಯ ಅವಕಾಶ ನೀಡಿದರೆ, ಸ್ಪರ್ಧಿಗಳಿಗೆಲ್ಲ ಶುಭಾಶಯ ತಿಳಿಸುತ್ತೇನೆ ಎಂದು ಹೇಳಿದರು.

ಸಿನಿಮಾದಲ್ಲಿ ಅತಿಥಿ ಪಾತ್ರ ಅಥವಾ ಯಾವುದಾದರೂ ರಿಯಾಲಿಟಿ ಶೋ ಇದ್ದರೂ ಕೆಲಸ ಮಾಡುತ್ತೇನೆ. ಹಳೆಯ ಹುಚ್ಚ ವೆಂಕಟ್‍ನನ್ನು ಮರೆತು ಬಿಡಿ. ನಾನು ಬದಲಾಗಿದ್ದು, ಎಲ್ಲ ಘಟನೆಗಳು ನಡೆದಿದ್ದು ಆಕಸ್ಮಿಕ. ಸಿನಿಮಾ ನಿರ್ಮಿಸಲು ಅಪ್ಪ ದುಡ್ಡು ಕೊಡುವುದಾಗಿ ತಿಳಿಸಿದ್ದರು. ಈಗ  ಕೊಡುವುದಿಲ್ಲ ಎನ್ನುತ್ತಿದ್ದಾರೆ. ಇನ್ನು ಮುಂದೆ ಯಾವುದೇ ಖಾಸಗಿ ಕಾರ್ಯಕ್ರಮ, ಮದುವೆಗಳು ಬಂದರೂ ಬರುತ್ತೇನೆ. ನಾನು ಈಗ ಮಾನಸಿಕವಾಗಿ ಮತ್ತು ದೈಹಿಕವಾಗಿಯೂ ಫಿಟ್ ಆಗಿದ್ದೇನೆ. ಜನರ ಪ್ರೀತಿಗಾಗಿ ನಾನು ಕೆಲಸ ಮಾಡಿಕೊಂಡು ಬಂದಿದ್ದೇನೆ. ಸಮಾಜ ನನ್ನನ್ನು ಸ್ವೀಕರಿಸಿದರೆ, ಮತ್ತೆ ನಿಂತಿರುವ ಸಿನಿಮಾಗಳನ್ನು ಪುನರಾರಂಭಿಸುತ್ತೇನೆ ಎಂದು ಹುಚ್ಚಾ ವೆಂಕಟ್ ಹೇಳಿದರು