ಮಾನವ ಕಳ್ಳಸಾಗಣೆ ವ್ಯವಸ್ಥೆಯ ವಿರುದ್ಧ ಹೋರಾಡುವ ಅಗತ್ಯವಿದೆ: ಪ್ರಧಾನಿ ನರೇಂದ್ರ ಮೋದಿ

Need to fight human trafficking system: PM Narendra Modi

ವಾಷಿಂಗ್ಟನ್ 14: ಯಾರಾದರೂ ಅಕ್ರಮವಾಗಿ ಬೇರೆ ದೇಶಕ್ಕೆ ಪ್ರವೇಶಿಸಿ ವಾಸಿಸುತ್ತಿದ್ದರೆ, ಅವರಿಗೆ ಆ ದೇಶದಲ್ಲಿ ವಾಸಿಸಲು ಯಾವುದೇ ಕಾನೂನುಬದ್ಧ ಹಕ್ಕು ಅಥವಾ ಅಧಿಕಾರವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅಕ್ರಮ ವಲಸೆ ವಿಷಯದ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಇದು ಕೇವಲ ಭಾರತದ ಪ್ರಶ್ನೆಯಲ್ಲ, ಜಾಗತಿಕ ಸಮಸ್ಯೆಯಾಗಿದೆ ಎಂದರು.

ದೊಡ್ಡ ದೊಡ್ಡ ಕನಸುಗಳು ಮತ್ತು ಭರವಸೆಗಳೊಂದಿಗೆ ಸಾಮಾನ್ಯ ಕುಟುಂಬಗಳ ಜನರನ್ನು ಅಕ್ರಮವಾಗಿ ಇತರ ದೇಶಗಳಿಗೆ ಕರೆತರುವ "ಮಾನವ ಕಳ್ಳಸಾಗಣೆ ವ್ಯವಸ್ಥೆ"ಯ ವಿರುದ್ಧ ಹೋರಾಡುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಾದಿಸಿದ್ದಾರೆ.

ಭಾರತ ಮತ್ತು ಅಮೆರಿಕಕ್ಕೆ ಸಂಬಂಧಿಸಿದಂತೆ,  ಅಮೆರಿಕದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ  ಭಾರತೀಯ ನಾಗರಿಕರನ್ನು ಭಾರತವು ಮರಳಿ ಸ್ವೀಕರಿಸಲು ಸಿದ್ಧವಾಗಿದೆ ಎಂದು ನಾವು ಯಾವಾಗಲೂ ಹೇಳಿದ್ದೇವೆ" ಎಂದು ಮೋದಿ ತಿಳಿಸಿದರು.

ಮಾನವ ಕಳ್ಳಸಾಗಣೆ ಕೊನೆಗೊಳಿಸಲು ಮತ್ತು ತೆಗೆದುಹಾಕಲು ನಾವು ಒಟ್ಟಾಗಿ ಈ ಸಂಪೂರ್ಣ ವ್ಯವಸ್ಥೆಯನ್ನು ಬೇರುಸಹಿತ ಕಿತ್ತುಹಾಕಿ ನಾಶಪಡಿಸುವುದು ಅಮೆರಿಕ ಮತ್ತು ಭಾರತದ ಪ್ರಯತ್ನವಾಗಿದ್ದು, ಇದು ಹಾಗೆಯೇ ಇರಬೇಕು ಎಂದರು.

ಎಲ್ಲವನ್ನೂ ಮಾರಾಟ ಮಾಡಿ ಬರುವ ಬಡ ಜನರಿಗೆ ಅನ್ಯಾಯವಾಗಿದೆ. ಅವರನ್ನು ದೊಡ್ಡ ದೊಡ್ಡ ಕನಸುಗಳನ್ನು ತೋರಿಸಿ ಅಕ್ರಮ ವಲಸಿಗರನ್ನಾಗಿ ಬೇರೆ ದೇಶಕ್ಕೆ ಕರೆತರಲಾಗುತ್ತದೆ. ನಮ್ಮ ಹೋರಾಟ ಈ ವ್ಯವಸ್ಥೆಯ ವಿರುದ್ಧವಾಗಿದೆ ಮತ್ತು ಅಧ್ಯಕ್ಷ ಟ್ರಂಪ್ ಕೂಡ ಈ ವ್ಯವಸ್ಥೆಯನ್ನು ಕೊನೆಗೊಳಿಸುವಲ್ಲಿ ಭಾರತಕ್ಕೆ ಸಂಪೂರ್ಣವಾಗಿ ಬೆಂಬಲಿಸುತ್ತಾರೆ ಎಂದು ನನಗೆ ವಿಶ್ವಾಸವಿದೆ ಎಂದರು.