ರಾಯಬಾಗ 01: ದೇಶದ ಎಲ್ಲ ಜನರು ಸಮಾನರು ಎನ್ನುವ ಭಾವನೆ ಮೂಡಿಸುವ ದೃಷ್ಠಿಯಿಂದ ಜಮ್ಮುಕಾಶ್ಮೀರದಲ್ಲಿದ್ದ 370ನೇ ವಿಧಿಯನ್ನು ಬಿಜೆಪಿ ಸರ್ಕಾರ ರದ್ದುಗೊಳಿಸಿ ಐತಿಹಾಸಿಕ ಕ್ರಮ ಕೈಗೊಂಡಿದೆ ಎಂದು ಮಾಜಿ ಶಾಸಕ ಸಂಜಯ ಪಾಟೀಲ ಹೇಳಿದರು.
ಸೋಮವಾರ ಪಟ್ಟಣದ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆ ಸಭಾಭವನದಲ್ಲಿ ಬಿಜೆಪಿ ರಾಯಬಾಗ ಮಂಡಲದಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಏಕತಾ ಅಭಿಯಾನದ ಒಂದು ದೇಶ ಒಂದು ಸಂವಿಧಾನ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 370ನೇ ವಿಧಿ ರದ್ದತಿಯಿಂದ ಜಮ್ಮುಕಾಶ್ಮೀರದಲ್ಲಿ ಯಾವುದೇ ರಕ್ತಪಾತವಾಗದೇ ಶಾಂತಿ ನೆಲೆಸಿದೆ. 72 ವರ್ಷಗಳ ಕಾಲ ನರಕಯಾತನೆ ಅನುಭವಿಸುತ್ತಿದ್ದ ಅಲ್ಲಿನ ಜನರು ಇಂದು ನೆಮ್ಮದಿಯಿಂದ ಬಾಳುತ್ತಿದ್ದಾರೆಂದು ತಿಳಿಸಿದರು.
ಕಾಂಗ್ರೇಸ್ ಪಕ್ಷದ ನೀತಿಗಳನ್ನು ಮತ್ತು ಮೊದಲ ಪ್ರಧಾನಿ ನೆಹರೂ ಅವರ ಧೋರಣೆಗಳನ್ನು ತೀವ್ರವಾಗಿ ಖಂಡಿಸಿದರು. ಇಲ್ಲಿಯ ನೆಲ,ಜಲ,ಅನ್ನ,ಆಹಾರ ಉಪಯೋಗಿಸಿಕೊಂಡು ಪಾಕಿಸ್ತಾನಕ್ಕೆ ಜೈ ಅನ್ನುವರು ದೇಶ ದ್ರೋಹಿಗಳು. ದೇಶಕ್ಕಾಗಿ ಪ್ರಾಣ ನೀಡುವರು ದೇಶಭಕ್ತರು ಎಂದರು. ಸಧ್ಯದಲ್ಲಿಯೇ ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಮಡಿಲು ಸೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ಡಿ.ಎಮ್.ಐಹೊಳೆ ಮಾತನಾಡಿ, ಸಂವಿಧಾನದ 370ನೇ ವಿಧಿ ರದ್ದತಿಯಿಂದ ದೇಶಕ್ಕೆ ಈಗ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿದೆ. ಇದರ ಬಗ್ಗೆ ಬಿಜೆಪಿ ಕಾರ್ಯಕರ್ತರು ಪ್ರತಿ ಗ್ರಾಮಕ್ಕೆ ಭೇಟಿ ನೀಡಿ 370ನೇ ವಿಧಿ ರದ್ದತಿ ಕುರಿತು ಮನವರಿಕೆ ಮಾಡಿಸಬೇಕೆಂದು ಕರೆ ನೀಡಿದರು.
ಚಿಕ್ಕೋಡಿ ಬಿಜೆಪಿ ಜಿಲ್ಲಾ ಅಧ್ಯಕ್ಷ, ಮಾಜಿ ಸಚಿವ ಶಶಿಕಾಂತ ನಾಯಿಕ ಮಾತನಾಡಿ, ಅ.2 ರಂದು ಮಹಾತ್ಮಾ ಗಾಂಧೀಜಿಯವರ 150ನೇ ಜಯಂತಿ ಅಂಗವಾಗಿ ಬಯಲು ಶೌಚ ನಿರ್ಮೂಲನೆ, ಸ್ವಚ್ಛ ಭಾರತ, ಪ್ಲಾಸ್ಟಿಕ್ ಮುಕ್ತ ಭಾರತ ಬಗ್ಗೆ ಅರಿವು ಮೂಡುಸಲು ಚಿಕ್ಕೋಡಿ ಲೋಕಸಭೆ ಮತಕ್ಷೇತ್ರದಾದ್ಯಂತ ನಡೆಯುವ ಪಾದಯಾತ್ರೆ ಅಭಿಯಾನಕ್ಕೆ ಯಕ್ಸಂಬಾದಲ್ಲಿ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಅವರು ಚಾಲನೆ ನೀಡಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಭಾಗವಹಿಸಬೇಕೆಂದು ಮನವಿ ಮಾಡಿಕೊಂಡರು.
ರಾಯಬಾಗ ಬಿಜೆಪಿ ಮಂಡಲ ಅಧ್ಯಕ್ಷ ಸದಾನಂದ ಹಳಿಂಗಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಸರಕಾರವಿದ್ದು, ಬೆಳಗಾವಿಯವರೇ ಆದ ಸುರೇಶ ಅಂಗಡಿಯವರು ರಾಜ್ಯ ರೈಲ್ವೆ ಸಚಿವರಾಗಿದ್ದರಿಂದ ರಾಯಬಾಗ ರೈಲ್ವೆ ಸ್ಟೇಷನ್ದಲ್ಲಿ ಪಟ್ಟಣದ ನಾಗರೀಕರ ಬಹುದಿನಗಳ ಬೇಡಿಕೆಯಾದ ಚಾಲುಕ್ಯ ಎಕ್ಸಪ್ರೇಸ್(ದಾದರ) ಮತ್ತು ಲೋಕಮಾನ್ಯ ತಿಲಕ ಎಕ್ಸಪ್ರೇಸ್ (ಎಲ್ಟಿಟಿ) ರೈಲುಗಳನ್ನು ನಿಲ್ಲಿಸಬೇಕೆಂದು ಮನವಿ ಮಾಡಿಕೊಂಡರು.
ಚಿಕ್ಕೋಡಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ದುಂಡಪ್ಪ ಭೆಂಡವಾಡೆ, ಉಪಾಧ್ಯಕ್ಷ ಅಣ್ಣಾಸಾಬ ಖೆಮಲಾಪೂರೆ, ಅಪ್ಪಾಸಾಬ ಬ್ಯಾಕೂಡೆ, ರಾಯಬಾಗ ಮಂಡಲ ಅಧ್ಯಕ್ಷ ಸದಾನಂದ ಹಳಿಂಗಳಿ, ರಾಜಶೇಖರ ಖನದಾಳೆ, ಬಸರಾಜ ಡೋಣವಾಡೆ, ಸದಾಶಿವ ಘೋರ್ಪಡೆ, ಮಹಾದೇವ ಗದಾಡೆ, ವಿ.ಎಸ್.ಪೂಜಾರಿ, ಶಶಿಕಾಂತ ಮಾಳಿ, ಜಿ.ಪಂ.ಸದಸ್ಯ ನಿಂಗಪ್ಪ ಪಕಾಂಡಿ, ಅನೀಲ ಹಂಜೆ, ಅಂಕುಶ ಜಾಧವ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.