ಬಳ್ಳಾರಿ 17: ಕಡು ಬಡತನದ ಕುಟುಂಬಗಳಿಗೆ ಸರ್ಕಾರದ ಯೋಜನೆಗಳ ಮಾಹಿತಿ ನೀಡಿ ಅವರ ಜೀವನೋಪಾಯವನ್ನು ಸುಧಾರಿಸಿ ಬಡತನದಿಂದ ಹೊರಬರುವಂತೆ ಮಾಡುವುದು ನಾರಿ-ಕಿಲ್ಪ್ ಯೋಜನೆಯ ಉದ್ದೇಶವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರಿಸ್ ಸುಮೈರ್ ಅವರು ಹೇಳಿದರು.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಂಜೀವಿನಿ-ಕೆಎಸ್‌ಆರ್‌ಎಲ್‌ಪಿಎಸ್ ಅಭಿಯಾನದಡಿ ನಾರಿ-ಕಿಲ್ಪ್ ಯೋಜನೆಯ ಕುರಿತು ಸ್ವಸಹಾಯ ಗುಂಪಿನ ಮಹಿಳೆಯರಿಗೆ ಜಿಲ್ಲಾ ಪಂಚಾಯತ್‌ನ ಜಿಲ್ಲಾ ಸಂಪನ್ಮೂಲ ಕೇಂದ್ರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ನಾಲ್ಕು ದಿನಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಾರಿ-ಕಿಲ್ಪ್ ಕಾರ್ಯಕ್ರಮವನ್ನು ಮೊದಲ ಹಂತದಲ್ಲಿ ಜಿಲ್ಲೆಯ 2 ತಾಲ್ಲೂಕುಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಇದರಲ್ಲಿ ಅತೀ ಬಡವರನ್ನು ಗುರಿಯಾಗಿಸಿ, ಅಂತಹ ಕುಟುಂಬಗಳ ಗುರುತಿಸುವಿಕೆಗೆ ಸಂಬಂಧಿಸಿದ ಚಟುವಟಿಕೆಗಳನ್ನು (ಪಿಆರ್‌ಎ ಮನೆ-ಮನೆ ಸಮೀಕ್ಷೆ) ಕೈಗೊಳ್ಳಲು ಪ್ರತಿ ಗ್ರಾಮ ಪಂಚಾಯತಿಗೆ ಇಬ್ಬರಂತೆ ಸ್ವ-ಸಹಾಯ ಸಂಘದ ಸದಸ್ಯರನ್ನು ಆಯ್ಕೆ ಮಾಡಿ ಅವರಿಗೆ 4 ದಿನಗಳ ಕ್ಷೇತ್ರ ಭೇಟಿ ಒಳಗೊಂಡಂತೆ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು.
ಕಡುಬಡತನದ ಕುರಿತು ಸರಿಯಾದ ಕ್ರಮದಲ್ಲಿ ಮಹಿಳಾ ಸಮೀಕ್ಷೆದಾರರು ತರಬೇತಿ ಪಡೆದು ಅತ್ಯಂತ ದುರ್ಬಲ ಕುಟುಂಬಗಳ ಸಮೀಕ್ಷೆ ಮಾಡಿ ಸರ್ಕಾರಕ್ಕೆ ಮಾಹಿತಿ ನೀಡಿದರೆ ನಾರಿ-ಕಿಲ್ಪ್ ಯೋಜನೆಯ ಅನುಷ್ಠಾನ ಪ್ರಯೋಜನವಾಗುವುದು ಎಂದು ಮಹಿಳಾ ತರಬೇತಿ ಗಣತಿದಾರರಿಗೆ ತಿಳಿಸಿದರು.
ಜಿಲ್ಲೆಯ 2 ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯತಿಯಿಂದ ಇಬ್ಬರಂತೆ ಸ್ವ-ಸಹಾಯ ಗುಂಪಿನ ಮಹಿಳೆಯರಿಗೆ ತರಬೇತಿ ನೀಡಲಾಗಿದೆ ಎಂದರು.
ನಾರಿ-ಕಿಲ್ಪ್‌ನ ಡಿಆರ್‌ಡಿಎ ಯೋಜನಾ ನಿರ್ದೇಶಕರು ಯೋಜನೆಯ ಉದ್ದೇಶಗಳು, ಗುರಿಗಳ ಕುರಿತು ಮಾತನಾಡಿದರು.
ಜಿಪಂ ಉಪಕಾರ್ಯದರ್ಶಿ ಗಿರಿಜಾ ಶಂಕರ್, ಜಿಪಂ ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ, ಕರ್ನಾಟಕ ಅಂತರ್ಗತ ಜೀವನೋಪಾಯ ಕಾರ್ಯಕ್ರಮ ಅಧಿಕಾರಿ ಮೇಡಂಲಿಸ್ಸಿ, ಎನ್‌ಆರ್‌ಎಲ್‌ಎಂ ಜಿಲ್ಲಾ ವ್ಯವಸ್ಥಾಪಕ ವಿಜಯಕುಮಾರ್, ಎನ್‌ಎಆರ್‌ಐ-ಕೆಐಎಲ್‌ಪಿ ಜಿಲ್ಲಾ ಸಂಯೋಜಕ ವೀರಣ್ಣ.ಕೆ., ಕಂಪ್ಲಿಯ ಡಿಆರ್‌ಪಿ ದ್ರಾಕ್ಷಾಯಿಣಿ ಹಾಗೂ ಕುರುಗೋಡು ತಾಲ್ಲೂಕು ಸಂಯೋಜಕರು ಹಾಜರಿದ್ದರು.