ಬೆಂಗಳೂರು 15: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವು ಬೆಲೆ ಏರಿಕೆಯ ಗ್ಯಾರಂಟಿಯನ್ನು ಬಹಳ ಯಶಸ್ವಿಯಾಗಿ ಜಾರಿಗೊಳಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ವ್ಯಂಗ್ಯವಾಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಡಿನ ಜನತೆಗೆ ಬಣ್ಣದ ಹಬ್ಬ ಹೋಳಿಯ ಶುಭಾಶಯ ಕೋರಿದರು. ನಾಡಿನ ಬೆನ್ನೆಲುಬಾದ ರೈತರ ಬದುಕು ಹಸನಾಗಲಿ, ಎಲ್ಲ ಜನತೆಗೆ ಒಳಿತಾಗಲಿ ಎಂದು ಹಾರೈಸಿದರು.
ಬಳಿಕ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಈ ಸರ್ಕಾರ ಬೆಲೆ ಏರಿಕೆಯನ್ನು ನಿರಂತರವಾಗಿ ನೀಡುತ್ತಿದೆ. ವಿದ್ಯುತ್ ದರ, ಸ್ಟಾಂಪ್ ಡ್ಯೂಟಿ ಹೆಚ್ಚಿಸಿದ್ದಾರೆ. ನೀರಿನ ದರ ಎರಡನೇ ಬಾರಿಗೆ ಹೆಚ್ಚಿಸಲು ಹೊರಟಿದ್ದಾರೆ. ಬಜೆಟ್ ಮೇಲೆ ಈ ವಿಷಯಗಳ ಕುರಿತು ಚರ್ಚಿಸಲಿದ್ದೇವೆ. ರಾಜ್ಯದ ಬಜೆಟ್ ಕುರಿತು ಅಧಿವೇಶನದಲ್ಲಿ ಚರ್ಚೆ ಆರಂಭವಾಗಿದೆ. ನಾನು ಕೂಡ ಬಜೆಟ್ ಬಗ್ಗೆ ಚರ್ಚೆ ಆರಂಭಿಸಿದಾಗ ಆಡಳಿತ ಪಕ್ಷದ ಸದಸ್ಯರು, ಅಧಿಕಾರಿಗಳು ಇರಲಿಲ್ಲ, ಹಾಗಾಗಿ ಮಾತು ಮೊಟಕುಗೊಳಿಸಿದೆ. ಸೋಮವಾರ ಅಥವಾ ಮಂಗಳವಾರ ಮಾತನಾಡಲಿದ್ದೇನೆ ಎಂದು ಹೇಳಿದರು.
ಒಂದೆಡೆ ರಾಜ್ಯ ಅಭಿವೃದ್ಧಿ ಶೂನ್ಯವಾಗಿದೆ. ಇನ್ನೊಂದೆಡೆ ಬೆಲೆ ಏರಿಕೆಯಿಂದ ರಾಜ್ಯದ ಜನರು ತತ್ತರಿಸಿ ಹೋಗಿದ್ದಾರೆ. ನಾಡಿನ ಜನರ, ಕೃಷಿಕರ, ಬಡವರ ಕಣ್ಣೀರನ್ನು ಒರೆಸಬೇಕಿದ್ದ ಬಜೆಟ್, ಆ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.