ಭ್ರಷ್ಟಾಚಾರ ಆರೋಪ: ಪಿಡಿಒ ವಿರುದ್ಧ ಕ್ರಮಕ್ಕೆ ಆಗ್ರಹ

Corruption allegations: Demand for action against PDO

ಭ್ರಷ್ಟಾಚಾರ ಆರೋಪ: ಪಿಡಿಒ ವಿರುದ್ಧ ಕ್ರಮಕ್ಕೆ ಆಗ್ರಹ  

ದೇವರಹಿಪ್ಪರಗಿ 17: ತಾಲೂಕಿನ ಹರನಾಳ ಗ್ರಾಮ ಪಂಚಾಯಿತಿ ಪಿಡಿಒ ವಿರುದ್ಧ 15ನೇ ಹಣಕಾಸು ಹಾಗೂ ಪ್ರವರ್ಗ-1 ವಸೂಲಿ ಆದ ಹಣ ರೂ. 19.22 ಲಕ್ಷ ಭ್ರಷ್ಟಾಚಾರ ಮಾಡಿ ದುರುಪಯೋಗ ಮಾಡಿಕೊಂಡಿದ್ದಾರೆ. ಸೂಕ್ತ ತನಿಖೆ ನಡೆಸಿ ಪಿಡಿಒ ವಿರುದ್ಧ ಕ್ರಮಕ್ಯಗೊಳ್ಳಬೇಕೆಂದು ವಿಜಯಪುರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಗ್ರಾಪಂ ಅಧ್ಯಕ್ಷ ಹಾಗೂ ಸದಸ್ಯರು ಮನವಿ ಸಲ್ಲಿಸಿದ್ದಾರೆ.  

ಇತ್ತೀಚಿಗೆ ತಾಲೂಕಿನ ಹರನಾಳ ಗ್ರಾಪಂ ನೂತನ ಅಧ್ಯಕ್ಷ ಶಿವಾನಂದ ಯಾದಗಿರಿ ಹಾಗೂ 9 ಜನ ಸದಸ್ಯರು ಮೊದಲಿನ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಿದ್ದರು. ನಂತರ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದು. ಅವಿಶ್ವಾಸ ಗೊತ್ತುವಳಿ ಹಾಗೂ ನೂತನ ಅಧ್ಯಕ್ಷರ ಆಯ್ಕೆಯ ನಡುವೆ ಸುಮಾರು 19,22,800ರೂ ಹಣ ಯಾವುದೇ ಸದಸ್ಯರಿಗೆ ಮಾಹಿತಿ ತಿಳಿಸದೆ ಅಧ್ಯಕ್ಷರು ಹಾಗೂ ಪಿಡಿಒ ಗ್ರಾಮದ ಅಭಿವೃದ್ಧಿಗೆ ಬಂದ ಸರ್ಕಾರದ ಹಣವನ್ನ ದುರುಪಯೋಗ ಮಾಡಿದ್ದಾರೆ. ಈ ಕುರಿತು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಾಗೂ ದೇವರಹಿಪ್ಪರಗಿ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿ ತನಿಖೆಗೆ ಆಗ್ರಹಿಸಿದ್ದೇವೆ. ತಾಪಂ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸದ ಕಾರಣ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕೂಡಲೆ ಸೂಕ್ತ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಸೇವೆಯಿಂದ ವಜಾ ಮಾಡಬೇಕು, ಸರ್ಕಾರದ ಹಣವನ್ನು ವಾಪಸ್ ಪಡೆಯಲು ಆದೇಶ ನೀಡಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.  

ಗ್ರಾ.ಪಂ ಅಧ್ಯಕ್ಷ ಶಿವಾನಂದ ಯಾತಗೇರಿ, ಸದಸ್ಯರುಗಳಾದ ವಿಜಯಲಕ್ಷ್ಮಿ ಬಿರಾದಾರ, ದುಂಡಮ್ಮ ಹದ್ನೂರ, ಸುಷ್ಮಾ ಸಾರವಾಡ, ಸುಜ್ಞಾನಿ ಪೂಜಾರಿ, ಸೀತಾ ನಾಯ್ಕೋಡಿ, ಸೋಮವ್ವ ರತ್ನಾಕರ, ಸಿದ್ದಪ್ಪ ಹೀರೆಕುರುಬರ, ಸುರೇಶ ಅಂಬಳನೂರ, ಭೀಮಪ್ಪ ಭಂಡಾರಿ ಸೇರಿದಂತೆ ಗ್ರಾಮದ ಪ್ರಮುಖರು ಇತರರು ಉಪಸ್ಥಿತರಿದ್ದರು.