ಶಿವರಾತ್ರಿ ಅಂಗವಾಗಿ ನಡೆದ ಪುರಾಣ ಪ್ರವಚನದ ಕಾರ್ಯಕ್ರಮ

ಲೋಕದರ್ಶನವರದಿ

ಶಿಗ್ಗಾವಿ೧೨೮: ಇಂದಿನ ಬದಲಾದ ದಿನಗಳಲ್ಲಿ ಸಂಪ್ರದಾಯ, ಸಂಸ್ಕೃತಿಗಳು ನಶಿಸುತ್ತಿವೆ. ಕೃಷಿ ಚಟುವಟಿಕೆಗಳಲ್ಲಿ ಇಳಿಮುಖ ಕಾಣುತ್ತಿದ್ದೇವೆ. ಆದರೆ ಇಂತಹ  ಮಠಗಳು ನಿತ್ಯ ಅನ್ನಪ್ರಸಾದ, ಜ್ಞಾನದಾಸೋಹ ಮಾಡುವದರೊಂದಿಗೆ ಭಾರತೀಯ ಮೂಲ ಸಂಸ್ಕೃತಿ, ಸಂಸ್ಕಾರಗಳನ್ನು ಉಳಿಸಿ ಬೆಳೆಸುವ  ಜೊತೆಗೆ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಪ್ರಜಾವಾಣಿ ಹುಬ್ಬಳ್ಳಿ ಕಚೇರಿ ಮುಖ್ಯ ಉಪಸಂಪಾದಕಿ ವಿಶಾಲಾಕ್ಷಿ ಅಕ್ಕಿ ಹೇಳಿದರು.

        ತಾಲೂಕಿನ ಗಂಜೀಗಟ್ಟಿಮಠದಲ್ಲಿ ಬುಧವಾರ ಶಿವರಾತ್ರಿ ಅಂಗವಾಗಿ ನಡೆದ ಪುರಾಣ ಪ್ರವಚನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮಠಮಂದಿರಗಳು ಮನುಷ್ಯನ ಜ್ಞಾನ ವಿಕಾಸಗೊಳಿಸುವ ಮೂಲಕ ಬುದ್ಧಿ, ಭಾವ ಹಾಗೂ ಬದುಕನ್ನು ಸದೃಢಗೊಳಿಸುವ ಕಾಯಕದಲ್ಲಿ  ಪರಂಪರಾಗತವಾಗಿ ಶ್ರಮಿಸುತ್ತಿವೆ ಎಂದರು.

         ಮಕ್ಕಳಿಗೆ ಸಜ್ಜನರ ಸಂಘ ಕಲ್ಪಿಸಿ, ಅವರಲ್ಲಿನ ಪ್ರತಿಭೆ ಗುರುತಿಸಿ ವೇದಿಕೆ ಅವಕಾಶ ನೀಡುವುದು. ಶಿಕ್ಷಣದೊಂದಿಗೆ ಆಧ್ಯಾತ್ಮಿಕ ಜ್ಞಾನ  ನೀಡುವುದು ಸೇರಿದಂತೆ ನೀತಿ ಶಿಕ್ಷಣದಿಂದ ಬದುಕು ಗಟ್ಟಿಗೊಳಿಸುವ ಕಾರ್ಯವನ್ನು ಶ್ರೀಗಳು ಮಾಡುತ್ತಾ ಬಂದಿದ್ದಾರೆ. ಶಾಲೆ ರಜೆ ನೀಡಿದ್ದಾಗ  ಶಿಗ್ಗಾವಿಯಿಂದ ಗಂಜೀಗಟ್ಟಿಗೆ ಪಾದಯಾತ್ರೆ ಮೂಲಕ ಬಂದು ಇಲ್ಲಿ ನಡೆಯುವ ಸತ್ಸಂಗದಲ್ಲಿ ಪಾಲ್ಗೊಂಡು ಜ್ಞಾನ ಸವಿಯುವ ಬಾಲ್ಯದ  ನೆನಪುಗಳನ್ನು ಅವರು ಸ್ಮರಿಸಿದರು. 

      ಗಂಜೀಗಟ್ಟಿಮಠ ವೈಜಿನಾಥ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸಕಲ ಜೀವರಾಶಿಗಳಲ್ಲಿ ಮನುಕುಲ ಉನ್ನತ  ಸ್ಥಾನ ಹೊಂದಿದ್ದು, ಧರ್ಮದ ತಳಹದಿ ಮೇಲೆ ನಡೆಯುವ ಮೂಲಕ ಬದುಕನ್ನು ಪಾವನ ಮಾಡಿಕೊಳ್ಳಬೇಕು. ಸಕಾರಾತ್ಮಕ ಚಿಂತನೆಗಳನ್ನು  ಬೆಳೆಸಿಕೊಳ್ಳುವ ಮೂಲಕ ಪರೋಕಕಾರ್ಯಕ್ಕೆ ಮುಂದಾಗಬೇಕು ಎಂದರು.

     ಡಾ.ಪುಟ್ಟರಾಜ ಕವಿಗವಾಯಿಗಳ ಶಿಷ್ಯರಾದ ಕುಬೇಂದ್ರ ಶಾಸ್ತಿ, ಮಹಾಂತೇಶ ಹೊಸಮನಿ ಅವರಿಂದ ಪ್ರವಚನ ನಡೆಯಿತು. ಪತ್ರಕರ್ತರಾದ ವಿನಯ ಹುರಳಿಕೊಪ್ಪಿ, ಎಂ.ವಿ.ಗಾಡದ, ಬಿಎಸ್.ಹಿರೇಮಠ, ರವಿ ಉಡಪಿ, ಪರಮೇಶ ಲಮಾಣಿ, ಬಸವರಾಜ ಹಡಪದ, ಸುಧಾಕರ ದೈವಜ್ಷ, ಮಂಜುನಾಥ ಕಮ್ಮಾರ, ಬಸವರಾಜ ಹೊಣ್ಣನವರ, ವಿಶ್ವನಾಥ ಬಂಡಿವಡ್ಡರ, ಶಿದ್ರಾಮಗೌಡ ಮೇಳ್ಳಾಗಟ್ಟಿ, ರೈತ ಸಂಘದ ಅಧ್ಯಕ್ಷ ಬಸಲಿಂಗಪ್ಪ ನರಗುಂದ ಮತ್ತಿತರರು ಇದ್ದರು.