ಲೋಕದರ್ಶನ ವರದಿ
ಮೂಡಲಗಿ 15: ಹರಪ್ಪ ನಾಗರೀಕತೆಯಿಂದ ಬೆಳೆದು ಬಂದು ಸಾವಿರಾರು ವರ್ಷಗಳ ಕಾಲ ಗ್ರಾಮ, ನಗರ ಜೀವನಗಳಿಂದ ದೂರವಿದ್ದು, ಅಜ್ಞಾನ, ಅಂಧಕಾರಗಳಿಂದ ಅರಣ್ಯವಾಸಿಗಳಾಗಿ ಜೀವನ ನಡೆಸುತ್ತಿದ್ದ ಜನರಿಗೆ ಸೇವಾ ಲಾಲ್ ಮಹಾರಾಜರ ಜನನದಿಂದ ಮುಕ್ತಿ ದೊರೆಯಿತು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ ಮನ್ನಿಕೇರಿ ಹೇಳಿದರು.
ಅವರು ಇಲ್ಲಿಯ ಮಂಜುನಾಥ ಸೈನಿಕ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಂಡ ಸೇವಾಲಾಲ್ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಮಾತನಾಡಿ, ಸೇವಾಭಾಯ, ಸೇವಾಲಾಲ್ ಎಂಬ ನಾಮದೊಂದಿಗೆ ಬಡ ಜನರ ಅಜ್ಞಾನ ದೂರಮಾಡಲು ಭೀಮ ನಾಯ್ಕ ಮತ್ತು ಧರ್ಮಾಣಿ ಮಾತೆ ಎಂಬ ದಂಪತಿಗಳ ಉದರದಲ್ಲಿ ಹೊನ್ನಾಳಿ ತಾಲೂಕಿನ ಬೆಳಗುತ್ತಿ ಹೋಬಳಿಯ ಸೂರಗೊಂಡನ ಕೊಪ್ಪ ಎಂಬಲ್ಲಿ ದೈವ ಪುರುಷನ ಜನನವಾಯಿತು ಎಂದು ಮಾತನಾಡಿದರು. ಸಂಸ್ಥೆಯ ಸಂಸ್ಥಾಪಕ ಎಲ್.ವಾಯ್.ಅಡಿಹುಡಿ ಮಾತನಾಡುತ್ತಾ ಈ ದೈವ ಪುರುಷನನ್ನ ಮೋತಿವಾಲೋ ಲಾಲ್ ಮೋತಿ ಎಂದು ಕರೆಯುತ್ತಾರೆ. ಕಾರಣ ಮುಂಬಯಿಯ ಸ್ಮಿತ್ ಭಾವುಚಾ ಎಂಬ ಸ್ಥಳದಲ್ಲಿ ಹಿಂದೆ ಪೋರ್ಚುಗೀಸರ ಹಡಗು ಸಿಕ್ಕಿ ಹಾಕಿ ಕೊಂಡಿತ್ತು. ಇದನ್ನು ಸೇವಾಲಾಲ್ ತಮ್ಮ ಜಾಣತನದಿಂದ ದಡ ಸೇರಿಸಿದರು. ಅದಕ್ಕೆ ಪ್ರತಿಯಾಗಿ ಪೋರ್ಚುಗೀಸರು ಇವರಿಗೆ ಮುತ್ತಿನ ಹಾರವನ್ನು ಕಾಣಿಕೆಯಾಗಿ ನೀಡಿದ್ದರು. ಅದಕ್ಕಾಗಿ ಇವರನ್ನು ಮೋತಿವಾಲೋ ಎಂದು ಕರೆಯುತ್ತಾರೆ ಎಂದರು. ಪ್ರಧಾನ ಗುರು ಎಸ್.ವಿ.ಸೋಮವ್ವಗೊಳ ಮಾತನಾಡಿದರು. ಕಾರ್ಯಕ್ರಮದಲ್ಲಿ, ಆರ್.ಎಲ್.ಲಮಾಣಿ ಪಿ.ಬಿ.ಚವ್ಹಾಣ ಸುನೀಲ ರಾಠೋಡ ಬಿ.ಎನ್. ಕಲ್ಡಾಪ್ಪಾಗೊಳ ಎಮ್.ಬಿ.ಇನಾಮ್ದಾರ ಹಾಗೂ ಮನೋಹರ. ಲಮಾಣಿ ಮಂಜುನಾಥ ಕುಂಬಾರ ಶಶಿಧರ ಆರಾಧ್ಯಾ ರಾಮಣ್ಣ ಮಂಟೂರ ಮಂಜುನಾಥ ಸೈನಿಕ ತರಬೇತಿ ಕೇಂದ್ರದ ನೂರಾರು ಶಿಭಿರಾರ್ಥಿಗಳು ಭಾಗಿಯಾಗಿದ್ದರು.