ಮುದ್ದೇಬಿಹಾಳ: ಓದುಗರಿಗೆ ನಿಷ್ಪ್ರಯೋಜಕವಾಗಿರುವ ಸಾರ್ವಜನಿಕ ಗ್ರಂಥಾಲಯ

ಲೋಕದರ್ಶನ ವರದಿ

ಮುದ್ದೇಬಿಹಾಳ 05: ಪಟ್ಟಣದ ಆಲಮಟ್ಟಿ ರಸ್ತೆ ಪಕ್ಕದ ಸಗರಿ ಅವರ ಬಿಲ್ಡಿಂಗ್ನಲ್ಲಿರುವ ಸಾರ್ವಜನಿಕ ಗ್ರಂಥಾಲಯ ಓದುಗರಿಗೆ ನಿಷ್ಪ್ರಯೋಜಕವಾಗತೊಡಗಿದ್ದು ಇಲ್ಲಿ ಕರ್ತವ್ಯಕ್ಕೆ ನೇಮಿಸಿದ ಸಿಬ್ಬಂದಿ ಸರಿಯಾಗಿ ಗ್ರಂಥಾಲಯ ತೆರೆಯದೆ ಸಮಸ್ಯೆ ಓದುಗರಿಗೆ ಅನ್ಯಾಯ ಮಾಡುತ್ತಿದ್ದಾರೆ. 

ಗ್ರಂಥಾಲಯಕ್ಕೆ ವೃತ್ತಪತ್ರಿಕೆ, ನಿಯತಕಾಲಿಕೆ ಮುಂತಾದವುಗಳನ್ನು ಓದಲು ಬಂದಿದ್ದ ಓದುಗರು ಸಮಯ ಮೀರಿದರೂ ಗ್ರಂಥಾಲಯ ಸಿಬ್ಬಂದಿ ಬರದಿರುವುದನ್ನು ಕಂಡು ಸುದ್ದಿಗಾರರನ್ನು ಸ್ಥಳಕ್ಕೆ ಕರೆಸಿ ಸಮಸ್ಯೆಯ ಚಿತ್ರಣ ಬಿಡಿಸಿಟ್ಟರು.

ಕಳೆದ 5-6 ತಿಂಗಳಿಂದ ಇದೇ ಸ್ಥಿತಿ ಇದೆ. ವಾರದಲ್ಲಿ 2-3 ದಿನ ಗ್ರಂಥಾಲಯ ಬಂದ್ ಇರುತ್ತದೆ. ಇದಕ್ಕೆ ಕಾರಣ ಇಲ್ಲಿ ಕರ್ತವ್ಯ ನಿರ್ವಹಿಸಲು ವಿಜಯಪುರ ಮತ್ತು ಇಂಡಿ ನಗರಗಳ ಸಿಬ್ಬಂದಿಯನ್ನು ಇಲ್ಲಿಗೆ ವರ್ಗಾವಣೆ ಮಾಡಿದ್ದು. ಅವರು ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಈ ಹಿಂದೆ ಇಲ್ಲಿ ಕೆಲಸ ಮಾಡುತ್ತಿದ್ದ ನದಾಫ ಎನ್ನುವವರು ನಿಯಮಿತವಾಗಿ ಗ್ರಂಥಾಲಯ ತೆರೆದು ಓದುಗರಿಗೆ ಹೆಚ್ಚು ಅನುಕೂಲ ಮಾಡಿ ಕೊಡುತ್ತಿದ್ದರು. ಆದರೆ ಈಗಿರುವವರು ಹೆಚ್ಚು ಕಾಳಜಿ ವಹಿಸುತ್ತಿಲ್ಲ ಎಂದು ಆಪಾದಿಸಿದರು.

ಸರ್ಕಾರಿ ರಜೆ ಮತ್ತು ಎರಡನೇ ಮಂಗಳವಾರ ರಜೆ ಹೊರತುಪಡಿಸಿ ನಿತ್ಯ ಬೆಳಿಗ್ಗೆ 8-30ರಿಂದ 11-30ರವರೆಗೆ, ಸಂಜೆ 4 ರಿಂದ 8ರವರೆಗೆ ಗ್ರಂಥಾಲಯ ಸಾರ್ವಜನಿಕರಿಗಾಗಿ ತೆರೆದಿರಬೇಕು ಎಂದು ನಿಯಮ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ನಿಯಮ ಪಾಲನೆ ಆಗುತ್ತಿಲ್ಲ. ಸಾರ್ವಜನಿಕರ ಓದಿಗೆ ಅನುಕೂಲ ಆಗಿ, ಜ್ಞಾನಾರ್ಜನೆ ಆಗಲಿ ಎಂದೇ ಸಾರ್ವಜನಿಕ ಗ್ರಂಥಾಲಯ ಸ್ಥಾಪಿಸಲಾಗಿದೆ. ಆದರೆ ಇಲ್ಲಿನ ಗ್ರಂಥಾಲಯ ಮಾತ್ರ ಜನರಿಗೆ ಪ್ರಯೋಜನಕಾರಿಯಾಗುವ ಬದಲು ನಿಷ್ಪ್ರಯೋಜಕ ಆಗತೊಡಗಿದೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಸಮಯಕ್ಕೆ ಸರಿಯಾಗಿ ಗ್ರಂಥಾಲಯ ತೆರೆದು ಓದುಗರ ಓದಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲವಾದಲ್ಲಿ ವಿದ್ಯಾರ್ಥಿಗಳು, ಓದುಗರು ಸೇರಿಕೊಂಡು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಬಡರಕೋಡದ ಪಾವಡೆಪ್ಪ ಬಸರಕೋಡ, ಶಿವಾನಂದ ಸೇರಿದಂತೆ ಹಲವರು ಎಚ್ಚರಿಸಿದ್ದಾರೆ.