ಲಂಡನ್, ಡಿ 25 - ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಪ್ರಕಟಿಸಿರುವ ನೂತನ ಟೆಸ್ಟ್ ರ‍್ಯಾಂಕಿಂಗ್ ಪಟ್ಟಿಯ ವಿರುದ್ಧ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳ ಪ್ರದರ್ಶನ ಹೇಳಿಕೊಳ್ಳುವ ಮಟ್ಟದ್ದಾಗಿರದೇ ಇದ್ದರೂ ಕೂಡ ಕ್ರಮವಾಗಿ 2ನೇ ಮತ್ತು ನಾಲ್ಕನೇ ಸ್ಥಾನ ಪಡೆದಿರುವುದಾದರೂ ಹೇಗೆ? ಎಂದು ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ವ್ಯವಸ್ಥೆಯನ್ನು ವಾನ್ ಪ್ರಶ್ನಿಸಿದ್ದಾರೆ.
"ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ವಿರುದ್ಧ ಅಸಮಾಧಾನವಿದೆ. ನನ್ನ ಪ್ರಕಾರ ಟೆಸ್ಟ್ ರ‍್ಯಾಂಕಿಂಗ್ ನಿಜಕ್ಕೂ ಕಸಕ್ಕೆ ಸಮಾನ. ಕಳೆದ ಎರಡು ವರ್ಷಗಳಲ್ಲಿ ನ್ಯೂಜಿಲೆಂಡ್ ತಂಡ ಹಲವು ಸರಣಿಗಳನ್ನು ಗೆದ್ದು ಎರಡನೇ ಸ್ಥಾನದಲ್ಲಿದೆ. ಆದರೆ, ಟೆಸ್ಟ್‌ನಲ್ಲಿ ಕಳೆದೆರಡು ವರ್ಷಗಳಲ್ಲಿ ನೀರಸ ಪ್ರದರ್ಶನ ನೀಡಿರುವ ಇಂಗ್ಲೆಂಡ್ 3ನೇ ಮತ್ತು ನಾಲ್ಕನೇ ಸ್ಥಾನದಲ್ಲೇ ಉಳಿದಿರುವುದು ನಿಜಕ್ಕೂ ಅರ್ಥಹೀನ," ಎಂದು ವಾನ್ ಅಸಮಾಧಾನ ಹೊರಹಾಕಿದ್ದಾರೆ.
"ಇಂಗ್ಲೆಂಡ್ ತವರಿನಲ್ಲಿ ಕೆಲ ಸರಣಿಗಳನ್ನು ಗೆದ್ದಿದೆ. ಆದರೆ, ಆ್ಯಷಸ್ ಸರಣಿಯಲ್ಲಿ ಡ್ರಾ ಫಲಿತಾಂಶಕ್ಕೆ ತೃಪ್ತಿಪಟ್ಟಿದೆ. ಕೇವಲ ಐರ್ಲೆಂಡ್ ವಿರುದ್ಧ ಮಾತ್ರವೇ ಗೆದ್ದಿದೆ. ಆದಾಗ್ಯೂ ರ‍್ಯಾಂಕಿಂಗ್ ವ್ಯವಸ್ಥೆ ನಿಜಕ್ಕೂ ಗೊಂದಲ ಸೃಷ್ಠಿಸುವಂಥದ್ದಾಗಿದೆ. ನನ್ನ ಪ್ರಕಾರ ನ್ಯೂಜಿಲೆಂಡ್ ತಂಡಕ್ಕಿಂತಲೂ ಆಸ್ಟ್ರೇಲಿಯಾ ತಂಡ ಟೆಸ್ಟ್‌ನಲ್ಲಿ ಅತ್ಯುತ್ತಮ ತಂಡವಾಗಿದೆ," ಎಂದು ವಾನ್ ಹೇಳಿದ್ದಾರೆ.
ಆಸ್ಟ್ರೇಲಿಯಾ ತಂಡ ಟೆಸ್ಟ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಸದ್ಯ 5ನೇ ಸ್ಥಾನದಲ್ಲಿದೆ. ಇದು ಟೆಸ್ಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಆಸೀಸ್ ತಂಡಕ್ಕೆ ಕೊಟ್ಟ ಗೌರವ ಖಂಡಿತಾ ಅಲ್ಲ ಎಂಬುದು ವಾನ್ ಅಭಿಪ್ರಾಯ.
"ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶ್ವದ ಶ್ರೇಷ್ಠ ತಂಡಗಳಾಗಿವೆ. ಭಾರತ ತಂಡ ಆಸ್ಟ್ರೇಲಿಯಾ ಎದುರು ಸರಣಿ ಗೆದ್ದಾಗ ಆಸೀಸ್ ತಂಡದಲ್ಲಿ ಸ್ಮಿತ್, ವಾರ್ನರ್ ಮತ್ತು ಮಾರ್ನಸ್ ಲಾಬುಶೇನ್ ಇರಲಿಲ್ಲ. ಈ ಆಟಗಾರರು ಭಾರತ ತಂಡ ಮರಳಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಾಗ ತಂಡದಲ್ಲಿ ಇರುತ್ತಾರೆಂದು ಆಶಿಸುತ್ತೇನೆ. ಭಾರತ ತಂಡದಲ್ಲಿ ಅತ್ಯುತ್ತಮ ವೇಗಿಗಳಿದ್ದಾರೆ. ಜೊತೆಗೆ ಶ್ರೇಷ್ಠ ಹಾಗೂ ಅನುಭವಿ ಬ್ಯಾಟ್ಸ್‌ಮನ್‌ಗಳಿದ್ದಾರೆ. ಆಸ್ಟ್ರೇಲಿಯಾ ನೆಲದಲ್ಲಿ ಆಸೀಸ್‌ಗೆ ಸವಾಲೊಡ್ಡಬಲ್ಲ ಏಕಮಾತ್ರ ತಂಡವೆಂದರೆ ಅದು ಭಾರತ," ಎಂದು ಟೀಮ್ ಇಂಡಿಯಾ ಕುರಿತಾಗಿ ವಾನ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಇಂಗ್ಲೆಂಡ್ ತಂಡ ಐಸಿಸಿ ಟೆಸ್ಟ್ ಚಾಂಪಿಯನ್‌ಷಿಪ್ ಭಾಗವಾಗಿ ಇದೀಗ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು, ಮೊದಲಿಗೆ 4 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ. ಪ್ರಥಮ ಟೆಸ್ಟ್ ಪಂದ್ಯ ಡಿ.26ರಂದು ಸೆಂಚೂರಿಯನ್‌ನ ಸೂಪರ್ ಸ್ಪೋರ್ಟ್ ಪಾರ್ಕ್ ಕ್ರೀಡಾಂಗಣದಲ್ಲಿ (ಬಾಕ್ಸಿಂಗ್ ಡೇ ಟೆಸ್ಟ್) ಆರಂಭವಾಗಲಿದೆ.