ಮರಣ ಹೊಂದಿದ ನಂತರ ಸಿಬ್ಬಂದಿ ವೇತನ ಪಾವತಿಸಿದ ಅಂಗವಿಕಲ ಕಲ್ಯಾಣಾಧಿಕಾರಿ ಕೆಂಪಲಿಂಗಣ್ಣವರವರನ್ನು ವಜಾ ಗೊಳಿಸಿ ಅಂಗವಿಕಲರಿಗೆ ನ್ಯಾಯ ಒದಗಿಸಬೇಕು : ವಿನೋದ ಖೇಡ

ಮರಣ ಹೊಂದಿದ ನಂತರ ಸಿಬ್ಬಂದಿ ವೇತನ ಪಾವತಿಸಿದ ಅಂಗವಿಕಲ ಕಲ್ಯಾಣಾಧಿಕಾರಿ ಕೆಂಪಲಿಂಗಣ್ಣವರವರನ್ನು ವಜಾ ಗೊಳಿಸಿ ಅಂಗವಿಕಲರಿಗೆ ನ್ಯಾಯ ಒದಗಿಸಬೇಕು : ವಿನೋದ ಖೇಡ Kempalinganna, the disabled welfare officer who paid staff salaries after their death, should be fir

ಲೋಕದರ್ಶನ ವರದಿ 

 ವಿಜಯಪುರ 14 : ಮರಣ ಹೊಂದಿದ ಸಿಬ್ಬಂಧಿ ಹೆಸರಿನಲ್ಲಿ ವೇತನ ತೆಗೆದ ಅಂಗವಿಕಲ ಕಲ್ಯಾಣಾಧಿಕಾರಿ ಜಗದೀಶ ಕೆಂಪಲಿಂಗಣ್ಣವರ ಅವರನ್ನು ಕೂಡಲೆ ಅಮಾನತ್ತುಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಜಿಲ್ಲಾಧ್ಯಕ್ಷ ವಿನೋದ ಎಂ. ಖೇಡ ಅವರು ಕರ್ನಾಟಕ ಸರ್ಕಾರ ಹಾಗೂ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದರು. ನಗರದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯಲ್ಲಿ ಅಂಗವಿಕಲರ ಶ್ರೇಯೋಭಿವೃದ್ಧಿಗಾಗಿ ಕರ್ತವ್ಯ ನಿರ್ವಹಿಸಬೇಕಾಗಿದ್ದ ಅಧಿಕಾರಿ ತನ್ನ ಬೇಜವಾಬ್ದಾರಿ ನಡೆಯಿಂದ ಸರ್ಕಾರದ ಹಣವನ್ನು ಸತ್ತ ನೌಕರದಾರರ ಹೆಸರಿನಲ್ಲಿ ವೇತನ ಪಾವತಿ ಮಾಡಿದ್ದು ಈ ಕುರಿತು ಹಲವಾರು ಭಾರಿ ಜಿಲ್ಲಾಧಿಕಾರಿಗಳೀಗೆ ಮನವಿ ಮಾಡಿಕೊಂಡರು ಕ್ರಮ ತೆಗೆದುಕೊಳ್ಳದೇ ಇರುವುದು ಅಂಗವಿಕಲ ಕಲ್ಯಾಣಾಧಿಕಾರಿಗೆ ಸರ್ಕಾರ ಹಾಗೂ ಮೇಲಾಧಿಕಾರಿಗಳಿಗೆ ಭಯ ಇಲ್ಲದಂತಾಗಿದೆ ಎಂದು ಹೇಳಿದ ಅವರು ನಗರದ ಶಿವಶರಣ ಹರಳಯ್ಯ ಅಂದ ಮಕ್ಕಳ ಅನುದಾನಿತ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್‌.ವೈ. ಸಾತಿಹಾಳ ಅವರು ಮರಣ ಹೊಂದಿದ್ದ ನಂತರ ಅವರ ವಾರಸುದಾರರ ಹೆಸರಿನಲ್ಲಿ ವೇತನ ಪಾವತಿಮಾಡಬೇಕಾಗಿತ್ತು ಆದರೆ ಮೃತ ಸಾತಿಹಾಳ ಅವರ ಹೆಸರಿನಲ್ಲಿ ಮರಣ ಹೊಂದಿದ ನಂತರವೂ ಎರಡು ತಿಂಗಳ ವೇತನ ಸೇರಿ ರೂ. 110383/-ಗಳನ್ನು ಪಾವತಿಸಿದ್ದು ಸಂಪೂರ್ಣವಾಗಿ ಕಾನೂನು ಬಾಹೀರವಾಗಿದೆ.  

ಇಂತಹ ಕಾನೂನು ಬಾಹೀರ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಕೆಂಪಲಿಂಗಣ್ಣವರ ಅವರನ್ನು ಕೂಡಲೇ ಕರ್ತವ್ಯದಿಂದ ವಜಾಗೊಳಿಸಿ ಅಂಗವಿಕಲರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಉಮರಾಣಿ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ ಅಂಗವಿಕಲರಿಗೆ ವೈದ್ಯಕೀಯ ದೃಢೀಕೃತ ಪ್ರಮಾಣ ಪತ್ರ ಪಡೆದು ನೀಡಬೇಕಾಗಿದ್ದ ಅಂಗವಿಕಲರ ಗುರುತಿನ ಚೀಟಿಯಲ್ಲಿ ಬಾರಿ ಅವ್ಯಹಾರ ನಡೆದಿದ್ದು ಅಂಗವಿಕರಲ್ಲದ 1900 ವ್ಯಕ್ತಿಗಳಿಗೆ  ಗುರುತಿನ ಚೀಟಿ ನೀಡಿ ನೈಜ ಅಂಗವಿಕಲರಿಗೆ ದೊರಕಬೇಕಾಗಿದ್ದ ಸರ್ಕಾರಿ ಸೌಲಭ್ಯಗಳನ್ನು ವಂಚಿಸುವ ಭಾರಿ ಹುನ್ನಾರ ನಡೆದಿದ್ದು ಇದರಲ್ಲಿ ಅಂಗವಿಕಲ ಕಲ್ಯಾಣ ಇಲಾಖೆ ಅಧಿಕಾರಿಗಳು ಶ್ಯಾಮೀಲಾಗುವ ಮೂಲಕ ಅಂಗವಿಕಲರ ಸೌಲಭ್ಯಗಳನ್ನು ಕಿತ್ತುಕೊಂಡಿದ್ದಾರೆ. ಕೂಡಲೇ ತಪ್ಪಿತಸ್ಥ ಎಲ್ಲ ಅಧಿಕಾರಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ವಾಲಿಕಾರ ಮಾತನಾಡಿ, ವಿಜಯಪುರ ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ ಜಗದೀಶ ಕೆಂಪಲಿಂಗಣ್ಣವರ ಅವರು ಮಾಡಿರುವ ಅವ್ಯವಹಾರದ ಕುರಿತು ಹಲವಾರು ಭಾರಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಜಿಲ್ಲಾಧಿಕಾರಿಗಳು ಅಂಗವಿಕಲ ಕಲ್ಯಾಣ ಅಧಿಕಾರಿ ಮೇಲೆ ಕ್ರಮ ತೆಗೆದುಕೊಳ್ಳದೇ ಇರುವುದು ಅನುಮಾನಕ್ಕೆ ಎಡೆ ಮಾಡಿದೆ. ಜಿಲ್ಲೆಯ ಅಂಗವಿಕಲರಲ್ಲಿ ಜಿಲ್ಲಾಧಿಕಾರಿಗಳ ಮೇಲೆ ವಿಶ್ವಾಸ ಹುಸಿಯಾಗಿದೆ. ಪಾರದಶರ್ಕವಾಗಿ ನ್ಯಾಯ ದೊರಕಬೇಕಾಗದರೆ ಅಂಗವಿಕಲ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳ ಮಟ್ಟದಲ್ಲಿ ಸೂಕ್ತ ತನಿಖೆಯಾಗಬೇಕು. ತನಿಖೆಯಾಗಿ ತಪ್ಪಿತಸ್ಥ ಎಲ್ಲ ಅಧಿಕಾರಿಗಳನ್ನು ವಜಾಗೊಳಿಸಿ ಅಂಗವಿಕಲರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ವಿವೇಕಾನಂದ ದೊಡಮನಿ, ಅಂಬಣ್ಣ ಗುನ್ನಾಪೂರ, ಮಲ್ಲಿಕಾರ್ಜುನ ಲಂಗೋಟಿ, ರಾಜು ಕುಮಟಗಿ, ಅನೀಲ ಪವಾರ, ಸೋಮಶೇಖರ ಮೆಂಡೇಗಾರ, ಸಂತೋಷ ಕಲಗುಡಗಿ, ಅಶೋಕ ಚೋಳಕೆ, ಶಂಕ್ರೆಮ್ಮ ಕೋರಿ, ತುಳಸಾ ಕನಸೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.