ಕೂಡ್ಲಿಗಿ 09: ಸಕಾಲ ಎನ್ನುವುದು ಸಾರ್ವಜನಿಕರು ಪದೇ ಪದೇ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಇರುವ ವ್ಯವಸ್ಥೆಯಾಗಿದ್ದು, ಆರ್ಜಿಗಳನ್ನು ನಿರ್ದಿಷ್ಟ ಸಮಯದಲ್ಲಿ ವಿಲೇವಾರಿ ಮಾಡಬೇಕು. ಈ ಬಗ್ಗೆ ನಿರ್ಲಕ್ಷ್ಯ ಮಾಡಿದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ದ ದೂರು ದಾಖಲು ಮಾಡಿಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ಇನ್ಸೆಪೆಕ್ಟರ್ ವಸಂತ ಅಸೋದೆ ಹೇಳಿದರು. ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಸಾರ್ವಜನಿಕರ ಕುಂದು ಕೊರತೆಯ ಬಗ್ಗೆ ನಡೆದ ಸಭೆಯಲ್ಲಿ ಮಾತನಾಡಿದರು.
ಸಾರ್ವಜನಿಕರ ಕುಂದುಕೊರತೆಗಳ ಪರಿಹರಿಸಲು ಪ್ರತಿ ತಿಂಗಳು ಸಭೆ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಯಾವುದೇ ಕಚೇರಿಯಲ್ಲಿ ತಮ್ಮ ಕೆಲಸ ಕಾರ್ಯಗಳು ನಡೆಯದೆ ಇದ್ದರೆ ಅಥವಾ ನಿಮ್ಮ ಕೆಲಸಗಳನ್ನು ಸಂಬಂಧಿಸಿದ ಅಧಿಕಾರಿ ಮಾಡಿಕೊಡದೆ ಇದ್ದರೆ ನಮಗೆ ದೂರು ನೀಡಬಹುದು. ಆದರೆ ಅದಕ್ಕು ಮೊದಲು ನೀವು ಮೇಲಾಧಿಕಾರಿಗಳಿಗೆ ಅರ್ಜಿ ನೀಡಿರಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಹೊಸ ಮೋಟರ್ ಕಾಯ್ದೆ ಜಾರಿಗೆ ಬಂದಿದ್ದು, ಅದನ್ನು ತಿಳಿಸಲು ಸಾರ್ವಜನಿಕವಾಗಿ ಹೆಚ್ಚು ಪ್ರಚಾರ ಕೈಗೊಳ್ಳುವಂತೆ ಹೊಸಪೇಟೆ ಆರ್ಟಿಒ ಅಧಿಕಾರಿಗೆ ತಿಳಿಸಿದ ಅವರು, ಸಾರ್ವಜನಿಕರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಎಲ್ಲಾ ಇಲಾಖೆಗಳ ಕಚೇರಿಯಲ್ಲೂ ನೋಟೀಸ್ ಬೋರ್ಡ್ನಲ್ಲಿ ಹಾಕಬೇಕು. ಮುಂದಿನ ಬಾರಿ ಭೇಟಿ ನೀಡಿದಾಗ ಎಲ್ಲಾ ನೋಟೀಸ್ ಬೋರ್ಡ್ಗಳಲ್ಲಿಯೂ ಇರಬೇಕು. ಇಲ್ಲವಾದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನಂತರ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ 20ಕ್ಕು ಹೆಚ್ಚು ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ದೂರುಗಳು ನೀಡಲಾಯಿತು. ಇವುಗಳಲ್ಲಿ ಸಾರಿಗೆ ಸಂಸ್ಥೆ ವಿರುದ್ದವೇ ಅತಿ ಹೆಚ್ಚ ದೂರುಗಳು ಕೇಳಿ ಬಂದವು.
ಉಳಿದಂತೆ ಕೊಟ್ಟೂರಿನ ಬಡಾವಣೆಯೊಂದರಲ್ಲಿ ಕಳೆದ ನಾಲ್ಕು ವರ್ಷಗಳಿಂದಲೂ ವಿದ್ಯುತ್ ಕಂಬಗಳನ್ನು ಹಾಕದೆ ಇರುವುದಕ್ಕೆ ಸ್ಥಳೀಯ ನಿವಾಸಿಗಳು ನೀಡಿದ ದೂರಿಗೆ, ಪ್ರತಿಯಾಗಿ ಸಭೆಯಲ್ಲಿ ಉತ್ತರ ನೀಡಿದ ಕೊಟ್ಟೂರು ತಹಶೀಲ್ದಾರ್ ಅನಿಲ್ ಕುಮಾರ್, ಪಟ್ಟಣ ಪಂಚಾಯ್ತಿಯಿಂದ ಶೀಘ್ರದಲ್ಲಿಯೇ ಕ್ರಿಯಾ ಯೋಜನೆ ರೂಪಿಸಿ ವಿದ್ಯತು ಕಂಬಗಳನ್ನು ಹಾಕಿಕೊಡಲಾಗುವುದು ಎಂದು ಹೇಳಿದರು.
ಬ್ಯಾಂಕ್ ಅಧಿಕಾರಿಗಳು ಲೋನ್ ನೀಡುತ್ತಿಲ್ಲ, ವಾರ್ಡ್ಗಳಲ್ಲಿ ಸ್ವಚ್ಚತೆ ಇಲ್ಲ, ಕೆರೆ ಒತ್ತುವರಿ, ಸೇರಿದಂತೆ 20ಕ್ಕೂ ಹೆಚ್ಚು ದೂರುಗಳು ದಾಖಲಾದವು. ಕೂಡ್ಲಿಗಿ ತಹಶೀಲ್ದಾರ್ ಎಸ್. ಮಹಾಬಲೇಶ್ವರ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಜಿ.ಎಂ. ಬಸಣ್ಣ ವೇದಿಕೆಯಲ್ಲಿದ್ದರು.ತಾಲ್ಲೂಕು ಮಟ್ಟದ ಅಧಿಕಾರಿಗಳು, ಲೋಕಾಯುಕ್ತ ಸಿಬ್ಬಂದಿ, ಅನೇಕ ಸಾರ್ವಜನಿಕರು ಸಭೆಯಲ್ಲಿ ಭಾಗಿಯಾಗಿದ್ದರು.