ಬೆಂಗಳೂರು, ಭಾರಿ ಮಳೆ ಮತ್ತು ಪ್ರವಾಹಕ್ಕೆ ತುತ್ತಾಗಿರುವ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹದ ನಂತರ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದ್ದು, ಜನರ ಸಂಕಷ್ಟ ನಿವಾರಿಸಲು ಹೋಮಿಯೋಕೇರ್ ಇಂಟರ್ ನ್ಯಾಷನಲ್ ನುರಿತ ಹೋಮಿಯೋಪತಿ ವೈದ್ಯಕೀಯ ತಂಡ ಮಂದಾಗಿರುವುದು ಉತ್ತಮ ಬೆಳವಣಿಗೆ ಎಂದು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ನಗರದ ಹೋಮಿಯೋಕೇರ್ ಕ್ಲಿನಿಕ್ ನಲ್ಲಿ ಪ್ರವಾಹ ಪರಿಹಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈಗಾಗಲೇ ತೀವ್ರ ತೊಂದರೆಗೆ ಒಳಾಗಾಗಿರುವ ನೆರೆ ಸಂತ್ರಸ್ತರಿಗೆ ಅಡ್ಡ ಪರಿಣಾಮ ಬೀರದ ಹೋಮಿಯೋಪತಿ ಚಿಕಿತ್ಸೆ ದೊರೆತರೆ ಅವರ ಬದುಕು ಹಸನಾಗುತ್ತದೆ ಹಾಗೂ ಅಲ್ಲಿನ ಜನರಿಗೆ ಮಾನಸಿಕವಾಗಿ ಧೈರ್ಯ ತುಂಬುವ ಜೊತೆಗೆ ತಮ್ಮ ಕುಟುಂಬ ಹಾಗೂ ಪರಿಸರದಲ್ಲಿ ರೋಗ ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಸಂತ್ರಸ್ತರಲ್ಲಿ ಅರಿವು ಮೂಡಿಸುವುದು ಇಂದಿನ ತುರ್ತ ಅಗತ್ಯವಾಗಿದೆ ಎಂದು ಹೇಳಿದರು.
ಹೋಮಿಯೋಕೇರ್ ಇಂಟರ್ ನ್ಯಾಷನಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಶ್ರೀಕಾಂತ್ ಮಾರ್ಲವಾರ್ ಮಾತನಾಡಿ, ಪ್ರವಾಹ ಸಂತ್ರಸ್ತ ಜನ ಬೇಗ ಸಹಜ ಸ್ಥಿತಿಗೆ ಮರಳುವಂತಾಗಲು ನುರಿತ ವೈದ್ಯಕೀಯ ತಂಡವನ್ನು ರವಾನಿಸಲಾಗುತ್ತಿದೆ. ಪ್ರವಾಹ ಬಾಧಿತ ಪ್ರದೇಶಗಳಲ್ಲಿ ವೈದ್ಯರು ಸಂಚರಿಸಿ ಚಿಕಿತ್ಸೆ ನೀಡುವ ಜತೆಗೆ ರೋಗಗಳನ್ನು ತಡೆಗಟ್ಟುವ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಜನರಿಗೆ ಜಾಗೃತಿ ಮೂಡಿಸಲಿದ್ದಾರೆ ಎಂದರು.
ಹೋಮಿಯೋಕೇರ್ ಇಂಟರ್ ನ್ಯಾಷನಲ್ ಸಂಸ್ಥೆ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಗಳಲ್ಲಿ 50 ಕ್ಕೂ ಹೆಚ್ಚು ಕ್ಲಿನಿಕ್ಗಳನ್ನು ಹೊಂದಿದ್ದು, ಇಲ್ಲಿನ 300 ಮಂದಿಯ ತಜ್ಞ ವೈದ್ಯಕೀಯ ತಂಡವನ್ನು ಉತ್ತರ ಕರ್ನಾಟಕ ಭಾಗಕ್ಕೆ ರವಾನಿಸಲಾಗುತ್ತಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಂತ್ರಸ್ತ ಪ್ರದೇಶದ ಶಾಲಾ ಮಕ್ಕಗಳಿಗೆ ಐದು ಸಾವಿರ ಉಚಿತ ನೋಟ್ ಪುಸ್ತಕಗಳನ್ನು ಸಹ ಆಸ್ಪತ್ರೆಯಿಂದ ರವಾನಿಸಲಾಯಿತು.