ಬೆಂಗಳೂರು 19: ಆರ್ ಸಿಬಿಯ ಸ್ಟಾರ್ ಬ್ಯಾಟರ್ ಗಳ ವಿರುದ್ಧ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ನಲ್ಲಿ ಬ್ಯಾಟ್ಸ್‌ಮನ್‌ಗಳು ಹೇಗೆ ಬ್ಯಾಟಿಂಗ್ ಮಾಡಬೇಕೆಂಬುದರ ಬಗ್ಗೆ ಆರ್ ಸಿಬಿ ಬ್ಯಾಟರ್ ಗಳು 'ಸಾಮಾನ್ಯ ಜ್ಞಾನದ ಕೊರತೆ' ಹೊಂದಿದ್ದಾರೆ ಎಂದು ಟೀಕಿಸಿದ್ದಾರೆ.
ಚಿನ್ನಸ್ವಾಮಿಯಂತಹ ಪಿಚ್ ನಲ್ಲಿ ಅದರಲ್ಲೂ ತವರಿನಲ್ಲಿ ಆಡಬೇಕಾದರೆ ಸ್ವಲ್ಪ ಆದ್ರೂ ಕಾಮನ್ ಸೆನ್ಸ್ ಇರ್ಬೇಕು. ಅವರೆಲ್ಲರೂ ಅಜಾಗರೂಕ ಹೊಡೆತಗಳನ್ನು ಆಡಿದರು. ಉತ್ತಮ ಚೆಂಡಿಗೆ ಒಬ್ಬ ಬ್ಯಾಟ್ಸ್‌ಮನ್ ಕೂಡ ಔಟಾಗಲಿಲ್ಲ. ಕನಿಷ್ಠ ಒಬ್ಬ ಬ್ಯಾಟ್ಸ್‌ಮನ್ ಸಾಮಾನ್ಯ ಜ್ಞಾನವನ್ನು ಬಳಸಬೇಕಿತ್ತು. ಅವರು ವಿಕೆಟ್ ಗಳನ್ನು ಉಳಿಸಿಕೊಂಡಿರುತ್ತಿದ್ದರೆ ಅವರು ಸುಲಭವಾಗಿ 14 ಓವರ್‌ಗಳಲ್ಲಿ 110 ಅಥವಾ 120 ರನ್ ಗಳಿಸಬಹುದಿತ್ತು. ಅದು ಅವರಿಗೆ ಹೋರಾಡಲು ಅವಕಾಶವನ್ನು ನೀಡುತ್ತಿತ್ತು" ಎಂದು ಸೆಹ್ವಾಗ್ ಕ್ರಿಕ್‌ಬಜ್‌ನಲ್ಲಿ ನಡೆದ ಚಾಟ್‌ನಲ್ಲಿ ಹೇಳಿದ್ದಾರೆ.
"ವಿಕೆಟ್ ಪಡೆಯುವುದಕ್ಕೂ ವಿಕೆಟ್ ಗಳಿಸುವುದಕ್ಕೂ ವ್ಯತ್ಯಾಸವಿದೆ".. ಪಂಜಾಬ್ ಬೌಲರ್ ಗಳು ವಿಕೆಟ್ ಗಳಿಸಲಿಲ್ಲ.. ಆರ್ ಸಿಬಿ ಬ್ಯಾಟರ್ ಗಳೇ ವಿಕೆಟ್ ಕೊಟ್ಟರು. ಆರ್‌ಸಿಬಿಗೆ, ವಿಶೇಷವಾಗಿ ತವರಿನಲ್ಲಿ ಬ್ಯಾಟಿಂಗ್ ಒಂದು ಸಮಸ್ಯೆಯಾಗಿದೆ. ಒಂದು ತಂಡವಾಗಿ ಆಡುವಲ್ಲಿ ಆರ್ ಸಿಬಿ ವಿಫಲವಾಗಿದೆ. ಇದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ಜವಾಬ್ದಾರಿ ನಾಯಕ ರಜತ್ ಪಾಟಿದಾರ್ ಮೇಲಿದೆ. ಪಾಟಿದಾರ್ ಸ್ವತಃ ತಂಡಕ್ಕೆ ಅತ್ಯುತ್ತಮ ಪ್ರದರ್ಶನ ನೀಡುವವರಲ್ಲಿ ಒಬ್ಬರಾಗಿದ್ದರೂ, ಅವರ ಸುತ್ತಲಿನ ಇತರ ಬ್ಯಾಟ್ಸ್‌ಮನ್‌ಗಳು ಅದೇ ಸ್ಥಿರತೆಯನ್ನು ತೋರಿಸುತ್ತಿಲ್ಲ.
ಈ ಬಗ್ಗೆ ಪಾಟಿದಾರ್ ಯೋಚಿಸಬೇಕು ಮತ್ತು ಪರಿಹಾರವನ್ನು ಕಂಡುಕೊಳ್ಳಬೇಕು. ಅವರು ತವರಿನಲ್ಲಿ ಗೆಲ್ಲುತ್ತಿಲ್ಲ. ಆರ್ ಸಿಬಿ ಬೌಲರ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಬ್ಯಾಟ್ಸ್‌ಮನ್‌ಗಳು ನಿಯಮಿತವಾಗಿ ಏಕೆ ಎಡವುತ್ತಿದ್ದಾರೆ? ನಿಮ್ಮ ಬ್ಯಾಟ್ಸ್‌ಮನ್‌ಗಳು ತವರಿನಲ್ಲಿ ನಿರಂತರವಾಗಿ ವಿಫಲವಾಗುತ್ತಿದ್ದರೆ ಅದನ್ನು ಯಾರು ಸರಿಪಡಿಸುತ್ತಾರೆ? ಎಂದು ಸೆಹ್ವಾಗ್ ಪ್ರಶ್ನಿಸಿದರು.
ನಿನ್ನೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 5 ವಿಕೆಟ್ ಅಂತರದ ಹೀನಾಯ ಸೋಲು ಕಂಡಿತು. ಟಾಸ್ ಗೆದ್ದ ಪಂಜಾಬ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆರ್ ಸಿಬಿ ಕೇವಲ 41ರನ್ ಗಳ ಅಂತರದಲ್ಲಿ 6 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು.
ಇನ್ನು ನಿನ್ನೆಯ ಪಂದ್ಯದಲ್ಲಿ ಬಲಿಷ್ಠ ಬ್ಯಾಟಿಂಗ್ ಲೈನ್ ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಪೂರ್ಣ ವಿಫಲವಾಯಿತು. ಟಿಮ್ ಡೇವಿಡ್ ಕೇವಲ 26 ಎಸೆತಗಳನ್ನು ಎದುರಿಸಿದ ಟಿಮ್ ಡೇವಿಡ್, 3 ಸಿಕ್ಸರ್ ಮತ್ತು 5 ಬೌಂಡರಿಗಳ ನೆರವಿನಿಂದ ಅಜೇಯ 50ರನ್ ಗಳಿಸಿದರು. ಟಿಮ್ ಡೇವಿಡ್ ರನ್ನು ಹೊರತುಪಡಿಸಿದರೆ, ಆರ್ ಸಿಬಿಯ ಉಳಿದಾವ ಬ್ಯಾಟರ್ ಗಳಿಂದಲೂ ಉತ್ತಮ ಪ್ರದರ್ಶನ ಮೂಡಿಬರಲಿಲ್ಲ. ಪ್ರಮುಖವಾಗಿ ವಿರಾಟ್ ಕೊಹ್ಲಿ 1 ರನ್ ಗಳಿಸಿದರೆ, ನಾಯಕ ರಜತ್ ಪಾಟಿದಾರ್ 23ರನ್ ಮತ್ತು ಜಿತೇಶ್ ಶರ್ಮಾ ಕೇವಲ 2 ಗಳಿಸಿ ವಿಕೆಟ್ ಒಪ್ಪಿಸಿದರು. ಅಂತೆಯೇ ಕೃನಾಲ್ ಪಾಂಡ್ಯ 1 ರನ್ ಮತ್ತು ಮನೋಜ್ ಭಂಡಾಗೆ 1ರನ್ ಗಳಿಸಿ ಮತ್ತೆ ನಿರಾಶೆ ಮೂಡಿಸಿದರು.