ಪೊಲೀಸ್‌ರು ಸಮಗ್ರ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮಕೈಗೊಳ್ಳಿರಿ : ಶಾಸಕ ಪಠಾಣ
ಶಿಗ್ಗಾವಿ 21:ಬೆಳಗಾವಿಯಲ್ಲಿ ಓದುತಿದ್ದ ತಾಲೂಕಿನ ಚಿಕ್ಕಮಲ್ಲೂರ ಗ್ರಾಮದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆಯನ್ನು ಪೊಲೀಸ್‌ರು ಸಮಗ್ರ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ದ ಸ್ವಯಂ ದೂರು ದಾಖಲಿಸಿಕೊಂಡು ಕಾನೂನು ಕ್ರಮಕೈಗೊಂಡು ವಿದ್ಯಾರ್ಥಿನಿ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಶಾಸಕ ಯಾಸೀರಖಾನ್ ಪಠಾಣ ಒತ್ತಾಯಿಸಿದರು. ವಿದ್ಯಾರ್ಥಿನಿ ಮನೆಗೆ ಭೇಟಿ ನೀಡಿ ಪಾಲಕರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಓದುತ್ತಿದ್ದ ವಿದ್ಯಾರ್ಥಿನಿಗೆ ಪೋನ್ ಕರೆ ಮಾಡಿ ಶಿಗ್ಗಾವಿಯ ಫರ್ನಿಚರ್ ಅಂಗಡಿ ಮಾಲೀಕ ರೊಬ್ಬರು ಕಿರುಕುಳ ನೀಡಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ದೂರು ಕೇಳಿ ಬಂದ ಹಿನ್ನಲೆಯಲ್ಲಿ ಈ ಘಟನೆಯನ್ನು ಪೊಲೀಸ್‌ರು ಗಂಭೀರವಾಗಿ ಪರಿಗಣಿಸಿ ತನಿಖೆಕೈಗೊಳ್ಳಬೇಕು. ಸತ್ಯಾಸತ್ಯತೆಯನ್ನು ಹೊರ ತಂದು ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.
ವಿದ್ಯಾರ್ಥಿನಿ ಆತ್ಮಹತ್ಯೆ ಘಟನೆಯಿಂದ ವೈಯಿಕ್ತಿಕವಾಗಿ ತಮಗೆ ನೋವಾಗಿದೆ. ಈ ಕುರಿತು ಪೊಲೀಸ್ ಇಲಾಖೆ ಉನ್ನತ್ ಅಧಿಕಾರಿಗಳಿಗೆ ಪತ್ರ ಬರೆದು ನ್ಯಾಯಯುತ ತನಿಖೆಗೆ ಮನವಿ ಮಾಡುತ್ತೇನೆ ಮತ್ತು ಗೃಹ ಸಚಿವರ ಗಮನಕ್ಕೂ ತಂದು ತ್ವರಿತಗತಿಯಲ್ಲಿ ತಪಿತಸ್ಥರಿಗೆ ಕಾನೂನು ಶಿಕ್ಷೆ ನೀಡುವಂತೆ ಕೇಳಿಕೊಳ್ಳುತ್ತೇನೆ.ಶಿಗ್ಗಾವಿ ಕ್ಷೇತ್ರದಲ್ಲಿ ಅಪರಾಧಿಗಳನ್ನು ರಕ್ಷಿಸುವವರನ್ನು ಸಹಿಸುವುದಿಲ್ಲ ಮತ್ತು ಅನಾವಶ್ಯಕ ಕಿರುಕುಳ ಕೊಟ್ಟು ಸಾವಿಗೆ ಕಾರಣ ರಾಗುವರನ್ನು ಕಾನೂನು ಮೂಲಕ ಸೆದೆಬಡಿಯುವುದಾಗಿ ಶಾಸಕರು ಎಚ್ಚರಿಸಿದರು. ಕಾನೂನುಗಿಂತ ದೊಡ್ಡವರು ಯಾರು ಇಲ್ಲ.ಬೆಳಗಾವಿ ವಸತಿ ನಿಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ಚಿಕಮಲ್ಲೂರಿನ ಮುಗ್ದ ವಿದ್ಯಾರ್ಥಿನಿ ಸಾವಿಗೆ ಕಾರಣರಾದ ಯಾವುದೇ ಜಾತಿಗೆ ಸೇರಿದ ವ್ಯಕ್ತಿಯಾಗಿರಲಿ ಅವರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು. ತನಿಖೆ ಚುರುಕುಗೊಳಿಸಲು ಈಗಾಗಲೇ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ಮನವಿ ಮಾಡಿದ್ದಾಗಿ ಶಾಸಕ ಪಠಾಣ ತಿಳಿಸಿದರು. ಈ ಸಂದರ್ಭದಲ್ಲಿ ದಲಿತ ಮುಖಂಡ ಎಸ್.ಎಫ್.ಮಣಕಟ್ಟಿ, ಕೆಎಂಎಫ್ ನಿರ್ದೇಶಕ ಶಂಕರಗೌಡ ಪಾಟೀಲ, ಶಿವಾನಂದ ಮಾದರ, ಗುಡ್ಡಪ್ಪ ಜಲದಿ, ಮಾಲತೇಶ ಸಾಲಿ, ಚಂದ್ರು ಕೊಡ್ಲಿವಾಡ ಇದ್ದರು