ಮನೆಗಳಂತೆಯೇ ಮಠಗಳನ್ನು ಕಾಪಾಡಿಕೊಳ್ಳಬೇಕು

Mathas should be maintained like houses

ಮನೆಗಳಂತೆಯೇ ಮಠಗಳನ್ನು ಕಾಪಾಡಿಕೊಳ್ಳಬೇಕು

ಮಾಂಜರಿ 15: ಪ್ರತಿಯೊಬ್ಬರೂ ಧರ್ಮದಲ್ಲಿ ನಂಬಿಕೆ, ದೇವರಲ್ಲಿ ಭಕ್ತಿ ಹೊಂದಬೇಕು. ಧರ್ಮದಿಂದ ಮನಸ್ಸಿಗೆ ನೆಮ್ಮದಿ, ಜೀವನದಲ್ಲಿ ಯಶಸ್ಸು ಸಿಗಲಿದೆ. ನಾವು ನಮ್ಮ ಮನೆಗಳನ್ನು ಹೇಗೆ ಕಾಪಾಡಿಕೊಳ್ಳುತ್ತೇವೋ ಹಾಗೆ ನಮ್ಮ ಮಂದಿರಗಳು ಮತ್ತು ಮಠಗಳನ್ನು ಕಾಪಾಡಬೇಕು. ದೇಶದ ಜನರಲ್ಲಿ ಭಕ್ತಿ ಭಾವನೆ ಉಳಿದಿರುವುದರಿಂದ ಆಧುನಿಕತೆಯ ಎಷ್ಟೇ ಬದಲಾವಣೆಗಳಾದರೂ ಆಚರಣೆಗಳಿಂದ ನಮ್ಮ ಸಂಸ್ಕೃತಿ, ಸಂಪ್ರದಾಯಗಳು ಉಳಿದು ಮುಂದುವರೆದಿವೆ ಎಂದು ಶ್ರೀಶೈಲ ಪೀಠದ ಜಗದ್ಗುರುಗಳು ಹಾಗೂ ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದ ವೀರಭದ್ರ ದೇವಸ್ಥಾನ ಹಾಗೂ ಕಾಡಸಿದ್ದೇಶ್ವರ ಸಂಸ್ಥಾನ ಮಠದ ಧರ್ಮಾಧಿಕಾರಿ ಡಾ ಚನ್ನ ಪಂಡಿತಾರಾಧ್ಯ ಶಿವಾಚಾರ್ಯ ಮಹಾ ಸ್ವಾಮೀಜಿಗಳು ಹೇಳಿದರು.  

ಅವರು ಮಂಗಳವಾರ ದಿ. 14ರಂದು ಚಿಕ್ಕೋಡಿ ತಾಲೂಕಿನ ಯಡೂರು ಮತ್ತು ಕಲ್ಲೋಳ ಗ್ರಾಮದ ಕೃಷ್ಣಾ ಮತ್ತು ದೂದಗಂಗಾ ನದಿ ಸಂಗಮ ತೀರದಲ್ಲಿ ಪವಿತ್ರ ಮಕರ ಸಂಕ್ರಮಣ ಸ್ನಾನ ಮಾಡಿ ಅಯೋಜಿಸಲಾದ ಧರ್ಮಸಭೆಯಲ್ಲಿ ಮಾತನಾಡಿ, ನಮ್ಮ ಕೈಲಾದಷ್ಟು ನೆರವು ನೀಡಬೇಕು. ನಮ್ಮ ಹಿರಿಯರು ಮನೆ, ಮಠ ಹುಷಾರು ಎಂದು ಹೇಳಿದ್ದರು. ನಾವು ನಮ್ಮ ಮನೆಗಳನ್ನು ಕಾಪಾಡುವಂತೆ ಮಠಗಳನ್ನು ಕಾಪಾಡಿ ಕೊಳ್ಳಬೇಕು. ಇದು ನಮ್ಮ ಕರ್ತವ್ಯ ಎಂದರು. ನೀವು ನೂರು ರೂ. ಸಂಪಾದಿಸಿದರೂ 1 ರೂ. ನಾದರೂ ಧರ್ಮ ಉಳಿಸುವ ಮಠಕ್ಕೆ ನೀಡಬೇಕು. ಆಗ ಮಾತ್ರ ಮಠ ಉಳಿಯಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.  

ಧರ್ಮ, ಸಂಸ್ಕಾರ, ಸಂಸ್ಕೃತಿ ನಮ್ಮ ದೇಶದ ಆಸ್ತಿ. ಅವುಗಳನ್ನು ಉಳಿಸಿ ಬೆಳೆಸುವ ಕೆಲಸ ಮಾಡಿ ಜಗತ್ತಿನಲ್ಲಿ ಧರ್ಮದಿಂದಲೇ ಶಾಂತಿ ನೆಲೆಸಲು ಸಾಧ್ಯ. ಇಲ್ಲಿ ಧರ್ಮ ಕಾಪಾಡುವ ಸಾಗರವೇ ಸೇರಿದೆ. ಪ್ರಾಚೀನ ಕಾಲದಿಂದಲೂ ಭಾರತ ಸಾಧು-ಸಂತರ-ವೀರರ ನೆಲಬೀಡು. ಈ ಭೂಮಿಯಲ್ಲಿ ಜನಿಸುವುದೇ ಪುಣ್ಯಫಲ. ವಿಶ್ವದಲ್ಲಿಯೇ ಭಾರತೀಯರಲ್ಲಿ ಅಗಾಧ ಶಕ್ತಿ ಅಡಗಿದೆ ಎಂಬ ಸತ್ಯವನ್ನು ಸ್ವಾಮಿ ಸಾಧು ಸಂತರು ಅಂದು ಮನಗಂಡಿದ್ದರು. ಯುವಶಕ್ತಿಯಿಂದ ಮಾತ್ರ ಭವ್ಯ ಭಾರತ ನಿರ್ಮಾಣ ಸಾಧ್ಯ ಎಂಬುದನ್ನು ಅರಿತಿದ್ದರು. ಆದರೆ, ದುರದೃಷ್ಟವಶಾತ್ ಇಂದಿನ ಯುವಜನತೆ ತಮ್ಮಲ್ಲಿರುವ ಸಾಮರ್ಥ್ಯದ ಬಗ್ಗೆ ತಿಳಿದಿಲ್ಲ. ಕೇವಲ ಅಂಕಗಳಿಗೆ ಮಾತ್ರ ಸೀಮಿತವಾಗಿದ್ದಾರೆ ಎಂದು ಶ್ರೀಶೈಲ್ ಜಗದ್ಗುರುಗಳು ವಿಷಾದ ವ್ಯಕ್ತಪಡಿಸಿದರು. 

ಶ್ರೀಶೈಲ ಪೀಠದ ಜಗದ್ಗುರುಗಳ ಸಮ್ಮುಖದಲ್ಲಿ ಮಕರ ಸಂಕ್ರಮಣದ ಪವಿತ್ರ ಸ್ನಾನ ಮಾಡಲು ನೂರಾರು ಭಕ್ತರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು. ಅಂಬಿಕಾ ನಗರದ ಶ್ರೀಗಳು ಹಾಗೂ ಯಡೂರಿನ ವೇದ ಪಾಠಶಾಲೆಯ ಗುರುಗಳು ಶ್ರೀಶೈಲ ಗುರೂಜಿ ಅಡವಯ್ಯ ಅರಳಿ ಕಟ್ಟಿಮಠ, ಮಲ್ಲಪ್ಪ ಸಿಂದೂರ್, ರಾಹುಲ್ ಸ್ವಾಮಿ, ಮಹಾದೇವ ಲಕ್ಕಪ್ಪ ಗೋಳ ಹಾಗೂ ಇನ್ನಿತರರು ಹಾಜರಿದ್ದರು.