ಮಹಾವೀರ ವಿವಿಧೋದ್ಧೇಶ ಸೌಹಾರ್ದ ಸಹಕಾರಿಗೆ ಲಾಭ

Mahavir Multipurpose Friendly Cooperative Profit

ಹುಕ್ಕೇರಿ 11: ಇಲ್ಲಿನ ಮಹಾವೀರ ವಿವಿಧೋದ್ಧೇಶ ಸೌಹಾರ್ದ ಸಹಕಾರಿಯು 2025-26ನೇ ಸಾಲಿಗೆ ರೂ.3.55 ಕೋಟಿ ಲಾಭ ಹೊಂದಿ ಪ್ರಗತಿಯಲ್ಲಿದೆ ಎಂದು ಅಧ್ಯಕ್ಷ ಮಹಾವೀರ ನಿಲಜಗಿ ಹೇಳಿದರು.  

ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, 2000ದಲ್ಲಿ ಕೇವಲ 366 ಸದಸ್ಯರನ್ನು ಹೊಂದಿದ್ಧ ಬ್ಯಾಂಕು ಈಗ 17 ಶಾಖೆ ಒಳಗೊಂಡು 15,151 ಸದಸ್ಯರನ್ನು ಹೊಂದಿ 7 ಜಿಲ್ಲೆಗಳಲ್ಲಿ (ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಾರವಾರ, ವಿಜಯಪುರ ಮತ್ತು ಬಾಗಲಕೋಟೆ) ಕಾರ್ಯಾಚರಣೆ ಮಾಡುತ್ತಿದೆ ಎಂದರು.  

ಸಹಕಾರಿಯ ಷೇರು ಬಂಡವಾಳ ರೂ.42.78 ಲಕ್ಷ, ಠೇವು ರೂ. 280.48 ಕೋಟಿ, ನಿಧಿ ರೂ.10.06 ಕೋಟಿ ಇದ್ದು, ಈ ಸಾಲಿನಲ್ಲಿ ರೂ.250.54 ಕೋಟಿ ಸಾಲ ವಿತರಿಸಿ ಶೇ.97ರಷ್ಟು ಸಾಲ ವಸೂಲಿ ಮಾಡಲಾಗಿದೆ ಎಂದರು.  

ಸಹಕಾರಿಯ ದುಡಿಯುವ ಬಂಡವಾಳ ರೂ.315.30 ಕೋಟಿಯಿದ್ದು, ಒಟ್ಟು ವಾರ್ಷಿಕ ವಹಿವಾಟು ರೂ.1184 ಕೋಟಿ ಮತ್ತು ಹೂಡಿಕೆ ರೂ.38.21 ಕೋಟಿ ಇದೆ ಎಂದ ಅವರು ಒಟ್ಟ 17 ಶಾಖೆಗಳ ಪೈಕಿ 7 ಶಾಖೆಗಳಿಗೆ ಸ್ವಂತ ಕಟ್ಟಡ, 3 ಶಾಖೆಗಳಿಗೆ ಖುಲ್ಲಾ ಜಾಗೆ ಖರೀದಿಸಿದೆ ಎಂದರು. ಸರ್ವಸಾಧಾರಣ ಸಭೆಯಲ್ಲಿ ಸದಸ್ಯರಿಗೆ ಶೇ.25ರಷ್ಟು ಲಾಭಾಂಶ ಹಂಚಲು ಅನುಮತಿ ಪಡೆಯಲಾಗುವುದು ಎಂದರು.  

ಕಾರ್ಯವ್ಯಾಪ್ತಿ ವಿಸ್ತರಣೆ: ಬರುವ ವರ್ಷ ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಹುಬ್ಬಳ್ಳಿಯಲ್ಲಿ ಶಾಖೆ ತೆರೆಯಲು ನಿರ್ಧರಿಸಲಾಗಿದೆ. ಸದಸ್ಯರ ಅಂತ್ಯಕ್ರಿಯೆಗೆ ರೂ.5 ಸಾವಿರ ನೀಡಲಾಗುತ್ತಿದೆ ಎಂದ ಅವರು ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಶಿಷ್ಯವೇತನ ಸಹ ನೀಡಲಾಗುತ್ತಿದೆ ಎಂದರು.  

ನಿರ್ದೇಶಕರಾದ ಕಿರಣ ಸೊಲ್ಲಾಪುರೆ, ಸಂಜಯ ನಿಲಜಗಿ, ಪ್ರಜ್ವಲ್ ನಿಲಜಗಿ, ರೀಡ್ಸ್‌ ಅಧ್ಯಕ್ಷ ಅಶೋಕ ಪಾಟೀಲ್, ಜನರಲ್ ಮ್ಯಾನೇಜರ್ ರಾಜೇಂದ್ರ ಪಾಟೀಲ್, ಶಾಖಾ ವ್ಯವಸ್ಥಾಪಕ ಸಂತೋಷ ರಜಪೂತ್ ಇದ್ದರು.