ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗದಂತೆ ಕ್ರಮ ವಹಿಸಲು ಶಾಸಕ ನಾರಾ ಭರತ್ ರೆಡ್ಡಿ ಸೂಚನೆ

ಬಳ್ಳಾರಿ 06: ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಗೆ ಬಳ್ಳಾರಿಯ ಕೆಲ ವಾರ್ಡ’ಗಳ ತಗ್ಗು ಪ್ರದೇಶಗಳಲ್ಲಿನ ಮನೆ ಹಾಗೂ ಇತರ ಕಟ್ಟಡಗಳಿಗೆ ನೀರು ನುಗ್ಗಿದ್ದು, ಮುಂದೆ ಈ ರೀತಿಯ ಸಮಸ್ಯೆ ಮರುಕಳಿಸದ ಹಾಗೆ ಕ್ರಮ ವಹಿಸುವಂತೆ ನಗರ ಶಾಸಕ ನಾರಾ ಭರತ್ ರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.ಭಾನುವಾರ ನಗರದ ವಾರ್ಡ್‌ ಸಂಖ್ಯೆ 20ರ ಹುಸೇನ್ ನಗರ, ರಾಯಲ್ ಕಾಲೋನಿಗಳಿಗೆ ಭೇಟಿ ನೀಡಿ ನೆರೆ ಪೀಡಿತ ಕಟ್ಟಡಗಳನ್ನು ಪರೀಶೀಲಿಸಿದರು. 

ತೆರೆದ ಚರಂಡಿಗಳಲ್ಲಿ ಹೂಳು ತುಂಬಿದ್ದು, ಹೂಳನ್ನು ಸ್ವಚ್ಛಗೊಳಿಸಬೇಕು. ಹಾನಿಯಾಗಿರುವ ಚರಂಡಿಗಳನ್ನು ತಕ್ಷಣ ರಿಪೇರಿ ಮಾಡಬೇಕು ಹಾಗೂ ರಾಯಲ್ ಕಾಲೋನಿ ಹಾದು ಹೋಗಿರುವ ರಾಜ ಕಾಲುವೆಯನ್ನು 24 ಗಂಟೆಯಲ್ಲಿ ಸ್ವಚ್ಛಗೊಳಿಸಿ ವರದಿ ನೀಡುವಂತೆ ಸ್ಥಳದಲ್ಲಿ ಹಾಜರಿದ್ದ ಪಾಲಿಕೆಯ ಆಯುಕ್ತ ಖಲೀಲಸಾಬ ಅವರಿಗೆ ಸೂಚಿಸಿದರು.ವಾರ್ಡ’ ಭೇಟಿ ಸಂದರ್ಭ ಮಾಜಿ ಮೇಯರ್ ನಾಗಮ್ಮ, ಪಾಲಿಕೆಯ ಸದಸ್ಯ ಪೇರಂ ವಿವೇಕ್ ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.