ಲೋಕದರ್ಶನ ವರದಿ
ಅಥಣಿ 26: ನೋವು, ನಲಿವು, ಅಳು, ಮಲಗುವುದು, ನೋಡುವುದು ಇಂತಹ ಅನೇಕ ಉಪಕಾರಗಳನ್ನು ಅಥವಾ ವರಗಳನ್ನು ದೇವರು ನಮಗೆ ನೀಡಿದ್ದಾನೆ ಇದಕ್ಕಾಗಿಯೇ ನಾವು ದೇವರಲ್ಲಿ ಅನುರಾಗ ಹೊಂದಬೇಕು ಅಥವಾ ದೇವರನ್ನು ಶುದ್ಧ ಮನಸ್ಸಿನಿಂದ ಪ್ರೀತಿಸಬೇಕು ಎಂದು ಉತ್ತರಾದಿ ಮಠದ ಸತ್ಯಾತ್ಮ ತೀರ್ಥ ಸ್ವಾಮೀಜಿ ಹೇಳಿದರು. ಅವರು ಸ್ಥಳೀಯ ರಾಘವೇಂದ್ರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಜ್ಞಾನ ಸತ್ರ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಅಳುವಿನಿಂದ ಪ್ರಾರಂಭಗೊಳ್ಳುವ ನಮ್ಮ ಜೀವನಕ್ಕೆ ದೇವರು ಕೊಟ್ಟ ವರವೇ ಅಳು. ತಾಯಿಯ ಹೊಟ್ಟೆಯಿಂದ ಹೊರ ಬರುವ ಮಗು ಅಳಲೇಬೇಕು ಮಗು ಅತ್ತರೆ ಮಾತ್ರ ತಾಯಿ ಮತ್ತು ಮಗುವಿನ ಹತ್ತಿರ ಇರುವವರು ನಗುತ್ತಾರೆ ಒಂದು ವೇಳೆ ಮಗು ಅಳದೇ ಹೋದಲ್ಲಿ ಇವರೆಲ್ಲರು ಅಳುತ್ತಾರೆ. ಮಗು ಅಳಬೇಕು ಅಳದೆ ಇದ್ದಲ್ಲಿ ವೈದ್ಯರು ಮಗುವಿಗೆ ಚೂಟಿ ಅಳಿಸುತ್ತಾರೆ ಎಂದ ಅವರು ನಮ್ಮ ಜೀವನ ಅಳುವಿನಿಂದ ಪ್ರಾರಂಭಗೊಳ್ಳುತ್ತದೆ ನಮ್ಮ ಜೀವನದಲ್ಲಿ ಉಂಟಾದ ದುಃಖವನ್ನು ಕಡಿಮೆ ಮಾಡುವ ಶಕ್ತಿ ಕೂಡ ಅಳುವಿನಲ್ಲಿದೆ. ಅಳು ದುಃಖವನ್ನು ಕಡಿಮೆ ಮಾಡುತ್ತದೆ. ಅಳು ಇಲ್ಲದಿದ್ದಲ್ಲಿ ದುಃಖ ಹೆಚ್ಚಾಗಿ ನಮಗೆ ಮಾರಕವಾಗುತ್ತದೆ ಅಳುವೇ ನಮ್ಮ ಜೀವನದ ಗುಟ್ಟು ಇಂತಹ ಅಳುವಿನ ವರವನ್ನು ದೇವರು ನಮಗೆ ಕೊಟ್ಟ ವರವಾಗಿದೆ ಇದಕ್ಕಾಗಿಯೇ ನಾವು ದೇವರನ್ನು ಪ್ರೀತಿಸಬೇಕು ಅಥವಾ ದೇವರಲ್ಲಿ ಅನುರಾಗ ಹೊಂದಬೇಕು ಎಂದು ಹೇಳಿದರು.
ನಮ್ಮ ಬದುಕಿನಲ್ಲಿ ಅಳು ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದ ವರ ನೋವು. ನಮಗೆ ನೋವು ಆಗದೇ ಹೊದಲ್ಲಿ ನಮ್ಮ ದೇಹಕ್ಕೆ ಗಾಯ ಅಥವಾ ರೋಗವಾಗಿದೆ ಎಂದು ಗೊತ್ತಾಗುವುದೇ ನೋವಿನಿಂದ. ನೋವು ಇಲ್ಲದೆ ಹೋದಲ್ಲಿ ಸಣ್ಣ ಗಾಯ ಕೂಡ ದೊಡ್ಡ ರೋಗವಾಗುತ್ತದೆ. ನೋವು ರೋಗದ ಅಥವಾ ಗಾಯದ ಎಚ್ಚರಿಜೆ ನೀಡುತ್ತದೆ. ಹೀಗಾಗಿಯೇ ದೇವರು ನಮಗೆ ನೋವು ಎನ್ನುವ ವರ ಕೊಟ್ಟಿದ್ದಾನೆ ಇದಕ್ಕಾಗಿಯೇ ನಾವು ದೇವರಿಗೆ ಋಣಿಯಾಗಬೇಕು ಇದಕ್ಕಾಗಿಯೇ ದೇವರನ್ನು ಪ್ರೀತಿಸಬೇಕು ಎಂದು ಹೇಳಿದರು. ಸಂತೋಷ ಪಡುವುದು, ಮಾತನಾಡುವುದು, ಕುಣಿಯುವುದು ಇಂತಹ ಅನೇಕ ವರಗಳನ್ನು ದೇವರು ಕಲ್ಪಿಸಿದ್ದಾನೆ. ಇದನ್ನೆ ಶ್ರೀ ಕೃಷ್ಣ ಭಗವದ್ಗಿತೆಯಲ್ಲಿ ವಿವರಿಸಿದ್ದಾನೆ.
ದೇವರ ಹತ್ತಿರ ಎಲ್ಲವೂ ಇದೆ ಆದರೂ ಕೂಡ ಭಕ್ತರು ಸಮರ್ಪಣೆ ಮಾಡುವ ಪ್ರತಿ ನೈವೆದ್ಯವನ್ನು ಕೂಡ ಸಂತೃಪ್ತಿಯಿಂದ ಪಡದುಕೊಳ್ಳುತ್ತಾನೆ. ಕೌರವರು ಪಾಂಡವರನ್ನು ವಿಷ ಕೊಟ್ಟು, ಬೆಂಕಿ ಹಚ್ಚಿ, ವಿವಿಧ ಶಸ್ತ್ರಗಳಿಂದ ಸಂಹಾರ ಮಾಡಲು ಪ್ರಯತ್ನಿಸಿದರೂ ಕೂಡ ಪಾಂಡವರನ್ನು ಭಗವಂತ ರಕ್ಷಣೆ ಮಾಡಿದ, ಇದೇ ರೀತಿ ಗೋಪಾಲಕರಿಗೂ ಕೂಡ ಅನೇಕ ಕಷ್ಟಗಳು ಬಂದವು ಗೋಪಾಲಕರ ಕಷ್ಟಗಳನ್ನೆಲ್ಲ ತನ್ನ ಕಷ್ಟಗಳೆಂದು ಭಾವಿಸಿ ಕಷ್ಟಗಳಿಂದ ಗೋಪಾಲಕರನ್ನು ರಕ್ಷಿಸುತ್ತಾನೆ. ತನ್ನನ್ನು ನಂಬಿದ ಭಕ್ತರನ್ನು ರಕ್ಷಿಸುತ್ತಿದ್ದಾನೆ ಭಗವಂತ. ಕೆಲ ಅವತಾರಗಳಿಂದ ಮಾತ್ರ ಭಕ್ತರ ಕಷ್ಟಗಳನ್ನು ಪರಿಹರಿಸುತ್ತಾನೆ ಎನ್ನುಷುದಷ್ಟೇ ಅಲ್ಲ ನಮ್ಮ ದೇಹದಲ್ಲಿ ಮುಂದಾಗುವ ಅನಾಹುತಗಳ ಮಾಹಿತಿ ರವಾನಿಸುವುದಕ್ಕೆ ನಮ್ಮ ಇಂದ್ರಿಯಗಳಿಗೂ ಭಗವಂತ ಪ್ರೇರೆಪಿಸುತ್ತಾನೆ.
ಮಹಾಭಾರತ, ರಾಮಾಯಣ, ಭಗವದ್ಗಿತೆ, ಅನೇಕ ಶಾಸ್ತ್ರಗಳ ಮೂಲಕ ಮಾರ್ಗದಶನ ಮತ್ತು ಅನುಗೃಹ ನೀಡಿದ ಭಗವಂತನನ್ನು ಪ್ರೀತಿಸಬೇಕು ಎಂದು ಶ್ರೀಮದ್ ಭಾಗವತದಲ್ಲಿ ಹೇಳಲಾಗಿದೆ. ಕಣ್ಣಿಗೆ ದೇವರು ಕಾಣುವುದಿಲ್ಲ ಶಾಸ್ತ್ರಗಳ ಮೂಲಕ ಭಗವಂತನ್ನು ತಿಳಿಯಬೇಕು ಎಂದು ಹೇಳಿದರು.