ಸಾಹಿತ್ಯ ಬದುಕಿನ ಸಂಭ್ರಮ ಹೆಚ್ಚಿಸಿದೆ: ಸಾಹಿತಿ ಯಾಕೊಳ್ಳಿ

Literature has increased the excitement of life: Yakolli

ಬೈಲಹೊಂಗಲ 04: ಇತ್ತೀಚೆಗೆ ಯಕ್ಕುಂಡಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾಗಿ ನಿವೃತ್ತರಾದ ನಾಡಿನ ಖ್ಯಾತ ಸಾಹಿತಿಗಳು, ವಾಗ್ಮಿಗಳಾದ ಡಾ. ಯಲ್ಲಪ್ಪ ಯಾಕೊಳ್ಳಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.  

ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಓದು, ಬರವಣಿಗೆ ಮನಸ್ಸಿಗೆ ನೆಮ್ಮದಿ ನೀಡುವ ಸಾಧನಗಳು. ಆದ್ದರಿಂದಲೇ ಸಾಹಿತ್ಯದ ಒಡನಾಟ ಬದುಕಿನ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಅಪಾರ ಶಿಷ್ಯರು ಮತ್ತು ಸಹೃದಯಿ ಸ್ನೇಹಿತರ ಅಭಿಮಾನ, ಪ್ರೀತಿ, ವಿಶ್ವಾಸಗಳಿಗೆ ಬೆಲೆ ಕಟ್ಟಲಾಗದು ಎಂದು ಅವರು ಧನ್ಯತಾ ಭಾವದಿಂದ ನುಡಿದರು. ಸಂಭ್ರಮ ಫೌಂಡೇಶನ್ ಅಧ್ಯಕ್ಷರಾದ ಕಿರಣ ಗಣಾಚಾರಿ ಮಾತನಾಡಿ ಅನೇಕ ಯುವ ಸಾಹಿತಿಗಳಿಗೆ, ಉದಯೋನ್ಮುಖ ಬರಹಗಾರರಿಗೆ ಯಾಕೊಳ್ಳಿಯವರು ಪ್ರೇರಣೆಯಾಗಿದ್ದಾರೆ ಎಂದರು. ವೈಶಿಷ್ಟ್ಯಪೂರ್ಣ ಬರವಣಿಗೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಅವರ ಸೃಜನಶೀಲತೆಗೆ ಸಾಕ್ಷಿಯಾಗಿದ್ದು ಅನೇಕ ಗೌರವ, ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬಂದಿವೆ ಎಂದು ಅವರು ಹೇಳಿದರು.  

ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್‌.ಆರ್‌. ಠಕ್ಕಾಯಿ ಮಾತನಾಡಿ ನಾಡಿನ ಎಲ್ಲೆಡೆ ಸಾಕಷ್ಟು ಮೌಲಿಕ ಉಪನ್ಯಾಸಗಳನ್ನು ನೀಡುವುದರ ಮೂಲಕ ಎಲ್ಲರಲ್ಲಿ ಸಾಹಿತ್ಯದ ಒಲವು ಹೆಚ್ಚಿಸುವ ಕೆಲಸ ಮಾಡುತ್ತಿರುವ ಯಾಕೊಳ್ಳಿಯವರ ಕ್ರಿಯಾಶೀಲತೆ ಪ್ರಶಂಸನೀಯವಾದದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕವಿತೆ, ಚುಟುಕು, ತನಗ, ಗಜಲ್, ಆಧುನಿಕ ವಚನ, ವಿಮರ್ಶೆ, ಸಂಪಾದನೆ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವುದು ಅವರ ಹಿರಿಮೆ ಎಂದು ಅವರು ಅಭಿಪ್ರಾಯಪಟ್ಟರು.  

ಸಾಹಿತಿಗಳಾದ ಡಾ. ಮಲ್ಲಿಕಾರ್ಜುನ ಛಬ್ಬಿ ಮಾತನಾಡಿ ಕನ್ನಡ ವಿಷಯದ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ವಿಚಾರ ಸಂಕಿರಣ, ಗೋಷ್ಠಿ, ಸಂವಾದ, ಸಾಹಿತ್ಯ ಸಮ್ಮೇಳನ, ನಾನಾ ಕಾರ್ಯಾಗಾರಗಳಲ್ಲಿ ಭಾಗಿಯಾದ ಯಾಕೊಳ್ಳಿಯವರ ಜ್ಞಾನ, ಅನುಭವ ಅಗಾಧವಾದದ್ದು ಎಂದು ಹೇಳಿದರು. 

ಕವಿಗಳಾದ ಸಿದ್ದು ನೇಸರಗಿ ಮಾತನಾಡಿ ಡಾ. ಯಾಕೊಳ್ಳಿಯವರ ನಿಟ್ಟುಸಿರು ಬಿಡುತ್ತಿದೆ ಕವಿತೆ, ಚಿಂದಿ ಆಯುವ ಹುಡುಗಿ, ನಿಂತು ಹೋದ ನದಿಗಳು ಮುಂತಾದ ಕವನಸಂಕಲನಗಳಲ್ಲಿ ನವಿರಾದ ಭಾವ, ಸೂಕ್ಷ್ಮ ಸಂವೇದನೆ ಎಲ್ಲರಿಗೂ ಇಷ್ಟವಾಗುವಂತದ್ದು ಎಂದು ಹೇಳಿದರು. ನಿವೃತ್ತಿ ಜೀವನ ಸುಖಕರವಾಗಲಿ ಹಾಗೂ ಇನ್ನೂ ಹೆಚ್ಚಿನ ಸಾಹಿತ್ಯ ಕೃಷಿಯನ್ನು ಮುಂದುವರೆಸಲಿ ಎಂದು ಶುಭಕೋರಿದರು.  

ಕಾರ್ಯಕ್ರಮದಲ್ಲಿ ಕವಯತ್ರಿ ಡಾ. ಪ್ರೇಮಾ ಯಾಕೊಳ್ಳಿ ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕರಾದ ಜಿ.ಎಸ್‌.ತೋಟಗಿ ಸ್ವಾಗತಿಸಿದರು. ಲತಾ ತೋಟಗಿ ವಂದಿಸಿದರು.