ವಿದ್ಯಾರ್ಥಿ ದೆಸೆಯಲ್ಲಿಯೇ ಕಲಾ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು: ಗಿರಿಜಾ ಹಿರೇಮಠ

ಲಿಂಗರಾಜ ಪಿಯು ಕಾಲೇಜಿನಲ್ಲಿ ಸಾಹಿತ್ಯ ಉತ್ಸವ 

ಬೆಳಗಾವಿ 21: ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಪ್ರತಿಭೆ ಸೂಪ್ತವಾಗಿರುತ್ತದೆ. ಅದನ್ನು ಅನಾವರಣಗೊಳಿಸುವುದು ಸೂಕ್ತ. ನಾವು ನಿತ್ಯ ಜೀವನದಲ್ಲಿ ಅನುಭವಿಸುವ ಸಂಗತಿಗಳಿಗೆ ಅಕ್ಷರ, ಚಿತ್ರದ ಮೂಲಕ ಜೀವತುಂಬಿಸುವ ಕೆಲಸ ಮಾಡಬೇಕು. ಅದು ಮುಂದೊಮ್ಮೆ ನಮ್ಮಲ್ಲಿ ಹೆಮ್ಮರವಾಗಿ ಬೆಳೆಯುತ್ತದೆ ಎಂದು ಲಿಂಗರಾಜ ಪಿಯು ಪ್ರಾಚಾರ್ಯೆ ಗಿರಿಜಾ ಹಿರೇಮಠ ಹೇಳಿದರು. 

ಲಿಂಗರಾಜ ಪಿಯು ಕಾಲೇಜಿನಲ್ಲಿ ಪಿಯು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಒಂದು ದಿನದ ‘ವೇದವ್ಯೂಹ’ ಸಾಹಿತ್ಯ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಅನೇಕ ವಿದ್ಯಾರ್ಥಿಗಳಲ್ಲಿ ಒಂದು ವಿಶಿಷ್ಟ ಅಭಿವ್ಯಕ್ತಿಗೊಳಿಸುವ ಶಕ್ತಿ  ಸಾಮರ್ಥ್ಯ ಇರುತ್ತದೆ. ತಾವು ನಿತ್ಯ ಬದುಕಿನಲ್ಲಿ ಕಂಡುಂಡ ಸಂಗತಿಗಳನ್ನು ಸಾಹಿತ್ಯದ ಮೂಲಕ ಹೊರಹೊಮ್ಮಿಸುವ ಕೆಲಸವನ್ನು ಮಾಡಬೇಕು. ಕಲೆ ಮಾಧ್ಯಮವು ಬಹಳ ವಿಸ್ತಾರವಾದುದು. ನಮ್ಮ ಅನುಭವಗಳನ್ನು ಕಾವ್ಯ, ಕಥೆ, ನಾಟಕ, ಚಿತ್ರಕಲೆ ಹೀಗೆ ವಿಭಿನ್ನ ನೆಲೆಗಳ ಮೂಲಕ ಹೊರಹೊಮ್ಮಿಸಿದಾಗ ನಮ್ಮೊಳಗಿನ ಪ್ರತಿಭೆ ಅನಾವರಣಗೊಳಿಸುತ್ತದೆ. ಅಂತೆಯೇ ವಿದ್ಯಾರ್ಥಿಗಳಲ್ಲಿ ವಿವಿಧ ಸ್ಪರ್ಧೆಗಳ ಮೂಲಕ ಅವರ ಸಾಹಿತ್ಯ ಅಭಿರುಚಿಯನ್ನು ಪ್ರೇರೇಪಿಸಲು ಸಾಹಿತ್ಯ ಉತ್ಸವವನ್ನು ಆಯೋಜಿಸಲಾಗಿದೆ. ಇದರ ಲಾಭವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಹೇಳಿದರು. 

ಬೆಳಗಾವಿ ಸುತ್ತಮುತ್ತಲಿನ ಹಲವಾರು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಈ ಉತ್ಸವದಲ್ಲಿ ಪಾಲ್ಗೊಂಡು ಸ್ವರಚಿತ ಕವನ, ಚಿತ್ರಮಾತು, ಪ್ರಬಂಧ, ಕತೆ, ಚರ್ಚಾಕೂಟ, ಭಾಷಣ ವಿವಿಧ ಸ್ಪರ್ಧೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರಸ್ತುತಪಡಿಸಿದರು. ಸಮಾರೋಪ ಸಮಾರಂಭದಲ್ಲಿ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಪ್ರಶಾಂತ ಖೋತ ಅವರು ಬಹುಮಾನಗಳನ್ನು ವಿತರಣೆ ಮಾಡಿದರು. ಶ್ರದ್ಧಾ ಪಾಟೀಲ, ಲಕ್ಷ್ಮೀ ಬಿರಾದಾರ, ರವೀಂದ್ರ ಬಡಿಗೇರ ಮೊದಲಾದ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.