ಸಾಹಿತಿ, ಪ್ರವಾಸಾಸಕ್ತೆ : ಡಾ. ಲತಾ ಗುತ್ತಿ

ಕಾವ್ಯ, ಪ್ರವಾಸ ಕಥನ, ಕಾದಂಬರಿ, ಕಥೆ, ಸಂಪಾದನೆ, ಅನುವಾದ, ಜೀವನಚರಿತ್ರೆ, ವೈಚಾರಿಕ ಲೇಖನ ಹೀಗೆ ಸಾಹಿತ್ಯದ ಬಹು ಪ್ರಕಾರಗಳಲ್ಲಿ 1980ರಿಂದ ನಿರಂತರ ಸಾಹಿತ್ಯ ಕೃಷಿ ನಡೆಸುತ್ತ ಬಂದಿರುವರು ಸಾಹಿತಿ ಲತಾ ಗುತ್ತಿಯವರು. ದೇಶ ಸುತ್ತಿ, ಕೋಶ ಓದು ಎಂಬ ಗಾದೆಯಂತೆ ಅವರು ದೇಶಗಳನ್ನು ಸುತ್ತುವದರೊಂದಿಗೆ ಆಯಾದೇಶಗಳಲ್ಲಿಯ ವಿಶೇಷಗಳನ್ನು ಕೃತಿಗಳಲ್ಲಿ ಸೆರೆಹಿಡಿದು ಕನ್ನಡ ಸಾಹಿತ್ಯ ಲೋಕಕ್ಕೆ ಸಮರ​‍್ಿಸಿರುವದು ವಿಶೇಷವಾಗಿದೆ. 

ಲತಾ ಗುತ್ತಿಯವರು ಬೆಳಗಾವಿಯಲ್ಲಿ 1953ರ ಅಗಷ್ಟ 12ರಂದು ಜನಿಸಿದರು. ತಂದೆ ನಾಗನಗೌಡ, ತಾಯಿ ಶಾಂತಾದೇವಿ. ಅವರ ತಂದೆ ರಾಜ್ಯ ಸರ್ಕಾರದಲ್ಲಿ ಕೃಷಿ ಅಧಿಕಾರಿಯಾಗಿದ್ದರು. ಅವರಿಗೆ ರಾಜ್ಯದ ವಿವಿಧ ಸ್ಥಳಗಳಿಗೆ ವರ್ಗಾವಣೆ ಆಗಿರುವದರಿಂದ ಲತಾರವರು ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಬೇರೆ ಬೇರೆ ಊರುಗಳಲ್ಲಿ ಮುಗಿಸಿದರು. ನಂತರ ಬೆಳಗಾವಿಯ ಲಿಂಗರಾಜ ಕಾಲೇಜಿನಿಂದ ಬಿ.ಎ. ಇತಿಹಾಸದಲ್ಲಿ ಪ್ರಥಮ ದರ್ಜೆಯೊಂದಿಗೆ ತೇರ್ಗಡೆಯಾದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ಇಂಗ್ಲೀಷನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಲತಾರವರು ಬೆಳಗಾವಿಯ ಸಮೀಪದ ಸುಲಧಾಳದ ಸೋದರ ಮಾವ ಮಲ್ಲನಗೌಡ ಗುತ್ತಿ ಪಾಟೀಲ ಅವರನ್ನು ಇಷ್ಟಪಟ್ಟು ಮದುವೆಯಾದರು. ಅವರು ಮುಂಬೈ ಎನ್‌ಜಿಎಫ್‌-ಎಇಜಿ ಕಂಪನಿಯಲ್ಲಿ ಇಂಜನೀಯರ ಆಗಿದ್ದರು. ನಂತರ ಅವರು ಪತಿಯೊಂದಿಗೆ ಮುಂಬೈಗೆ ತೆರಳಿದರು. 2006ರಲ್ಲಿ ಡಾ. ಎಂ. ಎಂ. ಕಲಬುರ್ಗಿಯವರ ಮಾರ್ಗದರ್ಶನದಲ್ಲಿ ‘ಪ್ರವಾಸ ಸಾಹಿತ್ಯ ; ವಿಶ್ವ ಸಂಸ್ಕೃತಿಗಳ ಅಧ್ಯಯನ’ ಪ್ರೌಢ ಪ್ರಬಂಧವನ್ನು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ, ಪ್ರವಾಸ ಸಾಹಿತ್ಯದಲ್ಲಿ ಮೊದಲನೆಯ ಪಿಹೆಚ್‌.ಡಿ. ಎಂಬ ಹೆಗ್ಗಳಿಕೆಗೆ ಪಾತ್ರರಾದರು. 

ಅವರು 7ನೆಯ ತರಗತಿಯಲ್ಲಿರುವಾಗಲೇ ಬೆಳಗಾವಿ ಜಿಲ್ಲೆಯ ಬರವಣಿಗೆ ಸ್ಪರ್ಧೆಯಲ್ಲಿ ‘ನುಡಿದರೆ ಮುತ್ತಿನ ಹಾರದಂತಿರಬೇಕು’ ವಚನ ಕುರಿತು ಬರೆದು ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದ್ದರು. ತಂದೆ ತಾಯಿ ಇಬ್ಬರೂ ಖುಷಿಪಟ್ಟರು. ಅದೇ ಅವರಿಗೆ ಸಾಹಿತ್ಯ ಬರವಣಿಗೆಗೆ ಕಾರಣವಾಯಿತು. ಲತಾರವರು ಎಸ್‌.ಎಸ್‌.ಎಲ್‌.ಸಿ. ಓದುತ್ತಿದ್ದಾಗ ಮನೆಯವರಿಗೆ ಗೊತ್ತಾಗದಂತೆ ಯುವ ಪ್ರೇಮಿಗಳ ಕುರಿತು ಕಾದಂಬರಿ ‘ಗರಿಯೊಡೆದ ಹಕ್ಕಿ’ ಯನ್ನು ಓದಿದರು. ಅವರು ಎಂ.ಎ. ಅಧ್ಯಯನದಲ್ಲಿದ್ದಾಗಲೇ ‘ಹೃದಯ ಪಲ್ಲವಿ’ ಕಾದಂಬರಿಯನ್ನು ಬರೆದರು. ಅಲ್ಲದೇ 1975ರಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಚೆನ್ನವೀರ ಕಣವಿಯವರ ಅಧ್ಯಕ್ಷತೆಯಲ್ಲಿ ಜರುಗಿದ ಕವಿಗೋಷ್ಠಿಯಲ್ಲಿ ‘ವರ್ತಮಾನ’ ಕವಿತೆ ಓದಿ, ಹಿರಿಯರಿಂದ ಭೇಷ ಅನ್ನಿಸಿಕೊಂಡಿದ್ದರು. ಅವರು 1980ರಲ್ಲಿ ಜಮಖಂಡಿಯಲ್ಲಿದ್ದಾಗ ಮೊದಲ ಕವನ ಸಂಕಲನ ‘ವರ್ತಮಾನ’ವನ್ನು ಪ್ರಕಟಿಸಿದರು. 1980 ಅವರ ಸಾಹಿತ್ಯ ಲೋಕಕ್ಕೆ ಹೊಸಬಾಗಿಲು ತೆರೆದುಕೊಂಡಿತು. ಅಲ್ಲಿಂದ ಅವರು ನಿರಂತರವಾಗಿ ಕೃತಿಗಳನ್ನು ರಚಿಸತೊಡಗಿದರು. 

ಡಾ. ಲತಾ ಗುತ್ತಿಯವರು ವರ್ತಮಾನ, ಗಾಂಜಾಡಾಲಿ, ಬೆಳ್ಳಿಹೂವು, ಸೂಜಿಗಲ್ಲು, ಇರುವಿಕೆ, ಆಕಾಶಗೀತೆಗಳು, ಭೂಮಿ ಬಾನಿನ ನಡುವೆ, ಕಿಚ್ಚ ಹಾಯುವ ಕಾಲ ಕವನ ಸಂಕಲನಗಳು, ಕಡಲಾಚೆಯ ಕಥೆಗಳು ಕಥಾ ಸಂಕಲನ, ಹೆಜ್ಜೆ, ಕರಿ ನೀರು ಕಾದಂಬರಿಗಳು, ಯುರೋನಾಡಿನಲ್ಲಿ, ನಾ ಕಂಡಂತೆ ಅರೇಬಿಯಾ, ಅಂಡಮಾನಿನ ಎಳೆಯನು ಹಿಡಿದು, ಚಿರಾಪುಂಜಿಯವರೆಗೆ ಪ್ರವಾಸ ಸಾಹಿತ್ಯ : ವಿಶ್ವಸಂಸ್ಕೃತಿಗಳು ಪ್ರವಾಸ ಕಥನಗಳು, ಡಾ. ಲೀಲಾವತಿ ತೋರಣಗಟ್ಟಿ ವ್ಯಕ್ತಿ ಚಿತ್ರಣ ಕೃತಿ, ಇಂಗ್ಲೀಷ ಸಾಹಿತ್ಯದಲ್ಲಿ ಮಹಿಳಾ ಪಾತ್ರಗಳು ವಿಮರ್ಶಾ ಕೃತಿ, ಪ್ರವಾಸ ಸಾಹಿತ್ಯದ ಒಳನೋಟಗಳು, ಗ್ರೀನ್ ಸನ್ ಇಂಗ್ಲೀಷಗೆ ಅನುವಾದಿತ ಲೇಖಕಿಯ ಕವಿತೆಗಳು, ರಾಷ್ಟ್ರೀಯ ಅಂತರಾಷ್ಟ್ರೀಯ ದಿನಾಚರಣೆಗಳು, ಮಹಿಳಾ ಸಾಹಿತ್ಯ ಚರಿತ್ರೆ, ಕವಿತೆ ಸಂಪಾದಿತ ಕೃತಿಗಳು, ಕವಿತೆ ಉದಯಿಸಿದಾಗ ಅನುವಾದ ಕೃತಿ ಹೀಗೆ 25ಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಸಮರ​‍್ಿಸಿದ್ದಾರೆ. 

ಲತಾ ಗುತ್ತಿಯವರು ಪತಿ ಮಲ್ಲನಗೌಡರೊಂದಿಗೆ ಜೆಡ್ಡಾದಿಂದ ಯುರೋಪದ ಹಲವು ದೇಶಗಳನ್ನು ಸುತ್ತಿಬಂದು ಭಾರತಕ್ಕೆ ಮರಳಿದ ಹಲವಾರು ದಿನಗಳ ನಂತರ ಪ್ರವಾಸಾನುಭವಗಳನ್ನು ಕೃತಿ ರೂಪದಲ್ಲಿ ಹೊರ ತಂದಿದ್ದಾರೆ. ಅವರ ಪ್ರವಾಸ ಕಥನ ಯುರೋನಾಡಿನಲ್ಲಿ ವರ್ಣನಾತ್ಮಕವಾಗಿದ್ದು ಅದು ವಿವರಗಳನ್ನು ಒದಗಿಸುವಲ್ಲಿ ಹೆಚ್ಚಿನ ಕಾಳಜಿ ಹೊಂದಿರುವಂತಿದೆ. ಅವರು ತಮ್ಮ ಯುರೋನಾಡಿನಲ್ಲಿ ಅನುಭವಗಳನ್ನು ಆಸಕ್ತಿಯಿಂದ ಬಣ್ಣಿಸಿದ್ದಾರೆ. ನಾ ಕಂಡಂತೆ ಅರೇಬಿಯಾ ಕೃತಿಯಲ್ಲಿ ಅವರು ಸೌದಿ ಅರೇಬಿಯಾದಲ್ಲಿ ಅನುಭವಿಸಿದ ಘಟನೆಗಳನ್ನು ವಿವರಿಸುವದರ ಜೊತೆಗೆ ಭಾರತದ ವಿವಿಧ ರಾಜ್ಯಗಳಿಂದ ಬಂದ ಶ್ರಮಜೀವಿಗಳ ಬದುಕು, ಹಿನ್ನೆಲೆ ಬಗ್ಗೆಯೂ ವಿವರಣೆ ನೀಡಿದ್ದಾರೆ. ಅದು ಕೇವಲ ಪ್ರವಾಸ ಸಾಹಿತ್ಯ ಕೃತಿಯಾಗಿರದೇ ಅ ರಾಷ್ಟ್ರದ ಒಟ್ಟಾರೆ ಬದುಕಿನ ಬಗ್ಗೆ ಪಕ್ಷಿನೋಟ, ನೀಡುವ ಕೃತಿಯಾಗಿದೆ. ಅವರ ‘ಬೆಳ್ಳಿ ಹೂವು’ ಹನಿಗವನ ಸಂಕಲನವು ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಬದುಕಿನ ಅರ್ಥವಂತಿಕೆಯ ಹಲವು ಪ್ರಶ್ನೆ, ಉತ್ತರ ಹುಡುಕಾಟ, ಸಂಬಂಧ, ಸಂವೇದನೆ, ಸುಖ-ದುಃಖದ ತೀವ್ರತೆಗಳೆಲ್ಲ ತೊಟ್ಟಿಕ್ಕಿದ ಹನಿಗಳ ಸಂಗ್ರಹವಿದು. ಅವರ ‘ಸೂಜಿಗಲ್ಲು’ ಕೃತಿಯಲ್ಲಿ 46 ಕವಿತೆಗಳಿವೆ. ನಮ್ಮೆದುರಿನ ಸಣ್ಣ ಪುಟ್ಟ ವಿಷಯಗಳನ್ನು ಸುಂದರ ಕವಿತೆಗಳನ್ನಾಗಿ ಹಿಡಿದಿಟ್ಟಿದ್ದಾರೆ. ಅದಕ್ಕೆ ವಾಸ್ತವ, ಬ್ರಿಗೇಡ್ ರಸ್ತೆ, ಕಾಡು ಬೆಳದಿಂಗಳು, ಪ್ರಶ್ನೆ, ಹೆಂಡತಿಗೆ ಬರೆದ ಪತ್ರ, ಕ್ಯಾಟ್ ವಾಕ್ ಹುಡುಗಿ ಮೊದಲಾದ ಕವಿತೆಗಳೇ ಸಾಕ್ಷಿಗಳಾಗಿವೆ. ಲತಾರವರ ಹೆಜ್ಜೆ ಕಾದಂಬರಿಯ ಹೆಣ್ಣಿನ ಅದರಲ್ಲೂ ದಲಿತ ಹೆಣ್ಣುಮಕ್ಕಳ ಶೋಷಣೆಯನ್ನು ಚಿತ್ರಿಸುವದು ಕಾದಂಬರಿಯ ಪ್ರಮುಖ ಆಶಯವಾಗಿದೆ. ಉಚ್ಛವರ್ಗದ ಗೌಡನ ಕುಟುಂಬದಷ್ಟೇ ಸಮರ್ಥವಾಗಿ ದ್ಯಾಮಪ್ಪ-ಕೆಂಚಿಯರ ದಲಿತರ ಕೇರಿಯ ಬದುಕೂ ಅನಾವರಣಗೊಂಡಿರುವದು ಕಾದಂಬರಿಯ ಧನಾತ್ಮಕ ಅಂಶ. ‘ಕರಿ ನೀರು’ ಕಾದಂಬರಿ ಬ್ರಿಟೀಷರ ಕಾಲದಲ್ಲಿನ ಬೆಳಗಾವಿ ಹಳ್ಳಿಯೊಂದರಲ್ಲಿ ಕಥೆ ಹುಟ್ಟಿಕೊಳ್ಳುತ್ತದೆ. ಹೆಣ್ಣಿನ ಮಾನ ರಕ್ಷಣೆಗಾಗಿ ಅನಿವಾರ್ಯವಾಗಿ ಕೊಲೆಗಾರನಾಗುವ ಕಥಾ ನಾಯಕ ಕಾಲಾಪಾನಿ ಶಿಕ್ಷೆಗೆ ಒಳಗಾಗುತ್ತಾನೆ. ಅಲ್ಲಿನ ಅನುಭವಗಳಿಂದ ಬೆಳೆದು ಸ್ವಾತಂತ್ರ್ಯ ಹೋರಾಟಗಾರನಾಗುತ್ತಾನೆ. ಆ ಪ್ರದೇಶದ ಗ್ರಾಮೀಣ ಬದುಕು, ಸಾಮೂಹಿಕ ಆಚರಣೆಗಳು, ಅಲ್ಲಿನ ಸಂಸ್ಕೃತಿ, ಹಬ್ಬಗಳು ಓದುಗರ ಕಣ್ಣ ಮುಂದೆ ತೆರೆದಿಡುತ್ತವೆ. ಹದಿನೈದು ವರ್ಷಗಳ ಕಾಲ ಸೌದಿ ಅರೇಬಿಯಾದಲ್ಲಿ ವಾಸಿಸಿದ್ದ ಲತಾ ಗುತ್ತಿಯವರು ವಿದೇಶದ ಬದುಕಿನ ಅನುಭವಗಳನ್ನೆಲ್ಲ ‘ಕಡಲಾಚೆಯ ಕಥೆಗಳು’ ಕೃತಿಯಲ್ಲಿ ರೂಪಿಸಿದ್ದಾರೆ. ಈ ಕೃತಿ ವಿದೇಶಾನುಭವ ಮತ್ತು ಅಲ್ಲಿನ ಸ್ವಾಭಾವಿಕ ಚಿಂತನೆಗಳಿಂದ ರೂಪಗೊಂಡಿದೆ. ವಿದೇಶಗಳ ರೀತಿ ನೀತಿ, ಆಚಾರ ವಿಚಾರಗಳ ನೇರ ಹಾಗೂ ದಟ್ಟ ಪರಿಚಯವಿರುವ ಲತಾ ಸ್ವಾನುಭವಗಳನ್ನು ಸೃಜನಾತ್ಮಕವಾಗಿ ತೋಡಿಕೊಂಡಿದ್ದಾರೆ. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೈಯಾಡಿಸಿರುವ ಲತಾರವರಿಗೆ ವಿಶೇಷ ಆಸಕ್ತಿಯಿರುವದು ಪ್ರವಾಸ ಸಾಹಿತ್ಯವೆಂಬುದು ಅವರು ಹೊರತಂದಿರುವ ಪ್ರವಾಸ ಸಾಹಿತ್ಯ ಕೃತಿಗಳಿಂದಲೇ ಗೊತ್ತಾಗುತ್ತದೆ. 

ಡಾ. ಲತಾ ಗುತ್ತಿ ಅವರ ಸಾಹಿತ್ಯ ಸೇವೆಯನ್ನು ಗುರುತಿಸಿ ನಾಡಿನ ಹಲವಾರು ಸಂಘ-ಸಂಸ್ಥೆಗಳು ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಸನ್ಮಾನಿಸಿವೆ. ಕರ್ನಾಟಕ ಪತ್ರಿಕಾ ಮತ್ತು ಸಾಹಿತ್ಯ ಮಿತ್ರ ವೃಂದದವರಿಂದ ಸಾಹಿತ್ಯ ರತ್ನ ಪ್ರಶಸ್ತಿ, ಕನ್ನಡ ಅಭಿವೃದ್ಧಿ ಬಳಗದಿಂದ ಕರ್ನಾಟಕ ರತ್ನ, ಕನ್ನಡ ಅಭಿವೃದ್ಧಿ ಬಳಗದಿಂದ ಕವಿರತ್ನ ಪ್ರಶಸ್ತಿ, ಬೆಳಗಾವಿಯ ನಾಡೋಜ ಪ್ರತಿಷ್ಠಾನದಿಂದ ಕಾತ್ಯಾಯಿನಿ ಸಮ್ಮಾನ, ಕರ್ನಾಟಕ ಲೇಖಕಿಯರ ಸಂಘದಿಂದ ವಿಶಿಷ್ಟ ಲೇಖಕಿ ಸನ್ಮಾನ, ಕೇಂದ್ರ ಸಾಹಿತ್ಯ ಪರಿಷತ್ತಿನಿಂದ ಪಂಕಜ ಶ್ರೀ ಸಾಹಿತ್ಯ ಸನ್ಮಾನ, ರತ್ನಾಕರ ವರ್ಣಿ ಮುದ್ದಣ ಕಾವ್ಯ ಪ್ರಶಸ್ತಿ, ಗೊರುರು ಸಾಹಿತ್ಯ ಪ್ರಶಸ್ತಿ, ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ನೀಲಗಂಗಾ ದತ್ತಿ ಪ್ರಶಸ್ತಿ, ಅಂತರಾಷ್ಟ್ರೀಯ ಮಹಿಳಾ ವರ್ಷ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ರತ್ನಮ್ಮ ಹೆಗ್ಗಡೆ ಪ್ರಸಸ್ತಿ, ಬಿ.ಎಂ.ಶ್ರೀ ಪ್ರತಿಷ್ಠಾನ ಪ್ರಶಸ್ತಿ,  ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿ-ಪುರಸ್ಕಾರಗಳಿಗೆ ಅವರು ಭಾಜನರಾಗಿದ್ದಾರೆ. ಅವರ ‘ನಾ ಕಂಡಂತೆ ಅರೇಬಿಯಾ ಪ್ರವಾಸ ಸಾಹಿತ್ಯ ಕೃತಿಯು ಕಲಬುರ್ಗಿ ವಿಶ್ವವಿದ್ಯಾಲಯದ ಪದವಿ ತರಗತಿಗಳಿಗೆ ಪಠ್ಯಪುಸ್ತಕವಾಗಿತ್ತು. 

1995 ರಿಂದ ಅವರು ಬೆಂಗಳೂರಿನ ಇಸ್ರೋ ಬಡಾವಣೆಯಲ್ಲಿ ಪತಿ ಮಲ್ಲನಗೌಡ, ಮಕ್ಕಳು ಮೊಮ್ಮಕ್ಕಳೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಡಾ.ಲತಾ ಗುತ್ತಿಯವರ ಜೀವನೋತ್ಸಾಹ, ಸಾಮಾಜಿಕ ಕಳಕಳಿ ಎಲ್ಲರಿಗೂ ಮಾದರಿಯಾಗಲಿ. ಸಂಪರ್ಕಿಸಿ: 9343044662 

- 0 0 0 -