ಲೋಕದರ್ಶನ ವರದಿ
ಬೆಳಗಾವಿ26- ಮನಕ್ಕೆ ನೆನಹಾಗಿ ಕಾಡಿತ್ತು ಮಾಯೆ.! ನೆನಹು ಒಂದು ಮಾಯೆ. ಭೂತಕಾಲ ವಿಷಯಗಳ ನೆನೆಯುತಿರಬಾರದು, ಭವಿಷ್ಯದ ಬಗ್ಗೆ ಚಿಂತಿಸದೆ, ವರ್ತಮಾನದಲ್ಲಿ ಬದುಕುವದೇ ಜೀವನ. ಮರೆವು ಶಿವಕೃಪಾ ಆಗಬೇಕಾದರೆ ಇಷ್ಟಲಿಂಗ ನಿರೀಕ್ಷೆಯಿಂದ ಮಾತ್ರ ಸಾದ್ಯ ಎಂದು ಪೂಜ್ಯ ಶ್ರೀ ನಿಜಗುಣ ಪ್ರಭು ಮಾಸ್ವಾಮಿಗಳು, ಇಂದಿಲ್ಲಿ
ಹೇಳಿದರು.
ಜಾಗತಿಕ ಲಿಂಗಾಯತ ಮಹಾಸಭೆ ಹಾಗೂ ರಾಷ್ಟ್ರೀಯ ಬಸವ ಸೇನೆ ಮತ್ತು ವಿವಿದ ಮಹಿಳಾ ಹಾಗೂ ಬಸವ ಪರ ಸಂಘಟನೆ ಯವರ ಸಹಯೋಗದೊಂದಿಗೆ ಮಹಾಂತ ಭವನದ ಆವರಣದಲ್ಲಿ ಆಯೋಜಿಸಿದ 15 ನೆಯ ದಿನದ "ಶರಣ ದರ್ಶನ ಪ್ರವಚನ" ಕಾರ್ಯದಲ್ಲಿ ಮೇಲಿನಂತೆ ತಿಳಿಸಿದರು.
ಮುಂದೆ ಮಾತಾಡುತ್ತ ಅವರು ಸ್ಥೂಲ ಶರೀರಕ್ಕೆ ಇಷ್ಟಲಿಂಗ, ಸೂಕ್ಷ್ಮ ಶರೀರಕ್ಕೆ ಪ್ರಾಣ ಲಿಂಗ ಕಾರಣ ಶರೀರಕ್ಕೆ ಭಾವಲಿಂಗ. ದಾರ್ಶನಿಕರು ನಮಗೆ ಹಲವು ಯೋಗಗಳ ಕುರಿತು ಹೇಳಿದ್ದು, ಅವುಗಳಲ್ಲಿ ದೃಷ್ಟಿ ಯೋಗವೂ (ತ್ರಾಟಕ ಯೋಗ) ಒಂದು. ಎಲ್ಲ ಯೋಗಗಳಲ್ಲಿ ಲಿಂಗಾಂಗಯೋಗ ಶ್ರೇಷ್ಠವಾದದ್ದು. ಆಲ್ಲಿಂದಲೇ ಸುಳಿವ ಗಾಳಿ ನಿಲುವದು. ಚಂಚಲತೆಯಿಂದ ಕೂಡಿದ ಮನವನ್ನು ಹತೋಟಿಗೆ ತರುವ ಯೋಗ ಲಿಂಗಾಂಗಯೋಗ ಎಂದು ಅವರು ಹೇಳಿದರು.
ಇದೆ ಸಂದರ್ಭದಲ್ಲಿ ಶರಣ ಅರವಿಂದ ಪರುಶೆಟ್ಟಿಯವರು ತಾವು ಪರೀಕ್ಷರಣೆ ಮಾಡಿದ ಇಷ್ಟಲಿಂಗದ ಕುರಿತು ಅನುಭಾವ ನುಡಿಗಳನ್ನಾಡಿದರು. ಪವಾಡ ಬಯಲು ಅನೇಕ ಕಡೆಗಳಲ್ಲಿ ನೀಡಿ ಜನಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿರುವ ಅಲ್ಲದೇ ರಾಷ್ಟ್ರಪ್ರಶಸ್ತಿ ಪಡೆದ ಶರಣ ಎಸ್ ಆರ್ ಡೊಂಗರೆ ಶಿಕ್ಷಕರು ಮೂಢನಂಬಿಕೆ ಕುರಿತು ತಮ್ಮ ನಗುಮಾತಿನಲ್ಲಿಯೇ ಎಲ್ಲರಗೂ ತಿಳಿಯುವಂತೆ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಹಲವು ಸಂಘಟನೆಗಳ ಸದಸ್ಯರು, ಬಸವ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು.