ಭಾರತೀಯ ಪಾರಂಪರಿಕ ಜ್ಞಾನದ ಜೊತೆಗೆ ವಿಜ್ಞಾನ ಸಮನ್ವಯಗೊಳ್ಳಲಿ : ಪ್ರೊ. ವೆಂಕಪ್ಪಯ್ಯ ದೇಸಾಯಿ
ಬೆಳಗಾವಿ 14 : ಹಳೆಯ ಬೇರನ್ನು ಹೊಂದಿರುವ ವಿಶಾಲವಾದ ಮರದ ಚಿಗುರು ಸೊಗಸಾಗಿರುವಂತೆ ಭಾರತೀಯ ಪುರಾತನ ಜ್ಞಾನ ಪರಂಪರೆಯೊಂದಿಗೆ ಆಧುನಿಕ ವಿಜ್ಞಾನ ಸಮನ್ವಯಗೊಂಡರೆ ಮಾಲಿನ್ಯ ರಹಿತ ಹಾಗು ಸುಸ್ಥಿರ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣವಾಗುತ್ತದೆ ಎಂದು ಭಾರತೀಯ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕ ವೆಂಕಪ್ಪಯ್ಯ ದೇಸಾಯಿ ಅಭಿಮತ ವ್ಯಕ್ತಪಡಿಸಿದರು. ಇಂದು ನಾಗನೂರು ರುದ್ರಾಕ್ಷಿ ಮಠ, ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆ ಹಾಗೂ ಟ್ರಾನ್ಸ್ ಡಿಸಿಪ್ಲೆನೆರಿ ಲನಿಂರ್ಗ್ ಸಲ್ಯೂಷನ್ ಇವರ ಸಹಯೋಗದೊಂದಿಗೆ ಹಮ್ಮಿಕೊಂಡ ಸ್ಟೀಮ್ ಹೆಚ್ ತರಬೇತಿ ಮತ್ತು ಸಂಶೋಧನಾ ಕೇಂದ್ರದ ಅಡಿಗಲ್ಲು ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಮುಂದುವರೆದು ಮಾತನಾಡಿದ ಇತ್ತೀಚಿಗೆ ರೈತರು ಹುಲ್ಲು, ಕಬ್ಬಿನ ರವಧಿ ಸೇರಿದಂತೆ ಸಾವಯುವ ತ್ಯಾಜ್ಯವನ್ನು ಸುಡುತ್ತಿರುವುದು ಆತಂಕಕಾರಿ ವಿಷಯ. ಇದರಿಂದ ಮಣ್ಣಿನಲ್ಲಿರುವ ಪೋಷಕಾಂಶಗಳು ನಾಶವಾಗುತ್ತಿದ್ದು ರೈತರ ಇಳುವರಿ ಕಡಿಮೆಯಾಗುತ್ತಿದೆ. ಇಲ್ಲಿನ ಸಂಶೋಧಕರು ಈ ಕುರಿತು ನವೀನ ತಂತ್ರಜ್ಞಾನಗಳ ಸಂಶೋಧನೆ ಮಾಡಿ ರೈತರಿಗೆ ನೆರವಾಗಬೇಕೆಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಬೆಳಗಾವಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂದೆ ಮಾತನಾಡಿ ಐಐಟಿ ಅಂತಹ ಸಂಶೋಧನಾ ಕೇಂದ್ರಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕೆಂಬುದು ಕನಸು ಕಾಣುತ್ತಾರೆ. ಆದರೆ ಇದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಅಂತಹ ಅವಕಾಶ ವಂಚಿತ ಆಸಕ್ತ ವಿದ್ಯಾರ್ಥಿಗಳಿಗಾಗಿ ಸಂಶೋಧನಾ ಕೇಂದ್ರ ಬೆಳಗಾವಿಯಲ್ಲಿ ಪ್ರಾರಂಭಿಸುತ್ತಿರುವ ರುದ್ರಾಕ್ಷಿ ಮಠದ ಕಾರ್ಯ ಶ್ಲಾಘನೀಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಮಹಾಂತೇಶ ಕೌಜಲಗಿ ಜಗತ್ತಿನ ಅಭಿವೃದ್ಧಿ ವಿಜ್ಞಾನದ ಸಂಶೋಧನೆಯ ಮೇಲೆ ಅವಲಂಬಿತವಾಗಿದೆ. ಸಮಾಜಕ್ಕೆ ಪೂರಕವಾದ, ಜನರ ಶ್ರಮ ಕಡಿಮೆಗೊಳಿಸುವ ಸಂಶೋಧನೆಗಳು ಈ ಕೇಂದ್ರದಿಂದ ಆಗಲಿ ಎಂದು ಆಶಿಸಿದರು.
ಅಡಿಗಲ್ಲು ಸಮಾರಂಭದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ನಾಡಿನ ಬಡ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗಾಗಿ ಈ ಸಂಶೋಧನಾ ಕೇಂದ್ರ ಪ್ರಾರಂಭಿಸಿದ್ದು, ಇಲ್ಲಿ ಸಂಶೋಧನೆ ಪಡೆದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಂಶೋಧನಾ ಪತ್ರಿಕೆಗಳನ್ನ ಪ್ರಕಟಿಸಲು, ಪೇಟೆಂಟ್ ಪಡೆಯಲು ಹಾಗೂ ತಮ್ಮದೇ ಆದ ಸ್ವಂತ ಸ್ಟಾರ್ಟ್ ಅಪ್ ಗಳನ್ನು ಪ್ರಾರಂಭಿಸಲು ಸಹಕಾರಿಯಾಗಲಿದೆ. ಸ್ಥಳೀಯ ಉದ್ಯಮಿಗಳಿಗೆ ಸಂಶೋಧನೆ ಕೈಗೊಳ್ಳಲು ಅಥವಾ ಅಭಿವೃದ್ಧಿಪಡಿಸಲು ಸೂಕ್ತ ವೇದಿಕೆ ಇಲ್ಲದೆ ಇರುವ ಕಾರಣ ಸಹ ಈ ಸಂಶೋಧನಾ ಕೇಂದ್ರಕ್ಕೆ ಬಂದು ತಮ್ಮ ಉಪಕರಣ ಸಂಶೋಧನೆ ಮತ್ತು ಅಭಿವೃದ್ಧಿ ಮಾಡಬಹುದು. ಇದಕ್ಕೆ ಬೇಕಾದ ವ್ಯವಸ್ಥೆಯನ್ನು ಈ ಸಂಶೋಧನಾ ಮತ್ತು ತರಬೇತಿ ಕೇಂದ್ರದಲ್ಲಿ ಮಾಡಲಾಗುತ್ತದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು, ನಗರದಲ್ಲಿ ಸೌಲಭ್ಯಗಳಿಲ್ಲದ ಶಾಲೆಗಳ ವಿದ್ಯಾರ್ಥಿಗಳು, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಇಲ್ಲಿ ನಿರಂತರವಾಗಿ ವಿವಿಧ ವಿಷಯಗಳ ಮೇಲೆ ಕಾರ್ಯಗಾರಗಳನ್ನು ಹಮ್ಮಿಕೊಳ್ಳಲಾಗುವುದು. ವಿದ್ಯಾರ್ಥಿಗಳು ಇದರಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಜ್ಞಾನ ವೃದ್ಧಿಸಿಕೊಳ್ಳಬಹುದು ಎಂದರು.ಇದೇ ಸಂದರ್ಭದಲ್ಲಿ ವಿಟಿಯು ಕುಲಸಚಿವ ಡಾ. ಬಿ. ರಂಗಸ್ವಾಮಿ ಹಾಗೂ ಇನ್ಫೋಸಿಸ್ ನ ಹಿರಿಯ ಆರ್ಥಿಕ ವ್ಯವಸ್ಥಾಪಕ ಕೆ.ಎಚ್. ರವೀಂದ್ರ ಸನ್ಮಾನಿಸಲಾಯಿತು.ಪ್ರಾರಂಭದಲ್ಲಿ ಮೆಲ್ಬರ್ನ್ ಎಫ್ .ಪಿ. ಡಬ್ಲು. ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ ಸಹ ಸಂಸ್ಥಾಪಕ ಡಾ. ಬಸನಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕ ಏ.ಕೆ. ಪಾಟೀಲ ಸ್ವಾಗತಿಸಿದರು. ರಾಜಶೇಖರ ಪಾಟೀಲ ನಿರೂಪಿಸಿದರು. ನಯನ ಗಿರಿಗೌಡ ಪ್ರಾರ್ಥಿಸಿದರು. ಕೊನೆಗೆ ಮಂಜುನಾಥ ಶರಣಪ್ಪನವರ ವಂದಿಸಿದರು.