ರಾಷ್ಟ್ರೀಯ ರಸ್ತೆ ಸುರಕ್ಷತಾ ಜಾಗೃತಿ ಮಾಸ-2025 ರ ಸಮಾರೋಪ ಸಮಾರಂಭ
ಹುಬ್ಬಳ್ಳಿ 15: ಪ್ರತಿಯೊಬ್ಬರೂ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಹೊಂದಬೇಕು. ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಮಾಡಬಾರದು. ಅಪಘಾತ, ಅಪರಾಧ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಸಹಾಯಕ ಪೊಲೀಸ್ ಆಯುಕ್ತರಾದ ವಿನೋದ ಮುಕ್ತೇದಾರ ಹೇಳಿದರು.
ಇಂದು ಗಬ್ಬೂರಿನ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಡಳಿತ, ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ, ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಬೆಂಗಳೂರು, ಹುಬ್ಬಳ್ಳಿ ಧಾರವಾಡ ಮೋಟಾರು ಡ್ರೈವಿಂಗ್ ಸ್ಕೂಲ್ ಅಸೋಸಿಯೇಶನ್, ವಾಯುಮಾಲಿನ್ಯ ಪರೀಕ್ಷಣಾ ಕೇಂದ್ರ ಪ್ರವರ್ತಕರು ಹಾಗೂ ಹುಬ್ಬಳ್ಳಿ ಮೋಟಾರು ವಾಹನ ಡೀಲರ್ಸ್ ಇವುಗಳ ಸಹಯೋಗದೊಂದಿಗೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಜಾಗೃತಿ ಮಾಸ-2025 ರ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ಒಂದು ತಿಂಗಳಿನಿಂದ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಅಪಘಾತಗಳ ಪ್ರಮಾಣ ಸಹ ಕಡಿಮೆಯಾಗಿಲ್ಲ. ಜೀವ ಬಹಳ ಮುಖ್ಯ. ಪ್ರತಿಯೊಬ್ಬರೂ ಜಾಗೃತವಾಗಬೇಕು. ಸಂಚಾರ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ತಿಳಿಸಿದರು.ಜಿಬ್ರಾ ಕ್ರಾಸಿಂಗ್, ಪಾದಚಾರಿ ಮಾರ್ಗ, ರಸ್ತೆ ಉಬ್ಬುಗಳು, ಶಾಲಾ ವಲಯ ಎಂಬ ಅಂಶಗಳ ಬಗ್ಗೆ ಜಾಗರೂಕತೆ ವಹಿಸಬೇಕು. ವಾಹನಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಹೊಂದಿರಬೇಕು. ಲೈಸೆನ್ಸ್ ಹೊಂದುವುದು ಕಡ್ಡಾಯವಾಗಿದೆ. ಬೇರೆಯವರ ಜೀವದ ಜೊತೆ ಆಟವಾಡಬಾರದು. ಚಿಕ್ಕ ಮಕ್ಕಳಿಗೆ ವಾಹನ ಚಲಾಯಿಸುವಂತೆ ಪ್ರೇರೆಪಿಸಬಾರದು. ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸಬೇಕು. ತ್ರಿಬಲ್ ರೈಡಿಂಗ್ ನಿಷೇಧಿಸಲಾಗಿದೆ. ಅವಸರದ ಪ್ರಯಾಣ ಅಪಘಾತಕ್ಕೆ ಎಡೆ ಮಾಡಿಕೊಡುತ್ತದೆ. ಜನರಿಗೆ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸುವುದು ಅವಶ್ಯವಾಗಿದೆ. ಮಕ್ಕಳು ಮಾಡುವ ಅಪರಾಧದಿಂದ ಪಾಲಕರಿಗೆ ಶಿಕ್ಷೆಯಾಗಲಿದೆ. ಯಾವುದೇ ರೀತಿಯ ತಪ್ಪುಗಳಿಗೆ ಅವಕಾಶ ಮಾಡಿಕೊಡಬಾರದು. ರಸ್ತೆಯ ಮೇಲೆ ಹೆಚ್ಚಿನ ಗಮನವಿರಬೇಕು. ಜೀವ ಅಮೂಲ್ಯವಾದುದು, ಅದನ್ನು ಕಾಪಾಡಿಕೊಳ್ಳಬೇಕು. ಒಂದೊಂದು ಜೀವಕ್ಕೆ ಸಹ ಪ್ರಾಮುಖ್ಯತೆ ಇದೆ. ಶೂನ್ಯ ಅಪಘಾತಗಳ ಪ್ರಮಾಣ ಸಾಧನೆಗೆ ಮುಂದಾಗಬೇಕಿದೆ ಎಂದರು.ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಕೆ.ದಾಮೋದರ ಅಧ್ಯಕ್ಷತೆ ವಹಿಸಿ ಮಾತನಾಡಿ, ರಸ್ತೆ ಸುರಕ್ಷತೆ ಕುರಿತು ಸಾಕಷ್ಟು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಅರಿವು ಮೂಡಿಸಲಾಗಿದೆ. ಜೀವ ಅತ್ಯಮೂಲ್ಯವಾದದು. ದಿನ ದಿನಕ್ಕೆ ಅಪಘಾತಗಳ ಪ್ರಮಾಣ ಹೆಚ್ಚಾಗುತ್ತಿವೆ.ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸಿ, ವಾಹನ ಚಲಾಯಿಸಬೇಕು. ಅಪಘಾತಕ್ಕೆ ಎಡೆ ಮಾಡಿಕೊಡದಂತೆ ಎಚ್ಚರಿಕೆ ವಹಿಸಬೇಕು. ರಸ್ತೆಗಳಲ್ಲಿ ಕಾಣ ಸಿಗುವ ಸಂಚಾರ ಚಿಹ್ನೆಗಳ ಬಗ್ಗೆ ಅರಿತುಕೊಳ್ಳಬೇಕು. ರಸ್ತೆ ದುರಸ್ತಿ ಫಲಕಗಳನ್ನು ಗಮನಿಸಬೇಕಾಗುತ್ತದೆ. ಅವಸರದ ಪ್ರಯಾಣಕ್ಕೆ ಮುಂದಾಗಬೇಡಿ. ವಾಹನ ಚಲಾವಣೆಯ ಮಿತಿಯನ್ನು ಮೀರಬಾರದು. ಅಪಘಾತ ಮುಕ್ತ ಸಮಾಜ ನಿರ್ಮಾಣ ಮಾಡಬೇಕು ಎಂದರು.
ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಹೆಚ್. ರಾಮನಗೌಡರ ಮಾತನಾಡಿ, ಉತ್ತಮ ರಸ್ತೆಗಳು ನಿರ್ಮಾಣವಾಗಬೇಕು. ರಸ್ತೆ ಸುರಕ್ಷತೆ ಬಗ್ಗೆ ಶಿಕ್ಷಣ ಒದಗಿಸಬೇಕಿದೆ. ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಬೇಕು. ಇಡೀ ಜೀವನದುದ್ದಕ್ಕೂ ರಸ್ತೆ ಸುರಕ್ಷತೆ ಬಗ್ಗೆ ಪಾಲನೆ ಮಾಡಬೇಕು. ಯುವ ಜನರು ದೇಶಕ್ಕೆ ಗೌರವ ತರುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಯಾವುದೇ ರೀತಿಯಲ್ಲಿ ಅವರಸದ ಪ್ರಯಾಣ ಬೇಡ. ಅಪಘಾತಕ್ಕೆ ಅವಕಾಶ ಮಾಡಿ ಕೊಡದಿರೋಣ ಎಂದು ಹೇಳಿದರು.
ಪ್ರಬಂಧ, ಚಿತ್ರಕಲೆ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಅಪಘಾತ ರಹಿತ ಚಾಲನೆ ಮಾಡಿದ ಚಾಲಕರಾದ ಎನ್.ಎಸ್.ಪೂಜಾರ, ಕೆ.ಎಸ್.ಹಿರೇಮಠ ಹಾಗೂ ಡ್ರೈವಿಂಗ್ ಸ್ಕೂಲ್ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಮೋಟಾರು ವಾಹನ ನೀರೀಕ್ಷಕರಾದ ಎಸ್.ಡಿ. ಬೆಲ್ಲದ, ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಶಾಲೆಗಳ ವಿದ್ಯಾರ್ಥಿಗಳು,
ಸಾರ್ವಜನಿಕರು ಇತರರು ಉಪಸ್ಥಿತರಿದ್ದರು.ಸಾರಿಗೆ ಇಲಾಖೆಯ ಪ್ರಥಮ ದರ್ಜೆ ಸಹಾಯಕರಾದ ಜಿ.ವಿ.ದಿನಮಣಿ ಅವರು ಕಾರ್ಯಕ್ರಮ ನಿರೂಪಿಸಿ, ನಿರ್ವಹಿಸಿದರು.