ಇಸ್ಲಾಂ-ಲಿಂಗಾಯತ ಧರ್ಮಗಳಲ್ಲಿ ಹಲವು ಸಾಮ್ಯತೆಗಳಿವೆ : ಲಾಲ್ ಹುಸೇನ್ ಕಂದಗಲ್

ಇಸ್ಲಾಂ-ಲಿಂಗಾಯತ ಧರ್ಮಗಳಲ್ಲಿ ಹಲವು ಸಾಮ್ಯತೆಗಳಿವೆ : ಲಾಲ್ ಹುಸೇನ್ ಕಂದಗಲ್  There are many similarities between Islam and Lingayat religions: Lal Hussain Kandagal

ಕೊಪ್ಪಳ 17 : ಇಸ್ಲಾಂ ಹಾಗೂ ಲಿಂಗಾಯತ ಧರ್ಮಗಳಲ್ಲಿ ಹಲವು ವಿಚಾರಗಳಲ್ಲಿ ಹೊಂದಾಣಿಕೆ ಇರುವುದಾಗಿ ವಾಗ್ಮಿ ಪ್ರವಚನಕಾರ ಇಲಕಲ್ ನ ಲಾಲ್ ಹುಸೇನ್ ಕಂದಗಲ್ ಹೇಳಿದರು.ಅವರುನಗರದ ಖಾಸಗಿ ಹೋಟೆಲ್ ಸಭಾಭವನ ದಲ್ಲಿ ಕೊಪ್ಪಳ ವಿಜನ್ ಚಾರಿಟೇಬಲ್ ಟ್ರಸ್ಟ್‌ ವತಿಯಿಂದ ಆಯೋಜಿಸಿದ್ದ ಇಫ್ತಾರ್ ಸೌಹಾರ್ದ ಕೂಟದಲ್ಲಿ ಮಾತನಾಡಿದ ಅವರು, ಉಪವಾಸ ಎಂದರೆ ಕೇವಲ ಆಹಾರ ತ್ಯಜಿಸುವುದಲ್ಲ, ಪಂಚೇಂದ್ರಿಯಗಳ ಮೇಲೆ ನಿಯಂತ್ರಣ ಸಾಧಿಸುವುದಾಗಿದೆ ಎಂದು ಹೇಳಿದರು. ಉಪವಾಸದಲ್ಲಿದ್ದು ಸುಳ್ಳು ಹೇಳಿದರೆ ಅದರ ಅರ್ಥವೇ ಇಲ್ಲ.

ಹಿಂದೂ ಧರ್ಮದಲ್ಲಿಯೂ ಉಪವಾಸದ ಕಲ್ಪನೆ ಇದೆ. ಬೈಬಲ್ ಹಾಗೂ ಬೌದ್ಧ ಧರ್ಮದಲ್ಲಿಯೂ ಉಪವಾಸದ ಉಲ್ಲೇಖ ಕಾಣಬಹುದು ಎಂದು ತಿಳಿಸಿದರು.ಉಪವಾಸದ ಕುರಿತು ಕುರಾನ್ನ ಕಲ್ಪನೆಗಳನ್ನು ವಿವರಿಸಿದ ಅವರು, ಒಬ್ಬ ವ್ಯಕ್ತಿ ಯಾರೂ ಇಲ್ಲದ ಸ್ಥಳದಲ್ಲಿ ಆಹಾರ ಸೇವಿಸಿ ಬಂದು ಉಪವಾಸ ಇದ್ದೇನೆ ಎಂದು ಹೇಳಬಹುದು. ಆದರೆ ದೇವರ ಭಯ ಮತ್ತು ದೇವರ ಆದೇಶ ಪಾಲಿಸುವ ನಂಬಿಕೆ ಇರುವುದರಿಂದ ಯಾರೂ ಆ ರೀತಿಯಲ್ಲಿ ವರ್ತಿಸುವುದಿಲ್ಲ ಎಂದರು.ಮುಂದುವರಿದು ಮಾತನಾಡಿಉಪವಾಸ ಬಿಡುವ ಸಂದರ್ಭದಲ್ಲಿ ಉಪವಾಸಿಗನೊಂದಿಗೆ ಸೇರಿ ಉಪವಾಸ ಇಲ್ಲದವರು ಆಹಾರ ಸೇವಿಸಿದರೂ ಉಪವಾಸಿಗನಿಗೆ ಸಿಗುವಷ್ಟು ಪುಣ್ಯ ಸಿಗುತ್ತದೆ ಎಂದು ಪ್ರವಾದಿಗಳು ಹೇಳಿದ್ದಾರೆ.

ನಮಾಜ್, ಹಜ್ ಮತ್ತು ಉಪವಾಸ ಮಾಡುವುದಕ್ಕಿಂತಲೂ ನಾಲಿಗೆಯ ಮೇಲೆ ನಿಯಂತ್ರಣ ಸಾಧಿಸುವುದು ಮುಖ್ಯವಾಗಿದೆ. ನಮ್ಮ ನಾಲಿಗೆಯಿಂದ ಮತ್ತೊಬ್ಬರ ಜೀವಕ್ಕೂ ಅಪಾಯವಾಗ ಬಾರದು ಜೀವನಕ್ಕೂ ಅರ್ಥ ಸಿಗಬಹುದು. ಆದ್ದರಿಂದ ಗೌರವಯುತ ಮಾತುಗಳನ್ನು ಬಳಕೆ ಮಾಡಬೇಕು ಎಂದು ಹೇಳಿದರು.ಯಾವ ದೇವರ ಭಯದಿಂದ ನಾವು ಉಪವಾಸ ಇದ್ದೇವೋ, ಅದೇ ದೇವರ ಭಯವನ್ನು ಭ್ರಷ್ಟಾಚಾರ, ಅನಾಚಾರ, ಕೊಲೆ ಹಾಗೂ ಕೋಮುವಾದಕ್ಕೆ ಪ್ರಚೋದನೆ ನೀಡುವ ಸಂದರ್ಭದಲ್ಲೂ ನೆನಪಿಸಿಕೊಳ್ಳಬೇಕು. ಧರ್ಮ ಹಾಗೂ ಜಾತಿಗಳ ಆಧಾರದಲ್ಲಿ ಸಮಾಜವನ್ನು ವಿಭಜಿಸುವ ಪ್ರಯತ್ನಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಚೋದನಕಾರಿ ಮಾತುಗಳಿಗೆ ಬಲಿಯಾಗಬಾರದು ಎಂದು ಅವರು ಕಿವಿಮಾತು ಹೇಳಿದರು.

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಪರಿಸ್ಥಿತಿಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ಅನ್ಯಾಯವಾಗಿ ಒಬ್ಬ ಮನುಷ್ಯನನ್ನು ಕೊಂದರೆ ಇಡೀ ಮಾನವೀಯತೆಯನ್ನು ಕೊಂದ ಪಾಪವಾಗುತ್ತದೆ ಎಂದು ಕುರಾನ್ ಹೇಳುತ್ತದೆ. ಯುದ್ಧಕ್ಕೆ ಅರ್ಥವಿಲ್ಲ ಎಂದು   ವಾಗ್ಮಿ ಪ್ರವಚನಕಾರ ಲಾಲ್ ಹುಸೇನ್ ಕಂದಗಲ್ ಹೇಳಿದರು.ಲಿಂಗಾಯತ ಧರ್ಮದ ರಾಜ್ಯಾಧ್ಯಕ್ಷ ಈಶಣ್ಣ ಕೊರ್ಲಳ್ಳಿ ಮಾತನಾಡಿ, ಇಂತಹ ಸೌಹಾರ್ದ ಕೂಟಗಳಲ್ಲಿ ಸರ್ಕಾರಿ ಅಧಿಕಾರಿಗಳು ಸಹ ಭಾಗವಹಿಸಬೇಕು. ಈ ಕಾರ್ಯಕ್ರಮಗಳು ಕೇವಲ ಮುಸ್ಲಿಂ ಸಮುದಾಯಕ್ಕೆ ಸೀಮಿತವಾಗಿಲ್ಲ ಎಲ್ಲಾ ಧರ್ಮಗಳ ಜನರು ಭಾಗವಹಿಸುವ ವೇದಿಕೆಗಳಾಗಿವೆ ಎಂದು ಹೇಳಿದರು.

ಜಕಾತ್ ಸೇರಿದಂತೆ ಹಲವು ವಿಚಾರಗಳಲ್ಲಿ ಇಸ್ಲಾಂ ಮತ್ತು ಲಿಂಗಾಯತ ಧರ್ಮಗಳ ನಡುವೆ ಸಾಮ್ಯತೆಗಳಿವೆ. ರಂಜಾನ್ ಮಾಸದಲ್ಲಿ ಅಂತರಂಗ ಹಾಗೂ ಬಹಿರಂಗ ಶುದ್ಧಿಯನ್ನು ಒತ್ತಿ ಹೇಳಲಾಗುತ್ತದೆ. ಬಸವಣ್ಣನವರ ಉಪದೇಶದಲ್ಲಿಯೂ ಶುದ್ಧಿಯ ಮಹತ್ವವನ್ನು ವಿವರಿಸಲಾಗಿದೆ ಎಂದು ಹೇಳಿದರು.ಪ್ರವಾದಿ ಮುಹಮ್ಮದ್ ಅವರ ಜೀವನದಲ್ಲಿ ಕಂಡುಬರುವ ಸಹಿಷ್ಣುತೆ ಮತ್ತು ಉದಾರತೆಯ ಘಟನೆಗಳನ್ನು ನೆನಪಿಸಿದ ಅವರು, ಪ್ರವಾದಿಗಳ ಮೇಲೆ ಕಸ ಹಾಕುತ್ತಿದ್ದ ಮಹಿಳೆ ಒಂದು ದಿನ ಕಸ ಹಾಕದಿದ್ದಾಗ ಅವರ ಆರೋಗ್ಯ ವಿಚಾರಿಸಿದ ಉದಾಹರಣೆ ನಮಗೆ ಮಾದರಿಯಾಗಿದೆ.

ಜ್ಞಾನ ಎಲ್ಲಿಂದ ಬಂದರೂ ಸ್ವೀಕರಿಸಬೇಕು ಎಂಬ ಸಂದೇಶವನ್ನು ಎಲ್ಲ ಧರ್ಮಗಳು ನೀಡುತ್ತವೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜನ್ ಚಾರಿಟೇಬಲ್ ಟ್ರಸ್ಟ್‌ ನ ಅಧ್ಯಕ್ಷ ಶಾಹೀದ್ ಹುಸೇನ್ ತಹಶಿಲ್ದಾರ್ ವಹಿಸಿದ್ದರು. ಅತಿಥಿಗಳಾಗಿ ಆಗಮಿಸಿದ್ದ ಬಸವ ಸಮಿತಿ ಜಿಲ್ಲಾಧ್ಯಕ್ಷ ಬಸವರಾಜ್ ಬಳೂಳ್ಳಿ ಅವರು ಸಹ ಮಾತನಾಡಿ ಇಂತಹ ಕಾರ್ಯಕ್ರಮಗಳ ಮೂಲಕ ಪರಸ್ಪರ ಸೌಹಾರ್ದತೆ ಬೆಳೆಯುತ್ತದೆ ಎಂದು ಹೇಳಿದರು,

ಕೊಪ್ಪಳ ಸದ್ಭಾವನಾ ವೇದಿಕೆಯ ಅಧ್ಯಕ್ಷ ಹಾಗೂ ವೈದ್ಯ  ಡಾ,ಸುಶೀಲ್ ಕುಮಾರ್ ಕಲಾಲ್ ಸಹ ಮಾತನಾಡಿ ಉಪವಾಸ ಆಚರಣೆಯಿಂದ ಆರೋಗ್ಯದಲ್ಲಿ ವೃದ್ಧಿಯಾಗುತ್ತದೆ ಹಲವು ರೋಗಗಳ ನಿಯಂತ್ರಣ ಕ್ಕಾಗಿ ಉಪವಾಸ ಆಚರಣೆ ಅತ್ಯಂತ ಸಹಕಾರಿ ಮತ್ತು ಮಹತ್ವದ್ದಾಗಿದೆ ಎಂದು ಹೇಳಿದರು,ಆರಂಭದಲ್ಲಿ ನಗರಸಭೆಯ ಮಾಜಿ ಸದಸ್ಯರಾದ ಸಭೀಹ ಪಟೇಲ್ ಕುರಾನ್ ಪಠಣ ಮಾಡಿ ಅದರ ಕನ್ನಡ ಅನುವಾದ ಮಾಡಿದರು ಇನ್ನೋರ್ವ ಮಹಿಳಾ ಮುಖಂಡರಾದ ಉಮೇರಾ ರವರು ಕುರಾನ್ ಪಠಣದ ಇಂಗ್ಲಿಷ್ ಅನುವಾದ ಮಾಡಿದರು,  

ಆದಿಲ್ ಪಟೇಲ್ ರವರು ಪ್ರಸ್ತಾವೇಕವಾಗಿ ಮಾತನಾಡಿದರು, ಫಯಾಜ್ ಶರೀಫ್ ರವರು ಕಾರ್ಯಕ್ರಮ ನಿರೂಪಿಸಿದರು, ವಿಜನ್ ಚಾರಿಟೇಬಲ್ ಟ್ರಸ್ಟ್‌ ನ ಉಪಾಧ್ಯಕ್ಷ ಗೌಸ್ ಮೋಹಿಯುದ್ದೀನ್, ಕಾರ್ಯದರ್ಶಿ ಮೊಹಮ್ಮದ್ ಅಲಿಮುದ್ದೀನ್ ಸೇರಿದಂತೆ ಅನ್ವರ್ ಹುಸೇನ್, ಡಾ, ಹಸನ ಅಲಿ ನಿಂಗಾಪುರ್, ಮುಸ್ತಫಾ ಕುದ್ರಿ ಮೂತಿ,ನಜೀರ್ ಅದೋನಿ ,ಆಸಿಫ್ ಸರ್ದಾರ್ ಅಲ್ಲದೆ ಹಿರಿಯ ನ್ಯಾಯವಾದಿ ಆರ್ ಬಿ ಪಾನಗಂಟಿ, ಎ ವಿ ಕಣವಿ, ಅಮರೇಶ್ ಪಾಟೀಲ್ , ರಾಜಕಾರಣಿ ವೀರೇಶ್ ಮಹಾಂತಯ್ಯನ ಮಠ, ಅನೇಕರು ಉಪಸ್ಥಿತರಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಮುಸ್ಲಿಂ ಬಾಂಧವರು ಇಫ್ತಾರ್ ಸೌಹಾರ್ದ ಕೂಟದಲ್ಲಿ ಪಾಲ್ಗೊಂಡಿದ್ದರು,