ಸಿಡ್ನಿ, ಜ 6 ನಥಾನ್ ಲಿಯಾನ್ (50 ಕ್ಕೆ 5 ) ಅವರ ಸ್ಪಿನ್ ಮೋಡಿಯ ನರವಿನಿಂದ ಆಸ್ಟ್ರೇಲಿಯಾ ತಂಡ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 279 ರನ್ ಗಳಿಂದ ಭರ್ಜರಿ ಜಯ ಸಾಧಿಸಿತು. ಇದರೊಂದಿಗೆ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆತಿಥೇಯರು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡರು.
ಇಲ್ಲಿನ, ಸಿಡ್ನಿ ಕ್ರಿಕೆಟ್ ಅಂಗಳದಲ್ಲಿ ವಿಕೆಟ್ ನಷ್ಟವಿಲ್ಲದೆ 40 ರನ್ ಗಳಿಂದ ದ್ವಿತೀಯ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡ, 52 ಓವರ್ ಗಳಿಗೆ ಎರಡು ವಿಕೆಟ್ ನಷ್ಟಕ್ಕೆ 217 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಆ ಮೂಲಕ ಪ್ರವಾಸಿ ನ್ಯೂಜಿಲೆಂಡ್ ತಂಡಕ್ಕೆ 416 ರನ್ ಗುರಿ ನೀಡಿತು.
ಆಸ್ಟ್ರೇಲಿಯಾ ಪರ ದ್ವಿತೀಯ ಇನಿಂಗ್ಸ್ ಅದ್ಭುತ ಬ್ಯಾಟಿಂಗ್ ಮಾಡಿದ ಆರಂಭಿಕ ಡೇವಿಡ್ ವಾರ್ನರ್ ವೃತ್ತಿ ಜೀವನದ 23 ನೇ ಶತಕ ಬಾರಿಸಿದರು. 153 ಎಸೆತಗಳಲ್ಲಿ 9 ಬೌಂಡರಿಯೊಂದಿಗೆ 111 ರನ್ ಗಳಿಸಿ ಅಜೇಯರಾಗಿ ಉಳಿದರು. ಜೋ ಬನ್ರ್ಸ 40 ರನ್ ಗಳಿಸಿದರೆ, ಪ್ರಥಮ ಇನಿಂಗ್ಸ್ ನಲ್ಲಿ ಚೊಚ್ಚಲ ದ್ವಿಶತಕ ಸಿಡಿಸಿದ್ದ ಮಾರ್ನಸ್ ಲಾಬುಶೇನ್ 74 ಎಸೆತಗಳಿಗೆ 59 ರನ್ ಗಳಿಸಿದರು.
416 ರನ್ ಗುರಿ ಹಿಂಬಾಲಿಸಿದ ನ್ಯೂಜಿಲೆಂಡ್ ತಂಡಕ್ಕೆ ಆರಂಭದಲ್ಲಿ ಮಿಚೆಲ್ ಸ್ಟಾಕರ್್ ಆಘಾತ ನೀಡಿದರು. ಟಾಮ್ ಬಂಡೆಲ್ (2) ಹಾಗೂ ಟಾಮ್ ಲಥಾಮ್ (1) ಅವರನ್ನು ಬಹುಬೇಗ ಪೆವಿಲಿಯನ್ ಸೇರಿಸಿದರು.
ರಾಸ್ ಟೇಲರ್ (22) ಹಾಗೂ ಜೀತ್ ರಾವಲ್(12) ಅವರನ್ನು ಕ್ರಮವಾಗಿ ಪ್ಯಾಟ್ ಕಮಿನ್ಸ್ ಹಾಗೂ ನಥಾನ್ ಲಿಯಾನ್ ಔಟ್ ಮಾಡಿದರು.
ಮಧ್ಯಮ ಕ್ರಮಾಂಕದಲ್ಲಿ ಕಾಲಿನ್ ಗ್ರಾಂಡ್ಹೋಮ್ 68 ಎಸೆತಗಳಲ್ಲಿ 52 ರನ್ ಗಳಿಸಿದರು. ಇನ್ನುಳಿದವರು ಆಸೀಸ್ ದಾಳಿಗೆ ನೆಲಕಚ್ಚಿದರು. ಪ್ರಥಮ ಇನಿಂಗ್ಸ್ ನಲ್ಲಿ ಐದು ವಿಕೆಟ್ ಗೊಂಚಲು ಪಡೆದಿದ್ದ ನಥಾನ್ ಲಿಯಾನ್ ದ್ವಿತೀಯ ಇನಿಂಗ್ಸ್ ನಲ್ಲೂ ಅದೇ ಬೌಲಿಂಗ್ ಮಾಡಿದರು. 16.5 ಓವರ್ ಬೌಲಿಂಗ್ ಮಾಡಿದ ಲಿಯಾನ್ 50 ರನ್ ನೀಡಿ 5 ವಿಕೆಟ್ ಕಿತ್ತರು.
ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಗೆ ಮಾರ್ನಸ್ ಲಾಬುಶೇನ್ ಭಾಜನರಾದರು.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ
ಪ್ರಥಮ ಇನಿಂಗ್ಸ್:454
ದ್ವಿತೀಯ ಇನಿಂಗ್ಸ್: 52 ಓವರ್ ಗಳಿಗೆ 217/2 (ಡಿ) (ಡೇವಿಡ್ ವಾರ್ನರ್ ಔಟಾಗದೆ 111, ಮಾರ್ನಸ್ ಲಾಬುಶೇನ್ 59, ಜೋ ಬನ್ರ್ಸ 40; ಟಾಡ್ ಆ್ಯಶ್ಟ್ಲೆ 41 ಕ್ಕೆ 1)
ನ್ಯೂಜಿಲೆಂಡ್
ಪ್ರಥಮ ಇನಿಂಗ್ಸ್: 256
ದ್ವಿತೀಯ ಇನಿಂಗ್ಸ್: 47.5 ಓವರ್ ಗಳಿಗೆ 136/10 (ಕಾಲಿನ್ ಡಿ ಗ್ರಾಂಡ್ಹೋಮ್ 52; ನಥಾನ್ ಲಿಯಾನ್ 50 ಕ್ಕೆ 5, ಮಿಚೆಲ್ ಸ್ಟಾರ್ಕ್ 25 ಕ್ಕೆ 3)