ಗವಿಶ್ರೀ ಟ್ರೋಫಿ ಕ್ರಿಕೆಟ್ ಟೂರ್ನಿಗೆ ಚಾಲನೆ: ಶ್ರೀ ಶಿವಶಾಂತವೀರ ಮಹಾಸ್ವಾಮಿಗಳು

 ಗವಿಶ್ರೀ ಟ್ರೋಫಿ ಕ್ರಿಕೆಟ್ ಟೂರ್ನಿಗೆ ಚಾಲನೆ: ಶ್ರೀ ಶಿವಶಾಂತವೀರ ಮಹಾಸ್ವಾಮಿಗಳು  Gavishree Trophy Cricket Tournament inaugurated by Sri Shivashanthaveera Mahaswamy


       ಕೊಪ್ಪಳ 14:   ಸಮುದ್ರದ ಮರಳಿನಲ್ಲಿ ಬರೆವ ಹೆಸರು ಅಲೆಗಳು ಬಂದರೆ ಅಳಿಸಿ ಹೋಗುತ್ತದೆ. ಮರದಲ್ಲಿ ಬರೆದ ಹೆಸರು ಸ್ವಲ್ಪ ಕಾಲಕ್ಕೆ ಮರ ಬಿದ್ದು ಅಳಿಸಿ ಹೋಗುತ್ತದೆ. ರಾಜ ಮಹಾರಾಜರ ಕಾಲದಿಂದಲೂ ಶಾಸನಗಳಲ್ಲಿ ಕೆತ್ತಿದ ಹೆಸರು ಭೂಮಿಯಲ್ಲಿ ಹುದುಗಿ ಹೋಗಿವೆ. ಇನ್ನೂ ಉತ್ಖನನ ಮಾಡುತ್ತಲೇ ಇದ್ದೇವೆ. ಎಲ್ಲರಿಗೂ ಹೆಸರು ಮಾಡಬೇಕೆಂಬ ತುಡಿತ ಸಹಜ. ಆ ಹೆಸರು ಅಳಿಸಲಾಗದ ಹೆಸರಾಗಬೇಕಾದರೆ ಸಕಲರ ಹೃದಯದಲ್ಲಿ ಅಚ್ಚಳಿಯದೇ ಉಳಿಯುವ ಹೆಸರಾಗಿರಬೇಕು ಎಂದು ಬಿಸರಹಳ್ಳಿಯ ಶಾಖಾ ಗವಿಮಠದ ಪರಮ ಪೂಜ್ಯ ಶ್ರೀ ಶಿವಶಾಂತವೀರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.  

        ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಕೊಪ್ಪಳ ಕರ್ನಾಟಕ ವಾರಿಯರ್ಸ್‌ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘದಿಂದ ಆಯೋಜಿಸಿದ ಗವಿಶ್ರೀ ಟ್ರೋಫಿ ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.  

        ಕಾರ್ಯಕ್ರಮ ಎಂದ ಮೇಲೆ ಉದ್ಘಾಟನೆ ಇದ್ದೇ ಇರುತ್ತದೆ. ಉದ್ಘಾಟನೆ ಸಹಜವಾಗಿ ದೀಪ ಬೆಳಗುವ, ಸಸಿಗೆ ನೀರೆರೆಯುವ ಸಂಪ್ರದಾಯ ಎಲ್ಲೆಡೆ ಇದೆ. ಆದರೆ ಈ ಸಂಸ್ಥೆ ಬೇಸಿಗೆಯಲ್ಲಿ ಬಾಯಾರಿದ ಮೂಕ ಹಕ್ಕಿಗಳಿಗೆ ನೀರುಣಿಸಲು ಕಟ್ಟಿದ ಸಣ್ಣ ತೊಟ್ಟಿಗೆ ನೀರು ಹಾಕುವ ಮೂಲಕ ಕ್ರಿಕೆಟ್ ಪಂದ್ಯಾವಳಿ ಪ್ರಾರಂಭಿಸಿದ್ದು ಸಮಾಜಮುಖಿ ಕಾಳಜಿಗೆ ಹಿಡಿದ ಕನ್ನಡಿ ಎಂದು ಶ್ಲಾಘಿಸಿದರು.  

        ಬದಲಾವಣೆ ಜಗದ ನಿಯಮ. ಸಕಾರಾತ್ಮಕವಾಗಿ ಬದಲಾಗಬೇಕು, ಬೆಳೆಯಬೇಕು, ಬೆಳಕಾಗಬೇಕು. ಗಂಡುಮಕ್ಕಳು ಹೆಣ್ಣುಮಕ್ಕಳ ಥರ, ಗಂಡು ಮಕ್ಕಳು ಹೆಣ್ಣು ಮಕ್ಕಳ ರೀತಿ ವೇಷಭೂಷಣ ಮಾಡಿಕೊಳ್ಳುವುದು ಯುವಜನತೆಯ ಇಂದಿನ ಫ್ಯಾಶನ್ ಆಗಿದೆ. ಹೆತ್ತವರ ಹಣದಲ್ಲಿ ಶೋಕಿ ಮಾಡುವವರಿಗಿಂತ ಹೆತ್ತವರನ್ನು ಶೋಕಸಾಗರದಿಂದ ದೂರ ಇಡುವವರೇ ನಿಜವಾದ ಯುವಜನತೆ ಎಂದು ಕಿವಿಮಾತು ಹೇಳಿದರು.  

     ಆಟಕ್ಕೆ ನಿಯಮ ಇರುತ್ತದೆ. ಹಾಗೆಯೇ ಬದುಕಿಗೂ ನಿಮಯಗಳಿರುತ್ತವೆ. ಕ್ರಿಕೆಟ್ಗೆ ಅಂಪೈರ್ ಇರುವಂತೆ, ಭಗವಂತ ಮನುಷ್ಯನ ಬದುಕಿಗೆ ತೀಪುಗಾರ. ಭೂಮಿ ಎಂಬ ಕ್ರೀಡಾಂಗಣಕ್ಕೆ ಭಗವಂತ ಎಂಬ ಅಂಪೈರ್, ಆಟಗಾರರು ಎಂಬಂತೆ ನಮ್ಮನ್ನು ಕಳಿಸುತ್ತಾನೆ. ಆತನ ನಿರ್ಣಯದಂತೆ ಎಲ್ಲವೂ ನಡೆಯುತ್ತದೆ. ಸಿಕ್ಸ್‌, ಫೋರ್ ಕೊಡುವಾಗಲೂ ಆತನದ್ದೇ ತೀಪು. ಓಟ್ ಆದಾಗಲೂ ಆತನದ್ದೇ ನಿರ್ಣಯ ಎಂದು ಮಾರ್ಮಿಕವಾಗಿ ನುಡಿದರು.  

     ಭಾಗ್ಯನಗರದ ಶ್ರೀ ಶಂಕರಾಚಾರ್ಯ ಮಠದ ಪೂಜ್ಯರು ಆಶೀರ್ವಚನ ನೀಡಿದರು. ಸಮಾರಂಭದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ಹ್ಯಾಟಿ, ಸಂಗೀತ ವಿದ್ವಾಂಸರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಂಕರ್ ಬಿನ್ನಾಳ, ಸಹಕಾರ ಉಪ ನಿಬಂಧಕರು ಹಾಗೂ ಸಂಘ-ಸಂಸ್ಥೆ ನೋಂದಣಾಧಿಕಾರಿ ರಮೇಶ ಬಗಲಿ, ಆಹಾರ ನೀರೀಕ್ಷಕ ಮಂಜುನಾಥ ಮ್ಯಾಗಳಮನಿ, ವಾಣಿಜ್ಯೋದ್ಯಮಿ ಗ್ಯಾನೇಶ್ ಹ್ಯಾಟಿ, ಸಂಜೀವಿನಿ ರಕ್ತ ಭಂಡಾರದ ಜಿಲಾನಿ, ಅಕ್ಷರ ದಾಸೋಹ ಅಧಿಕಾರಿ ಎಸ್‌.ಬಿ.ಕುರಿಯವರು ಅತಿಥಿಗಳಾಗಿ ಪಾಲ್ಗೊಂಡಿದ್ದರು.  

         ಮಾರುತಿ ಮ್ಯಾಗಳಮನಿ ನಿರೂಪಿಸಿದರು. ಶಂಕರ ಬಿನ್ನಾಳ ಪ್ರಾರ್ಥಿಸಿದರು. ಬಸವರಾಜ ಕರುಗಲ್ ಪ್ರಾಸ್ತಾವಿಕ ಮಾತನಾಡಿದರು. ಈರಣ್ಣ ಪಗಡಾಲ ಅಧ್ಯಕ್ಷತೆ ವಹಿಸಿದ್ದರು. ಚಂದ್ರಕಾಂತ ದೇಶಪಾಂಡೆ ಸ್ವಾಗತಿಸಿದರು. ವಿನೋದ ಚಿನ್ನಿನಾಯ್ಕರ್ ವಂದಿಸಿದರು.  

          ಈ ಸಂದರ್ಭದಲ್ಲಿ ಕ್ಲಬ್ನ ಹಿರಿಯರಾದ ಗೀರೀಶ ಮುಂದಡಾ, ಡಾ.ಸತೀಶ ಜಾಲಿಹಾಳ, ಶ್ರೀನಿವಾಸ ಗೋಂಧಳಿ, ಮೌನೇಶ ಅರಕಲ್, ಅಮರೇಶ ಹುಬ್ಬಳ್ಳಿ, ಗೌರವಾಧ್ಯಕ್ಷ ಮಂಜುನಾಥ ಸ್ವಾಮಿ, ಉಪಾಧ್ಯಕ್ಷ ಶಿವಕುಮಾರ ನಾಲ್ವಾಡ್, ಪ್ರಧಾನ ಕಾರ್ಯದರ್ಶಿ ಲೋಕೇಶ್, ಖಜಾಂಚಿ ಚಿನ್ನು ಅಡ್ಡೇದಾರ್, ಸಿದ್ದು, ಸುರೇಶ, ಪುಲ್ಲಾರಡ್ಡಿ, ಮುರ್ತುಜಾ, ವಿರೇಶ್, ನಂಜುಂಡಿ ಮತ್ತಿತರರು ಇದ್ದರು.