ಕಾನೂನು ಪಾಲನೆ ಎಲ್ಲರ ಕರ್ತವ್ಯ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Law enforcement is everyone's duty: Minister Lakshmi Hebbalkar

ಬೆಳಗಾವಿ ಬಾರ್ ಅಸೋಸಿಯೇಷನ್ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ  

ಬೆಳಗಾವಿ 29: ಭಾರತದ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಕಾನೂನು ಪಾಲನೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.  

ಬೆಳಗಾವಿ ಬಾರ್ ಅಸೋಸಿಯೇಷನ್ ವತಿಯಿಂದ ಕೋರ್ಟ್‌ ಸಭಾಂಗಣದಲ್ಲಿ  ಶನಿವಾರ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ನಮ್ಮ ದೇಶದಲ್ಲಿ ಸಂವಿಧಾನಕ್ಕೆ ಬಹಳಷ್ಟು ಗೌರವ ಹಾಗೂ ಶಕ್ತಿಯಿದೆ. ಸಾಮಾನ್ಯ ಕುಟುಂಬದಿಂದ ಬಂದ ನಾನು ರಾಜ್ಯ ಸರ್ಕಾರದಲ್ಲಿ ಏಕೈಕ ಮಹಿಳಾ ಸಚಿವೆಯಾಗಿರುವೆ. ಅದಕ್ಕೆ ಕಾರಣ ಸಂವಿಧಾನ. ಇದು ನಮ್ಮ ಸಂವಿಧಾನದ ಶಕ್ತಿ ಎಂದರು. ಮಹಿಳೆಯರು ಹಾಗೂ ಪುರುಷರಿಗೆ ಸಮಾನ ಹಕ್ಕು ಅಂತ ಅಂಬೇಡ್ಕರ್ ಹೇಳಿದ್ದರು.  

ವಕೀಲರ ಸಂಘಗಳಲ್ಲೂ ಶೇಕಡ 33 ರಷ್ಟು ಮಹಿಳೆಯರಿಗೆ ಪ್ರಾತಿನಿಧ್ಯ ಕೊಡಬೇಕು ಅಂತ ಕೋರ್ಟ್‌ ಆದೇಶಿಸಿದೆ. ಮಹಿಳೆ ಇಲ್ಲದ ಮನೆ ಇರೋದಕ್ಕೆ ಸಾಧ್ಯವೇ ಇಲ್ಲ. ಮಹಿಳೆ ಶ್ರಮಪಟ್ಟು ಪ್ರತಿಯೊಂದು ಕ್ಷೇತ್ರದಲ್ಲಿ ಪುರುಷರ ಸಮಾನವಾಗಿ ಬೆಳೆದಿದ್ದಾಳೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಹೆಣ್ಣು ಗಂಡಿನ ತಾರತಮ್ಯ ವಿಚಾರದಲ್ಲಿ ಕರ್ನಾಟಕ ಎಷ್ಟೋ ವಾಸಿ. ಹೆಣ್ಣಿಗೆ ಧೈರ್ಯವೇ ಶಕ್ತಿ.ಎಲ್ಲಾ ಕ್ಷೇತ್ರದಲ್ಲೂ ಹೆಣ್ಣು ಮಿಂಚುವಂತಾಗಲಿ ಎಂದು ಸಚಿವರು ಹೇಳಿದರು.  

ಇವತ್ತು ಅಮಾವಾಸ್ಯೆ ಇರುವುದರಿಂದ ಎಲ್ಲೂ ಹೋಗಬೇಡ, ಮಲಗಿ ವಿಶ್ರಾಂತಿ  ತಗೊ ಅಂತ ನನ್ನ ತಾಯಿ ನನಗೆ ಹೇಳಿದರು. ಆದರೆ, ನಾನು ಮಾತ್ರ ನನಗೆ ವಿಶ್ರಾಂತಿ ಬೇಡ,  ಈ ಕಾರ್ಯಕ್ರಮಕ್ಕೆ ಹೋಗಲೇಬೇಕು ಅಂತ ಹೇಳಿ ಬಂದೆ ಎಂದು ಸಚಿವರು ಹೇಳಿದರು.  

ಈ ವೇಳೆ ನ್ಯಾಯಾಧೀಶರುಗಳಾದ ತ್ಯಾಗರಾಜ ಇನ್ವ್ಯಾಲಿ, ಅಶ್ವಿನಿ ಸಿರಿಯನ್ನವರ್, ಕೆ ಕಾತ್ಯಾಯಣಿ, ಸಿ.ಎಂ.ಪುಷ್ಪಲತಾ, ಬಾರ್ ಅಸೋಸಿಯೇಷನ್ ಅಧ್ಯಕ್ಷರಾದ ಎಸ್‌.ಎಸ್‌.ಕಿವಡಸಣ್ಣವರ, ಉಪಾಧ್ಯಕ್ಷರಾದ ಬಸವರಾಜ ಮುಗಳಿ, ಕಾರ್ಯದರ್ಶಿಗಳಾದ ಯಲ್ಲಪ್ಪ ದಿವಟೆ, ಅಶ್ವಿನಿ ಹವಾಲ್ದಾರ್ ಸೇರಿದಂತೆ ಅನೇಕ ವಕೀಲರು ಉಪಸ್ಥಿತರಿದ್ದರು.