ಬೆಂಗಳೂರು, ಮಾ.19, ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಕೊಡುವ ಯೋಜನೆಯನ್ನು ಹಿಂದಿನ ಸರ್ಕಾರ ಜಾರಿಗೊಳಿಸಿದ್ದು, 2019-20ನೇ ಸಾಲಿನಲ್ಲಿ ಪ್ರಥಮ ವರ್ಷದಲ್ಲಿ ಓದುತ್ತಿದ್ದ 1.09 ಲಕ್ಷ ವಿದ್ಯಾರ್ಥಿಗಳಿಗೆ 311 ಕೋಟಿ ರೂ.ವೆಚ್ಚದಲ್ಲಿ ಲ್ಯಾಪ್‌ಟಾಪ್ ಕೊಡಲಾಗಿದೆ. ಆದರೆ ಇದರಿಂದ ಸರ್ಕಾರಕ್ಕೆ ಹೆಚ್ಚಿನ ಹೊರೆಯಾಗುತ್ತಿರುವುದರಿಂದ ಈ ಸಾಲಿನಿಂದ ಯೋಜನೆಯನ್ನು ಕೈಬಿಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ವಿಧಾನಸಭೆಗೆ ತಿಳಿಸಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರಿ ಪದವಿ ಕಾಲೇಜಿನ ಪ್ರಥಮ ವರ್ಷದ ಎಲ್ಲಾ ವಿದ್ಯಾರ್ಥಿಗಳಿಗೆ 2019-20ನೆ ಸಾಲಿನಲ್ಲಿ ಲಾಪ್‌ಟಾಪ್ ಕೊಡಲಾಗಿದೆ. ಸಿದ್ದರಾಮಯ್ಯ ಹಾಗೂ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಎಂದು ನಿರ್ಧಾರವಾಗಿತ್ತು. ಹಣಕಾಸು ಇಲಾಖೆ ಕೂಡ ಇದಕ್ಕೆ ಅನುಮೋದನೆ ನೀಡಿತ್ತು. ಟೆಂಡರ್ ಮತ್ತು ವರ್ಕ್ ಆರ್ಡರ್ ಕೂಡ ಆ ಸರ್ಕಾರವೇ ಮಾಡಿತ್ತು, ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡಿದರೆ ಮುಂದಿನ ಹಲವು ವರ್ಷಗಳವರೆಗೆ ಅವರಿಗೆ ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿತ್ತು ಎಂದರು.
ರಾಜ್ಯದ 400 ಸರ್ಕಾರಿ ಕಾಲೇಜುಗಳಲ್ಲಿ ಮೂಲಭೂತ ಸೌಲಭ್ಯಗಳಿಲ್ಲ. ನ್ಯಾಕ್ ಅಕ್ರಡೇಷನ್ ಕೂಡ ಹಲವು ಕಾಲೇಜುಗಳಿಗೆ ಸಿಕ್ಕಿಲ್ಲ. ಮೊದಲು ಮೂಲಭೂತ ಸೌಲಭ್ಯ ಒದಗಬೇಕು ಎಂಬ ಉದ್ದೇಶದಿಂದ ಮುಂದಿನ ವರ್ಷಕ್ಕೆ ಈ ಯೋಜನೆಯನ್ನು ವಿಸ್ತರಿಸದಿರಲು ನಿರ್ಧರಿಸಲಾಗಿದೆ ಎಂದು ಹೇಳಿದರು.ಮೊದಲು ಪಟ್ಟಿ ಮಾಡಿದ ಪ್ರಕಾರ, 2019-20ನೇ ಸಾಲಿನಲ್ಲಿ 96,483 ವಿದ್ಯಾರ್ಥಿಗಳ ಹೆಸರಿತ್ತು. ನಂತರ ಇದು 1 ಲಕ್ಷದ 9 ಸಾವಿರದ ವಿದ್ಯಾರ್ಥಿಗಳಿಗೆ ವಿಸ್ತರಿಸಲಾಗಿದೆ. ತಾಂತ್ರಿಕ ಕಾರಣಗಳಿಂದ ಹೆಸರು ಬಿಟ್ಟು ಹೋಗಿದ್ದರೆ ಅವರ ಹೆಸರನ್ನು ಸೇರಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಅಶ್ವತ್ಥನಾರಾಯಣ ತಿಳಿಸಿದರು.