ಬೆಳಗಾವಿ: 17 ವರ್ಷದ ಇಬ್ಬರು ಅಪ್ರಾಪ್ತೆಯರ ಮೇಲೆ ಮೂವರು ಯುವಕರು ಸಾಮೂಹಿಕ ಅತ್ಯಾಚಾರ ಮಾಡಿರುವ ಘಟನೆ ರಾಯಬಾಗ ತಾಲೂಕಿನ ಹಾರೂಗೇರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅತ್ಯಾಚಾರಕ್ಕೆ ಒಳಗಾದ ಇಬ್ಬರೂ ಯುವತಿಯರು ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಾರೆ. ಅಭಿಷೇಕ ದೇವನೂರು ಎಂಬಾತ ಇನ್‌ಸ್ಟಾಗ್ರಾಂನಲ್ಲಿ ಮೆಸೇಜ್ ಮಾಡಿ ಯುವತಿಯ ಪರಿಚಯ ಮಾಡಿಕೊಂಡಿದ್ದ.ಜ.3ರಂದು ಅಥಣಿ ತಾಲೂಕಿನ ಕೊಕಟನೂರು ಜಾತ್ರೆಯಲ್ಲಿ ಇಬ್ಬರೂ ಪರಸ್ಪರ ಭೇಟಿಯಾಗಿ ಪರಿಚಯವಾಗಿದ್ದರು. ಎರಡನೇ ಭೇಟಿಯಲ್ಲಿ ಯುವತಿಯನ್ನು ಸವದತ್ತಿಯ ಯಲ್ಲಮ್ಮನ ಗುಡಕ್ಕೆ ಅಭಿಷೇಕ ಕರೆದುಕೊಂಡು ಹೋಗಿದ್ದನು. ಆಗ ಯುವತಿ ತನ್ನ ಸಹಪಾಠಿಯಾದ ಇನ್ನೊಬ್ಬ ಯುವತಿಯನ್ನೂ ಕರೆದಕೊಂಡು ಬಂದಿದ್ದಳು. ಅಭಿಷೇಕನೂ ತನ್ನ ಇಬ್ಬರು ಸ್ನೇಹಿತರಾದ ಆದಿಲ್ ಶಾ ಮತ್ತು ಕೌತುಕ್‌ನನ್ನು ಕರೆದುಕೊಂಡು ಬಂದಿದ್ದ. ಕಾರೊಂದರಲ್ಲಿ ಎಲ್ಲರೂ ಪ್ರಯಾಣ ಬೆಳೆಸಿದ್ದರು. ಆ ಸಂದರ್ಭದಲ್ಲಿ ಅತ್ಯಾಚಾರ ಮಾಡಿದ ಕ್ಷಣಗಳನ್ನೂ ಯುವಕರು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದರು.
ವಿಡಿಯೊಗಳನ್ನು ಇಟ್ಟುಕೊಂಡು ಆಗಾಗ ಬರುವಂತೆ ಬೆದರಿಕೆ ಒಡ್ಡುತ್ತಿದ್ದರು. ಮುಂದಿನ ವಾರ ಎಲ್ಲರೂ ಸೇರಿ ಗೋವಾಗೆ ಹೋಗೋಣ, ಬರದಿದ್ದರೆ ವಿಡಿಯೋಗಳನ್ನು ಸಾಮಾಜಿಕ ತಾಣಗಳಲ್ಲಿ ಹರಿಬಿಡುತ್ತೇವೆ ಎಂದು ಬ್ಲ್ಯಾಕ್‌ಮೇಲ್ ಮಾಡಿದ್ದರು. ಹೆದರಿದ ಸಂತ್ರಸ್ತೆಯರು ಜ. 13ರಂದು ಹಾರೂಗೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದರು.
ಅತ್ಯಾಚಾರದ ವಿಡಿಯೋ ಚಿತ್ರೀಕರಿಸಿಕೊಂಡು ಬೆದರಿಸುತ್ತಿದ್ದ ಆರೋಪಿಗಳ ಪೈಕಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಅಭಿಷೇಕ ದೇವನೂರು, ಆದಿಲ್ ಶಾ ಎಂಬಾತರನ್ನು ಬಂಧಿಸಲಾಗಿದೆ. ಮತ್ತೊಬ್ಬ ಅರೋಪಿ ಕೌತುಬ್ ಬಾಬುಸಾಬ್ ಬಡಿಗೇರ ಪರಾರಿಯಾಗಿದ್ದಾನೆ. ಮೂವರ ಮೇಲೂ ಪೋಕ್ಸೊ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ ಪಿ ಡಾ. ಭೀಮಾಶಂಕರ ಗುಳೇದ ತಿಳಿಸಿದರು.