ಕೆರೆ ತುಂಬಿಸುವ ಯೋಜನೆಗೆ ಮಾರ್ಚ 1 ರಂದು ಚಾಲನೆ: ಶಾಸಕ ಕಾಗೆ

Lake filling project will be launched on March 1: MLA Kage

ಅಥಣಿ 22: ಕಾಗವಾಡ ಮತಕ್ಷೇತ್ರದ ಮತದಾರರ ಋಣ ತೀರಿಸಲು ಕೆರೆ ತುಂಬುವ ಯೋಜನೆಗೆ ಚಾಲನೆ ನೀಡುತ್ತಿರುವೆ ಹೊರತು ರಾಜಕೀಯ ಲಾಭಕ್ಕಾಗಿ ಅಥವಾ ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳಲು ಅಲ್ಲ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.         

ಅವರು ಗುಂಡೇವಾಡಿ ಗ್ರಾಮದಲ್ಲಿ ಕೆರೆ ತುಂಬುವ ಯೋಜನೆ ಅನುಷ್ಠಾನದ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಿದ್ದರು. ಸ್ವಾತಂತ್ರ್ಯದ ನಂತರ ಇಲ್ಲಿಯವರೆಗೂ ಉತ್ತರ ಭಾಗದ ಗ್ರಾಮಗಳಿಗೆ ಕುಡಿಯಲೂ ಕೂಡ ನೀರು ಕೊಡಲು ಸಾಧ್ಯವಾಗಿರಲ್ಲ ಎಂದ ಅವರು ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯಿಂದ ವಂಚಿತಗೊಂಡ ಗ್ರಾಮಗಳ 11 ಕೆರೆಗಳನ್ನು ತುಂಬಿಸುವ ಯೋಜನೆ ಅನುಷ್ಠಾನ ಗೊಳಿಸುತ್ತಿರುವೆ ಎಂದರು.        

176.30 ಕೋಟಿ ಅನುದಾನದ   ಕೆರೆ ತುಂಬಿಸುವ ಯೋಜನೆಗೆ ಮಾರ್ಚ 1, ಶನಿವಾರದಂದು ಮುಂಜಾನೆ 10. ಗಂಟೆಗೆ ಗುಂಡೇವಾಡಿಯ ಕಾಡ ಸಿದ್ಧೇಶ್ವರ ದೇವಸ್ಥಾನ ಆವರಣದಲ್ಲಿ ಚಾಲನೆ ನೀಡಲಾಗುವುದು ಎಂದ ಅವರು  ಈ ಭಾಗದ ರೈತರು ಕೆರೆ ತುಂಬುವ ಯೋಜನೆ ಅನುಷ್ಠಾನಕ್ಕೆ ಸಹಕರಿಸಬೇಕು ಎಂದು ಹೇಳಿದರು.         

ಬಸವೇಶ್ವರ ಏತ ನೀರಾವರಿ ಯೋಜನೆಯ ಕಮಾಂಡ್ ಪ್ರದೇಶಕ್ಕೆ ಒಳಪಡುವ ಕೆರೆಗಳನ್ನು ಕೆರೆ ತುಂಬುವ ಯೋಜನೆಯಿಂದ ಕೈ ಬಿಟ್ಟು  ಆ ಕೆರೆಗಳನ್ನು ಬಸವೇಶ್ವರ ಏತ ನೀರಾವರಿ ಯೋಜನೆ ಮೂಲಕ ತುಂಬಿಸುತ್ತೇವೆ ಎಂದ ಅವರು ಕೆರೆ ತುಂಬುವ ಯೋಜನೆಯ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ ಎಂದು ಗುತ್ತಿಗೆದಾರರಿಗೆ ಸೂಚಿಸಿದರು. ಕಾಗವಾಡ ಮತಕ್ಷೇತ್ರದ ಅನಂತಪುರ ಗ್ರಾಮದ 2, ಗುಂಡೇವಾಡಿ ಗ್ರಾಮದ 2, ಪಾರ್ಥನಹಳ್ಳಿ ಗ್ರಾಮದ  2, ಚಮಕೇರಿ ಗ್ರಾಮದ  1, ಬೇಡರಹಟ್ಟಿ ಗ್ರಾಮದ 1, ಬಳ್ಳಿಗೇರಿ ಗ್ರಾಮದ 1, ಮಲಾಬಾದ ಗ್ರಾಮದ 1, ಬೆವನೂರ ಗ್ರಾಮದ 1 ಕೆರೆಯನ್ನು ಈ ಯೋಜನೆಯಲ್ಲಿ ತುಂಬಿಸಲಾಗುವುದು ಎಂದರು.    

ನೀರಾವರಿ ಇಲಾಖೆ ಅಧಿಕಾರಿ ಪ್ರವೀಣ ಹುಣಸಿಕಟ್ಡಿ ಮಾತನಾಡಿ,  ಕೆರೆ ತುಂಬುವ ಯೋಜನೆಗೆ ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದ ಹತ್ತಿರದ ಕೃಷ್ಣಾ ನದಿಯ ಎಡದಂಡೆಯಿಂದ 0.21 ಟಿ.ಎಮ್‌.ಸಿ ನೀರನ್ನು ಎತ್ತಿ 11 ಕೆರೆ ತುಂಬಿಸಲಾಗುವುದು ಎಂದ ಅವರು ಈ ಯೋಜನೆ ಪೂರ್ಣಗೊಳ್ಳಲು ರೈತರ ಸಹಕಾರ ಅತ್ಯಗತ್ಯವಾಗಿದ್ದು, ಸಭೆಯಲ್ಲಿ ರೈತರು ತಮ್ಮ ಅಭಿಪ್ರಾಯ ಹೇಳಬೇಕು ಜೊತೆಗೆ ಯೋಜನೆಗೆ ಸಹಕಾರ ನೀಡಬೇಕು ಎಂದರು.            

ಸಭೆಯಲ್ಲಿ ಉಪಸ್ಥಿತರಿದ್ದ ಡಾ.ಸಿ.ಎ.ಸಂಕ್ರಟ್ಟಿ, ಎಲ್ಲ 11  ಕೆರೆಗಳಿಗೂ ನೇರವಾಗಿ ಪೈಲ ಮೂಲಕ ನೀರು ಹರಿಸಿದಲ್ಲಿ ಮಾತ್ರ ಯಾವುದೇ ಅಡತಡೆ ಇಲ್ಲದೆ ಕೆರೆಗಳಿಗೆ ನೀರು ತುಂಬಿಸಬಹುದು ಎಂದು ಮನವಿ ಸಲಹೆ ನೀಡಿದರು.  

ಸಭೆಯಲ್ಲಿ ಗುತ್ತಿಗೆದಾರ ಅಕ್ಷಯ ಕಪ್ಪಲಗುದ್ದಿ,  ನೀರಾವರಿ ಇಲಾಖೆಯ ಪ್ರಶಾಂತ ಪೊತದಾರ, ಬಸವರಾಜ ಗಲಗಲಿ,  ಚಂದ್ರಕಾಂತ ಇಮ್ಮಡಿ,, ಸುರೇಶ ಮೆಂಡಿಗೇರಿ, ನಾಗಪ್ಪ ಜತ್ತಿ ಮಾತನಾಡಿದರು.  ಸಿದರಾಯ ತೇಲಿ, ಪ್ರಕಾಶ ಡೊಳ್ಳಿ,  ಐ.ಜಿ.ಬಿರಾದಾರ, ನಾಗಪ್ಪ ಜತ್ತಿ, ಗುರ​‍್ಪ ಜತ್ತಿ, ಶಿವಾನಂದ ಗೊಲಭಾವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.