ಕುಕನೂರ 02 : ಕುಂಭಮೇಳವು ವಿಶ್ವದ ಅತಿದೊಡ್ಡ ಧಾರ್ಮಿಕ ಜಾತ್ರೆಯಾಗಿದೆ ಈ ಜಾತ್ರೆಯು ಧಾರ್ಮಿಕ ನಂಬಿಕೆಯ ಸಂಕೇತ ಮಾತ್ರವಲ್ಲದೆ ಕೊಂಟ್ಯಂತರ ಭಕ್ತರು ಭಾಗವಹಿಸುವ ಪ್ರಯಾಣವೂ ಆಗಿದೆ ಎಂದು ಮಹಾದೇವ ಸ್ವಾಮೀಜಿ ಹೇಳಿದರು.
ಅವರು ಕುಕನೂರ ಪಟ್ಟಣದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದಲ್ಲಿ ನಡೆದ 198 ನೇ ಮಾಸಿಕ ಶಿವಾನುಭವ ಹಾಗೂ ಕುಂಭಮೇಳ ಯಾತ್ರೆ ಮಾಡಿದ ಸದ್ಬಕ್ತರ ಸನ್ಮಾನ ಸಮಾರಂಭದ ನೇತೃತ್ವ ವಹಿಸಿ ಮಾತಾನಾಡುತ್ತಾ ಹಿಂದೂ ಧರ್ಮದಲ್ಲಿ ಆತ್ಮ ಶುದ್ಧೀಕರಣ, ಪಾಪಗಳಿಂದ ವಿಮೋಚನೆ ಮತ್ತು ಮೋಕ್ಷವನ್ನು ಪಡೆಯುವ ಪ್ರಮುಖ ಮಾಧ್ಯಮವೆಂದು ಇದನ್ನು ಪರಿಗಣಿಸಲಾಗಿದೆ. ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದರಿಂದ ತಮ್ಮ ಜೀವನದ ಪಾಪಗಳಿಂದ ಮುಕ್ತರಾಗುತ್ತಾರೆ ಎಂದು ಭಕ್ತರು ನಂಬುವ ಅತ್ಯಂತ ಪುಣ್ಯ ಮತ್ತು ದೈವಿಕ ಸಂದರ್ಭ ಇದಾಗಿದೆ ಮತ್ತು ಕುಕನೂರ ಪಟ್ಟಣದ ಹಲವಾರು ಜನರು ಈ ಯಾತ್ರೆ ಕೈಗೊಂಡು ಯಶಸ್ವಿಯಾಗಿ ಪೂರೈಸಿ ಬಂದದ್ದು ಅತ್ಯಂತ ಸಂತೋಷ ತಂದಿದೆ ಎಂದರು. ನಂತರ ಮಾತನಾಡಿದ ಜಯಶ್ರೀ ಪವಾಡಶೆಟ್ಟಿ ನಾವು ಕುಂಭಮೇಳ ಯಾತ್ರೆ ಮಾಡಿದ್ದು ಅತ್ಯಂತ ಸಂತೋಷ ತಂದಿದೆ, ಇಂತಹ ಯಾತ್ರೆಗಳಿಂದ ನಮ್ಮ ದೇಶದ ಇತಿಹಾಸ ಪರಂಪರೆ ತಿಳಿಯಲು ಸಾದ್ಯ ನಾವೇಲ್ಲ ಹಿಂದೂಗಳು ಎಂಬುದೇ ನಮ್ಮಪುಣ್ಯ ಎಂದರು. ಚಂದ್ರು ಬಗನಾಳ ಮಾತನಾಡಿ ನಾವುಗಳು ಯಾತ್ರೆ ಮಾಡಿದ್ದನ್ನ ಗುರುತಿಸಿ ಶ್ರೀಗಳು ನಮ್ಮನೆಲ್ಲ ಸನ್ಮಾನ ಮಾಡಿ ಗೌರವಿಸಿದ್ದು ಸಂತಸ ತಂದಿದೆ, ನಮ್ಮ ಯಾತ್ರೆಯಿಂದ ನಮ್ಮೂರಿಗೆ ಒಳ್ಳೆಯದಾದರೆ ಸಾಕು ಎಂದರು.
ಈ ಸಂದರ್ಭದಲ್ಲಿ ಕುಂಭಮೇಳ ಯಾತ್ರೆ ಮಾಡಿದ ಭಕ್ತರಿಗೆ ಶ್ರೀಗಳು ಸನ್ಮಾನ ಮಾಡಿ ಗೌರವಿಸಿದರು. ಗದಿಗೆಪ್ಪ ಪವಾಡಶೆಟ್ಟಿ, ಪ್ರಭು ಶಿವಸಿಂಪರ, ಜಂಭಯ್ಯ ಹಿರೇಮಠ, ಸಂಗಮೇಶ ಕಲ್ಮಠ, ಮಹೇಶ ಸಾಲಿಮಠ, ಆನಂದ ಮಡಿವಾಳರ, ಈಶಪ್ಪ ಸುಲಾಖೆ, ಪ್ರತಾಪ ಜವಳಿ, ಮಂಜು ಸಬರದ ಮತ್ತು ಇತರರು ಇದ್ದರು.