ಶ್ರೀನಗರ, ಮಾ ೨೬, ಕೊರೊನಾವೈರಸ್ ಸೋಂಕು ತಗುಲಿದ್ದ ೬೫ ವರ್ಷದ ಧರ್ಮ ಪ್ರಚಾರಕನೊಬ್ಬ ಶ್ರೀನಗರದ ಆಸ್ಪತ್ರೆಯೊಂದರಲ್ಲಿ ಗುರುವಾರ ಮುಂಜಾನೆ ಸಾವನ್ನಪ್ಪಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಕೋವಿಡ್ -೧೯ಕ್ಕೆ ಸಂಬಂಧಿಸಿದಂತೆ ಮೊದಲ ಪ್ರಕರಣ ಇದಾಗಿದೆ.ಧರ್ಮ ಪ್ರಚಾರಕ ವ್ಯಕ್ತಿ ಶ್ರೀನಗರದ ಎದೆ ರೋಗಗಳ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ಶ್ರೀನಗರ ಮೇಯರ್ ಜುನೈದ್ ಆಜಂ ಮಟ್ಟು, ಕೊರೊನಾ ಸೋಂಕಿತ ವ್ಯಕ್ತಿ ಮೃತಪಟ್ಟಿರುವುದನ್ನು ದೃಢ ಪಡಿಸಿದ್ದಾರೆ. ಸೋಂಕಿನ ಸರಪಳಿಯನ್ನು ಕತ್ತರಿಸಲು ಜನರು ಸಹಕರಿಸಬೇಕು ಎಂದು ಅವರು ಟ್ವೀಟ್ ಮೂಲಕ ಜನರಿಗೆ ಮನವಿ ಮಾಡಿದ್ದಾರೆ. ಜಮ್ಮು ಕಾಶ್ಮೀರ ಹಿಂದಿರುಗುವ ಮುನ್ನ ಈ ಧಾರ್ಮಿಕ ಪ್ರಚಾರಕ ದೆಹಲಿ, ಉತ್ತರ ಪ್ರದೇಶ, ಸಾಂಬಾ, ಜಮ್ಮು. ಶ್ರೀನಗರ ಹಾಗೂ ಸೋಪುರ್ ನಲ್ಲಿ ವ್ಯಾಪಕ ಪ್ರವಾಸ ಕೈಗೊಂಡು ವಿವಿಧ ಧಾರ್ಮಿಕ ಪ್ರಚಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ರಾಜ್ಯದಲ್ಲಿ ಪತ್ತೆಯಾಗಿರುವ ೧೧ ಮಂದಿ ಸೋಂಕಿತ ವ್ಯಕ್ತಿಗಳ ಪೈಕಿ ಐವರು ಈ ಧಾರ್ಮಿಕ ನಾಯಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರು ಎಂದು ಜಮ್ಮು ಕಾಶ್ಮೀರದ ಆರೋಗ್ಯ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ ಶ್ರೀನಗರದಿಂದ ೩೦ ಕಿ.ಮೀ ದೂರದಲ್ಲಿರುವ ಬಂಡಿಪೊರಾದ ಐವರಲ್ಲಿ ಸೋಂಕು ದೃಢಪಟ್ಟಿದೆ. ೬೫ ವರ್ಷದ ವ್ಯಕ್ತಿಯೊಬ್ಬರಲ್ಲಿ ಎರಡು ದಿನಗಳ ಹಿಂದೆ ಸೋಂಕು ದೃಢಪಟ್ಟನಂತರ. ಆ ವ್ಯಕ್ತಿಯನ್ನು ಪರೀಕ್ಷಿಸಿದ್ದ ಕಾಶ್ಮೀರದ ೧೨ ವೈದ್ಯರು ಹಾಗೂ ಅರೆವೈದ್ಯಕೀಯ ಸಿಬ್ಬಂದಿಯನ್ನು ಕ್ವಾರಂಟೈನ್ ಇರಿಸಲಾಗಿದ್ದು. ಆತ ವಾಸವಾಗಿದ್ದ ಪ್ರದೇಶವನ್ನು ನಿರ್ಬಂಧ ಪ್ರದೇಶವೆಂದು ಘೋಷಿಸಿ ಬಂದ್ ಮಾಡಲಾಗಿದೆ.