ಲೋಕದರ್ಶನ ವರದಿ
ಕೂಡ್ಲಿಗಿ 19: ಪಟ್ಟಣ ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ಎಲ್.ಎಸ್. ಬಷೀರ್ ಆಹಮದ್, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಪಿ. ರಜನಿಕಾಂತ್ ಅವರ ಭಾವ ಚಿತ್ರ ಹರಿದು ಹಾಕಿದ ಪ್ರಸಂಗ ನಡೆಯಿತು.
ಪೊಲೀಸ್ ಸರ್ಪಗಾವಲಿನಲ್ಲಿ ಸಭೆ:
ಕಳೆದ ಒಂದು ತಿಂಗಳಿನಿಂದ ಅಧ್ಯಕ್ಷ ಪಿ. ರಜನಿಕಾಂತ್ ರಾಜೀನಾಮೆ ನೀಡುವಂತೆ ಒತ್ತಾಯಿಸುತ್ತ ಬಂದಿದ್ದ ಸದಸ್ಯ ಎಲ್.ಎಸ್. ಬಷೀರ್ ಆಹಮದ್ ಕಳೆದ ನಾಲ್ಕೈದು ತಿಂಗಳಿನಿಂದಲೂ ಅಧ್ಯಕ್ಷರು ಸಾಮಾನ್ಯ ಸಭೆ ಕರೆದಿಲ್ಲ ಎಂದು ದೂರಿದ್ದರು. ಅಲ್ಲದೆ ಇಂದು ನಡೆಯುವ ಸಭೆಯಲ್ಲಿ ಪ್ರತಿಭಟನೆ ಮಾಡುವುದಾಗಿಯೂ ಹೇಳಿದ್ದರು. ಇದರಿಂದ ಗುರುವಾರ ನಿಗದಿಯಾಗಿದ್ದ ಸಭೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಿಪಿಐ ನಯಿಂ ಆಹಮದ್ ಹಾಗೂ ಪಿಎಸ್ಐ ತಿಮ್ಮಣ್ಣ ಚಾಮನೂರು ನೇತೃತ್ವದಲ್ಲಿ ಸುಮಾರು 15ಕ್ಕು ಹೆಚ್ಚು ಪೊಲೀಸರು ಹಾಗೂ ಒಂದು ಡಿಆರ್ ವಾಹನವನ್ನು ಪಟ್ಟಣ ಪಂಚಾಯ್ತಿ ಮುಂದೆ ಭದ್ರತೆಗೆ ನಿಯೋಜನೆ ಮಾಡಲಾಗಿತ್ತು. ಪಟ್ಟಣ ಪಂಚಾಯ್ತಿ ಸದಸ್ಯರು, ಸಿಬ್ಬಂದಿ, ಪತ್ರಕರ್ತರನ್ನು ಹೊರತು ಪಡಿಸಿ ಪಟ್ಟಣ ಪಂಚಾಯ್ತಿ ಆವರಣದಲ್ಲಿ ಯಾರನ್ನು ಬಿಡಲಿಲ್ಲ. ಇದರಿಂದ ತಮ್ಮ ಕೆಲಸ ಕಾರ್ಯಗಳಿಗೆ ಬಂದಿದ್ದ ಅನೇಕ ಸಾರ್ವಜನಿಕರು ತೊಂದರೆ ಅನುಭಸಬೇಕಾಯಿತು.
ಪಟ್ಟಣ ಪಂಚಾಯ್ತಿ ಅವಧಿ ಕೇವಲ ಎರಡು ತಿಂಗಳು ಮಾತ್ರ ಬಾಕಿ ಇದ್ದು, ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ನಾನೇ ಅಧ್ಯಕ್ಷನಾಗಿ ಮುಂದುವರಿಯುವಂತೆ ಎಲ್ಲಾ ಸದಸ್ಯರು ಒತ್ತಾಯಿಸಿದ್ದಾರೆ. ಈ ಕಾರಣಕ್ಕೆ ನಾನು ರಾಜೀನಾಮೆ ನೀಡಿಲ್ಲ. ಸದಸ್ಯರು ಒಪ್ಪಿದರೆ ರಾಜೀನಾಮೆ ನೀಡಲು ಸಿದ್ದ ಎಂದು ಸಭೆಯ ನಂತರ ಅಧ್ಯಕ್ಷ ಪಿ.ರಜನಿಕಾಂತ್ ಸ್ಪಷ್ಟನೆ ನೀಡಿದರು.