ಕಿರಿಕ್ ರಕ್ಷಿತ್ ಶೆಟ್ಟಿ ಈಗ ಕಲಿಯುಗದ ದಶಾವತಾರಿ:ಇವನೇ ಶ್ರೀಮನ್ನಾರಾಯಣ

Rakshit Shetti

ಬೆಂಗಳೂರು,ನ 28- ಇಷ್ಟು ದಿನ ಪೊರ್ಕಿ, ರೊಮ್ಯಾಂಟಿಕ್, ತರ್ಲೆಬಾಯ್ ಆಗಿ ಪರದೆ‌ಮೇಲೆ‌ ಕಾಣಿಸಿಕೊಂಡು ಪಡ್ಡೆಹುಡುಗರ ಅದರಲ್ಲೂ ನಿರ್ದಿಷ್ಟವಾಗಿ ಕಾಲೇಜು ಹುಡುಗರ ಹಾರ್ಟ್ ಫೇವರೇಟ್ ನಟ ಸ್ಯಾಂಡಲ್‌ವುಡ್‌ನ 'ರಕ್ಷಿತ್ ಶೆಟ್ಟಿ' ಕಿರಿಕ್‌ ಪಾರ್ಟಿಯ ಬಳಿಕ ಇದೀಗ ನಾರಾಯಣನ ಅವತಾರದಲ್ಲಿ ತೆರೆಯ ಮೇಲೆ ಬರುತ್ತಿದ್ದಾರೆ. 

ಇದೇ ಮೊದಲ ಬಾರಿಗೆ ಆ್ಯಕ್ಷನ್, ಸ್ಟಂಟ್ ಚಿತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಅರೆ ಇದೇನೂ ಪುರಾಣದ ನಾರಾಯಣನ‌ ಅವತಾರದಲ್ಲಿ ರಕ್ಷಿತ್ ಬರುತ್ತಿದ್ದಾರೆಯೇ ಎಂದು ಭಾವಿಸುವುದು ಸಹಜ. ಆದರೆ ರಕ್ಷಿತ್ ಇಲ್ಲಿ ಕಲಿಯಗದ ನಾರಾಯಣ. ಪುಷ್ಕರ್ ಫಿಲಂಸ್ ಅರ್ಪಿಸುವ 'ಅವನೇ ಶ್ರೀಮನ್ನಾರಾಯಣ' ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ರಕ್ಷಿತ್ ಅಭಿನಯಿಸಿದ್ದಾರೆ.

ಅಂದಹಾಗೆ ನಗರದ ಶಂಕರ್ ನಾಗ್ ಚಿತ್ರಮಂದಿರದಲ್ಲಿ ಗುರುವಾರ ಶ್ರೀಮನ್ ನಾರಾಯಣ ಚಿತ್ರದ‌ ಟ್ರೇಲರ್ ಸದ್ದುಮಾಡಿತು. "ರಣರಂಗದಲ್ಲೊಂದು ಅಂತರಂಗದಲ್ಲೊಂದು ಯುದ್ಧ, ದಾರಿತಪ್ಪಿದವರನ್ನು ಬದಲಿಸಬಹುದು, ದಾರಿಹಿಡಿದವರನ್ನಲ್ಲ" ಎನ್ನುವ ಡೈಲಾಗ್‌ ಟ್ರೈಲರ್‌ನ ಹೈಲೈಟ್. 

ಈ ಟ್ರೈಲರ್ ಸಿದ್ಧಗೊಳ್ಳಲು ಬರೋಬ್ಬರಿ ಒಂದು ತಿಂಗಳು ತೆಗೆದುಕೊಂಡಿದೆ. ನಾರಾಯಣನ ಹತ್ತು ಅವತಾರಗಳ ರೀತಿಯಲ್ಲಿ ಕಲಿಯುಗದಲ್ಲಿ ಪೊಲೀಸ್ ಅಧಿಕಾರಿಯೊಬ್ಬ ಈ ರೀತಿಯ ಅವತಾರಗಳನ್ನೆತ್ತಿ ಸಮಸ್ಯೆಗಳನ್ನು ನಿಭಾಯಿಸುತ್ತಾನೆ. ದನಕಾಯುವ ಗೊಲ್ಲ‌ಕೃಷ್ಣ, ಅಜರಾಮರ ರಾಮ, ಎದೆಸೀಳುವ ನರಸಿಂಹ ಸೇರಿದಂತೆ ಹತ್ತು ಅವತಾರಗಳಲ್ಲಿ ನಾರಾಯಣನ‌ ರೀತಿ ಶತ್ರುಗಳನ್ನು ಸೆದೆಬಡಿಯುವ ವಿಭಿನ್ನ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ. 

ಕನ್ನಡ,‌ಹಿಂದಿ, ತೆಲುಗು, ತಮಿಳು.ಮಲೆಯಾಳಂ ಈ ಐದು ಭಾಷೆಗಳಲ್ಲಿ ಮೊದಲ ಬಾರಿಗೆ ಚಿತ್ರ ತೆರೆಗೆ ಬರುತ್ತಿದ್ದು, ಬರುವ ಡಿಸೆಂಬರ್ 27 ರಂದು ಚಿತ್ರ ಬಿಡುಗಡೆ ಮಾಡುವ ಯೋಜನೆ ಚಿತ್ರತಂಡದ್ದು. ಸಚಿನ್‌ ನಿರ್ದೇಶನದ, ಚಿತ್ರಕಥೆಯ ಜೊತೆಗೆ ನಾಯಕನಾಗಿರುವ ರಕ್ಷಿತ್ ಶೆಟ್ಟಿಗೆ ಸಾನ್ವಿ ಶ್ರೀವಾಸ್ತವ್ ಜೋಡಿಯಾಗಿದ್ದಾರೆ. 

ಈ ಚಿತ್ರಕ್ಕೆ ಅಚ್ಯುತ್ ಕುಮಾರ್,‌ ಪ್ರಮೋದ್‌ಶೆಟ್ಟಿ, ಬಾಲಾಜಿ ಮೋಹನ್ ಸೇರಿದಂತೆ ಹಲವರ ಬಹುತಾರಾಗಣವಿದೆ. ಚರಣ್‌ರಾಜ್, ಅಜನೀಶ್ ಲೋಕನಾಥ್ ಸಂಗೀತ, ಕರಂ‌ಚಾವ್ಲಾ‌‌ ಛಾಯಾಗ್ರಹಣ, ಇಮ್ರಾನ್‌ಸರ್ದಾರಿಯಾ ನೃತ್ಯ ನಿರ್ದೇಶನ, ಹೆಚ್‌.ಕೆ.ಪ್ರಕಾಶ್,ಪುಷ್ಕರ್ ಮಲ್ಲಿಕಾರ್ಜುನ್ ಬಂಡವಾಳ ಹೂಡಿದ್ದಾರೆ.

ಕಥೆಯುದ್ದಕ್ಕೂ ಸಾಂದರ್ಭಿಕ‌ ಸನ್ನಿವೇಶಗಳಲ್ಲಿ ಅವನೇ ಶ್ರೀಮನ್ನಾರಾಯಣ ಎನ್ನುವ ರಕ್ಷಿತ್ ಶೆಟ್ಟಿ ಚಿತ್ರದ ಬಗ್ಗೆ, ತಮ್ಮ ಅಭಿನಯದ ವಿಶೇಷತೆ ಬಗ್ಗೆ ರಕ್ಷಿತ್ ಶೆಟ್ಟಿ ಯುಎನ್‌ಐ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದು ಹೀಗೆ.

*ಕಿರಿಕ್ ಪಾರ್ಟಿ ನಂತರ‌ ಮೂರು ವರ್ಷಗಳ ಬಳಿಕ ತೆರೆಮೇಲೆ‌ ಕಾಣಿಸಿಕೊಳ್ಳುತ್ತಿದ್ದೀರಿ.

ಶೆಟ್ಟಿ: ಹಾಗೆನಿಲ್ಲ ಕಿರಿಕ್ ಪಾರ್ಟಿ‌ ಬಳಿಕ ಶ್ರೀಮನ್ ನಾರಾಯಣ ಚಿತ್ರದ‌‌ ಸಿದ್ಧತೆಯಲ್ಲಿಯೇ ಇದ್ದೆ‌. ಹೀಗಾಗಿ ಹೆಚ್ಚು ಸಮಯದ ಅಂತರ ಆಗಿಲ್ಲ.  

* ಶ್ರೀಮನ್‌ ನಾರಾಯಣನ‌ ಬಗ್ಗೆ ಹೇಳಿ.

ಶೆಟ್ಟಿ: ಇದು ಪೌರಾಣಿಕ ಚಿತ್ರದ‌ ಹೆಸರಂತೆ‌ ಕಂಡುಬಂದರೂ ಇದು ಪೌರಾಣಿಕ‌ಚಿತ್ರವಲ್ಲ. ಈಗಿನ ಕಾಲಕ್ಕೆ ತಕ್ಕಂತಹ ಚಿತ್ರ. ಚಿತ್ರಕಥೆ‌ ನನ್ನದೇ ಆಗಿರುವುದರಿಂದ ಚಿತ್ರದಲ್ಲಿ ಅಭಿನಯಿಸುವುದು ನನಗೆ ಸಹಾಯಕವಾಯಿತು. ಖಡಕ್ ಪೊಲೀಸ್ ಅಧಿಕಾರಿಯ ಪಾತ್ರ ಇದಲ್ಲದಿದ್ದರೂ ಒಬ್ಬ ಪೊಲೀಸ್ ಅಧಿಕಾರಿ ಸಮಸ್ಯೆಗಳನ್ನು ಹೇಗೆ ನಿಭಾಯಿಸುತ್ತಾನೆ. ಯಾವ ರೀತಿ ಸಂಕಷ್ಟಗಳನ್ನು ಎದುರಿಸುತ್ತಾನೆ ಎನ್ನುವ ವಿಶೇಷ ಕಥಾಹಂದರವೇ ಇದು.

* ಚಿತ್ರಕ್ಕೆ ಶೀರ್ಷಿಕೆ ವಿಭಿನ್ನವಾಗಿದೆ. ಶೀರ್ಷಿಕೆ ಆಯ್ಕೆ ಮಾಡಿದ್ದು ಯಾರು?

ಶೆಟ್ಟಿ: ಚಿತ್ರಕ್ಕೆ ಕಥೆ ಬರೆಯುವಾಗಲೇ ಚಿತ್ರಕ್ಕೆ ಶ್ರೀಮನ್ ನಾರಾಯಣ ಎಂದು ಹೆಸರಿಡಬೇಕು ಎಂದು ನಿರ್ಧರಿಸಿದ್ದೆ‌. ಈ ಬಗ್ಗೆ ನಿರ್ದೇಶಕರೂ ಒಪ್ಪಿಗೆ ನೀಡಿದರು.

* ಮೊದಲ ಬಾರಿಗೆ ಆ್ಯಕ್ಷನ್ ಸ್ಟೆಂಟ್‌ನ ಅನುಭವ ತಯಾರಿ ಬಗ್ಗೆ. 

ಶೆಟ್ಟಿ: ಚಿತ್ರಕ್ಕಾಗಿ ಅಂತಹ ವಿಶೇಷ ಸಿದ್ಧತೆಗಳನ್ನಾಗಲಿ ತರಬೇತಿಯನ್ನಾಗಲಿ ತೆಗೆದುಕೊಂಡಿಲ್ಲ. ಜಿಮ್ ,‌ಜಾಗಿಂಗ್ ಎಂದೆಲ್ಲಾ ಅಭ್ಯಾಸ ಇರುವುದರಿಂದ ಅಷ್ಟೇನೂ ಕಷ್ಟ‌ ಎನಿಸಲಿಲಿಲ್ಲ. ಚಿತ್ರಕಥೆ ನನ್ನದೇ ಆಗಿದ್ದರಿಂದ ಪಾತ್ರವೂ ಸುಲಭವಾಯಿತು ಚಿತ್ರದ ವಿಶೇಷತೆ ಬಗ್ಗೆ ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದು  201 ದಿನ ಚಿತ್ರೀಕರಣಗೊಂಡಿದೆ. ಎಲ್ಲರಿಗೂ ಇಷ್ಟವಾಗುವ ಎಲ್ಲಾ ವಯಾನದವರು ಕುಳಿತು ನೋಡಬಹುದಾದ ಚಿತ್ರವಿದು. ಕನ್ನಡ,‌ ಮಲೆಯಾಳಂ ಭಾಷೆಯಲ್ಲಿ ಡಬ್ಬಿಂಗ್ ಮಾಡಿದ್ದೇನೆ.

*ಕೊನೆಯ ಮಾತು

ಶೆಟ್ಟಿ: ಚಿತ್ರವನ್ನು ದಯವಿಟ್ಟು ಥಿಯೇಟರ್‌ಗೆ ಬಂದು ನೋಡಿ.ಫೈರಸಿ ಹಾವಳಿ ಬೇಡ