ದಕ್ಷಿಣ ಕನ್ನಡದ ಸಂಸ್ಕೃತಿಯ ಕಾಂತಾರ

ದಸರೆಯ ಹಬ್ಬದಲ್ಲಿ ಮನೆಮಂದಿಯೆಲ್ಲ ಸೇರಿ ಕಾಂತಾರ ನೋಡಿದೇವು. ನಿಜಕ್ಕೂ ಅಪರೂಪದ ಸಿನಿಮಾ. ದಕ್ಷಿಣ ಕನ್ನಡ ಕಥನಗಳನ್ನು ರಿಷಬ್ ಶೆಟ್ಟಿಯವರ ತಂಡ ತೆರೆಯ ಮೇಲೆ ರೋಚಕವಾಗಿ ತೋರಿಸಿದೆ. ಹೀಗಾಗಿ ಮೆಚ್ಚುಗೆ ಸೂಚಿಸಲೇ ಬೇಕು.  

ತಲೆತಲಾಂತರಗಳಿಂದ ಅರಣ್ಯ ಭೂಮಿಯಲ್ಲಿ ಆದಿ ಸಂಸ್ಕೃತಿ ವೈವಿಧ್ಯಗಳ ಜೊತೆಗೆ ಬದುಕಿಕೊಂಡು ಬಂದ ಕುಟುಂಬಗಳು. ಜೊತೆಗೆ ನಂಬಿದ ಪಂಜುರ್ಲಿ ದೈವ. ಕಥಾ ನಾಯಕ ಶಿವನ ತಂದೆ ಭೂತ ಕಟ್ಟುವನು. ದೈವ ಕೋಲದ ಸಂದರ್ಭದಲ್ಲಿ ಭೂತದ ಜೊತೆಗೆ ಭೂಮಾಲಿಕನ ಪುತ್ರ ಕೇಳುವ ಪ್ರಶ್ನೆ, ದೈವಕ್ಕೆ ಸವಾಲಾಗುತ್ತಿದೆ. ದೈವ ಕೆರಳುತ್ತದೆ. ತನ್ನ ಶಕ್ತಿಯನ್ನೂ ನಿರೂಪಿಸಲು ಅದು ಕಾಡಿನೆಡೆಗೆ ಓಡುತ್ತಾ ಮಾಯವಾಗುತ್ತದೆ.  

ಹಿರಿಯರು ಸ್ಥಳೀಯರಿಗೆ ಕೊಟ್ಟ ಭೂಮಿಯನ್ನು ಮರಳಿ ತನ್ನದಾಗಿಸಿಕೊಳ್ಳಲು ಸಂಚು ನಡೆಸುವ ಭೂಮಾಲಿಕ. ಮತ್ತೊಂದೆಡೆ ಅರಣ್ಯ ಸಿಬ್ಬಂದಿಯೊಂದಿಗೆ ಗಡಿ ಗುರುತಿಸಿ ಬೇಲಿ ಹಾಕಲು ಮುಂದಾಗಿರುವ ಸರ್ಕಾರ. ಇವೆಲ್ಲದರ ನಡುವೆ ನಲುಗುವ ಸ್ಥಳೀಯರು. ಈ ಸಂಘರ್ಷದಲ್ಲಿ ಮುನ್ನೆಲೆಗೆ ಬರುವ ಕಥಾನಾಯಕ ಶಿವ. ಸರ್ಕಾರದ ಜೊತೆಗೆ ಶಿವನ ಸಂಘರ್ಷ ಮತ್ತು ಹಿಂಸೆ ನಡೆಯುತ್ತದೆ. ಶಿವನಿಗೆ ಜೈಲು ವಾಸ, ಭೂಮಾಲಿಕನ ಸಂಚು ಶಿವನಿಗೆ ಗೊತ್ತಾಗುವುದು, ಹಿಂಸೆ ಮತ್ತು ಕ್ರೌರ್ಯದ ತಾರಕದೊಂದಿಗೆ ಚಿತ್ರ ಕೊನೆಗೊಳ್ಳುತ್ತದೆ.  

ಕಥಾ ನಾಯಕ ಶಿವನಲ್ಲಿ ಭೂತ ಪ್ರವೇಶ. ಸರ್ಕಾರ ಮತ್ತು ಜನರ ನಡುವೆ ಪಂಜುರ್ಲಿ ದೈವ ಮಧ್ಯಸ್ಥಿಕೆ ವಹಿಸುವುದು. ಈ ಮೂಲಕ ಸರ್ಕಾರ ಮತ್ತು ಸ್ಥಳೀಯರ ನಡುವೆ ನಡೆಯಬಹುದಾದ ಸುದೀರ್ಘ ಸಂಘರ್ಷಕ್ಕೆ ದೈವದಿಂದ ಪರಿಹಾರ ದೊರಕುತ್ತದೆ. ದಕ್ಷಿಣ ಕನ್ನಡದ ಸಾಂಸ್ಕೃತಿಕ ವ್ಯವಸ್ಥೆಯನ್ನು ಉತ್ತಮವಾಗಿ ನಿರೂಪಿಸಿದ್ದಾರೆ. ಭೂತದ ವೇಷ, ಬಣ್ಣ, ಗಗ್ಗರದ ಧ್ವನಿ ಬಳಸಿಕೊಂಡು ನಿರ್ದೇಶಕರು ಚಿತ್ರವನ್ನು ಯಶಸ್ವಿಯಾಗಿಸಿದ್ದಾರೆ. ಕೊನೆಯಲ್ಲಿ ಹಿಂಸಾತ್ಮಕ ಫೈಟಿಂಗ್‌ಗಳನ್ನು ಪ್ರೇಕ್ಷಕರು ಸಹಿಸಿಕೊಳ್ಳಬೇಕಾಗುತ್ತದೆ. ರಿಷಬ್ ಶೆಟ್ಟಿ ಅಭಿನಯದ ಮೂಲಕ ಸೀನಿಮಾಕ್ಕೆ ಜೀವ ತುಂಬಿದ್ದಾರೆ. ಕಿಶೋರ್, ಅಚ್ಯುತ್, ಸಪ್ತಮಿ ಗೌಡ ಪೂರಕವಾಗಿ ಮೂಡಿ ಬಂದಿದ್ದಾರೆ.  

ಆದರೆ ಕಾಂತಾರ ಸೀನಿಮಾ ನೋಡಿದ ಮೇಲೆ ಒಂದು ವಿಷಯ ಬಹುವಾಗಿ ಕಾಡಿತು. ನಮ್ಮ ಉತ್ತರ ಕರ್ನಾಟಕದಲ್ಲಿ ಸಣ್ಣಾಟ, ದೊಡ್ಡಾಟ, ಬಯಲಾಟ ಮುಂತಾದ ಕಲೆಗಳು ಬಹು ಪ್ರಸಿದ್ಧವಾಗಿವೆ. ಇಂತಹ ಕಲೆಗಳನ್ನು ತೆರೆಯ ಮೇಲೆ ತರಲು ಪ್ರಯತ್ನಿಸಬಹುದಲ್ಲವೆ? ದಕ್ಷಿಣ ಕನ್ನಡದ ಯಕ್ಷಗಾನ ಕಲೆಯನ್ನು ದಕ್ಷಿಣ ಕನ್ನಡಿಗರು ಪ್ರತಿ ವರ್ಷವೂ ಕರ್ನಾಟಕದ ಸಣ್ಣ ಸಣ್ಣ ಪಟ್ಟಣಗಳಿಗೂ ಕಲೆಯನ್ನು ಪ್ರಚುರಪಡಿಸುತ್ತಿರುವ ಕಾಯಕ ನಿಜಕ್ಕೂ ಮೆಚ್ಚುವಂತಹುದು. ನಾವೇಕೆ ಪ್ರಯತ್ನಿಸುತ್ತಿಲ್ಲ. ನಮ್ಮ ಉತ್ತರ ಕರ್ನಾಟಕ ಭಾಷೆ ಮತ್ತು ಕಲಾವಿದರು ಕಾಮಿಡಿಗಳಷ್ಟೇ ಸೀಮಿತಗೊಳ್ಳುತ್ತಿರುವುದು ದುರಾದೃಷ್ಟದ ಸಂಗತಿ. ಇನ್ನು ಮುಂದಾದರೂ ಉತ್ತರ ಕರ್ನಾಟಕದ ಕಥನಗಳು ತೆರೆಯ ಮೇಲೆ ಬರುವಂತಾಗಲಿ. ಒಟ್ಟಾರೆ ಕಾಂತಾರದಂತಹ ಕನ್ನಡ ಸೀನಿಮಾಗಳಿಂದ ಜಗತ್ತು ನೋಡುವಂತೆ ಆಯಿತು. ಪ್ರಕೃತಿಯ ಸೊಬಗು, ನದಿ, ಅರಣ್ಯದ ನಿಗೂಢತೆ ಎಲ್ಲವನ್ನು ನಾವು ಸೀನಿಮಾ ನೋಡಿಯೇ ಅನುಭವಿಸಬೇಕು. ನಟ, ನಿರ್ದೇಶಕ ರಿಷಬ್‌ಶೆಟ್ಟಿ, ನಿರ್ಮಾಪಕ ವಿಜಯ ಕಿರಗಂದೂರು ಮತ್ತು ತಂಡಕ್ಕೆ ಅಭಿನಂದನೆಗಳು. 

- * * * -