ವಿದ್ಯಾರ್ಜನೆಯೊಂದಿಗೆ ಸೇವಾ ಮನೋಭಾವನೆಯು ಅಗತ್ಯ - ಕಾಮಣ್ಣವರ

ವಿದ್ಯಾರ್ಜನೆಯೊಂದಿಗೆ ಸೇವಾ ಮನೋಭಾವನೆಯು ಅಗತ್ಯ - ಕಾಮಣ್ಣವರ Service attitude is essential along with education - Kamannavara

ಯರಗಟ್ಟಿ 09 :  ಭಾರತೀಯ ಸಾಮಾಜಿಕ ಮತ್ತು ಆಧ್ಯಾತ್ಮಿಕ ಪರಂಪರೆಯಲ್ಲಿ ಪರೋಪಕಾರಾರ್ಥಮ್ ಇದಂ ಶರೀರಂ ಎಂಬ ಮಾತು ಜನಜನಿತವಾಗಿದೆ. ಅದರಂತೆ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಜನೆಯೊಂದಿಗೆ ಸೇವಾ ಮನೋಭಾವನೆಯನ್ನು ರೂಡಿಸಿಕೊಳ್ಳುವುದು ಅಗತ್ಯ ಎಂದು ಯರಗಟ್ಟಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ತಮ್ಮಣ್ಣ ಕಾಮಣ್ಣವರ ಅವರು ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಸಮೀಪದ ಯರಗಣವಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ವಿಶೇಷ ವಾರ್ಷಿಕ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಸಿಗೆ ನೀರಿರುವುದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಈ ಶಿಬಿರದ ಅವಧಿಯುದ್ಧಕ್ಕೂ ಗ್ರಾಮದ ಸ್ವಚ್ಛತೆ ನೈರ್ಮಲ್ಯ ವಿವಿಧ ವಿಷಯಗಳ ಕುರಿತು ಗ್ರಾಮಸ್ಥರನ್ನು ಜಾಗೃತಿಗೊಳಿಸುವ ರಚನಾತ್ಮಕ ಕಾರ್ಯಗಳಲ್ಲಿ ತೊಡಗಬೇಕು ಎಂದು ಪ್ರತಿಪಾದಿಸಿದರು.ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಆರ್‌.ಎಸ್‌. ಮರಿಗೌಡರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಾಜಿ ಗ್ರಾ. ಪಂ. ಅಧ್ಯಕ್ಷ ಲಕ್ಕಪ್ಪ ಸನ್ನಿಂಗವನ್ನರ, ಅಶೋಕ ನಾಯ್ಕರ, ಬಾಬಾಸಾಹೇಬ ದೇಸಾಯಿ, ಯರಗಟ್ಟಿ ತಾಲೂಕಿನ ಶಿಕ್ಷಣ ಸಂಯೋಜಕರಾದ ಎಂ.ಬಿ. ಕಡಕೋಳ, ಶಿವಪುರ ಕ್ಲಸ್ಟರ್ ನ ಸಿ.ಆರ್‌.ಪಿ. ಎಮ್‌. ಎಮ್‌. ಮಲಕಣ್ಣವರ ಹಾಗೂ ಸ್ಥಳೀಯ ಶಾಲೆಯ ಮುಖ್ಯ ಗುರುಗಳಾದ ಎಸ್‌. ಬಿ. ನಂದಿಮಠ ಸೇರಿದಂತೆ ಶಿಕ್ಷಕ ವೃಂದದವರು ಹಾಗೂ ಶಿಬಿರಾರ್ಥಿ ವಿದ್ಯಾರ್ಥಿಗಳು ಸೇರಿದಂತೆ ಯರಗಣವಿ ಗ್ರಾಮದ ಪ್ರಮುಖರು ಹಾಜರಿದ್ದರು. ಸಿದ್ಲಿಂಗಪ್ಪ ಗಾಳಿ ನಿರೂಪಿಸಿದರು. ಚಿಕ್ಕ ಹನುಮಯ್ಯ ಪ್ರಸ್ತಾವಿಕವಾಗಿ ಮಾತನಾಡಿದರು. ಡಾ. ರಾಜಶೇಖರ ಬಿರಾದಾರ ಸ್ವಾಗತಿಸಿದರು. ಶಂಕರ ಲಗಳಿ ವಂದಿಸಿದರು.