ದೇಶದಲ್ಲಿಯೇ ವಿಶಿಷ್ಟವಾದ ವಿಶ್ವವಿದ್ಯಾಲಯ ಕನ್ನಡ ವಿಶ್ವವಿದ್ಯಾಲಯ : ಡಿ.ವಿ. ಪರಮಶಿವಮೂರ್ತಿ

Kannada University is a unique university in the country: D.V. Paramashivamurthy

ದೇಶದಲ್ಲಿಯೇ ವಿಶಿಷ್ಟವಾದ ವಿಶ್ವವಿದ್ಯಾಲಯ ಕನ್ನಡ ವಿಶ್ವವಿದ್ಯಾಲಯ : ಡಿ.ವಿ. ಪರಮಶಿವಮೂರ್ತಿ 


 ವಿಜಯನಗರ 18: ಕನ್ನಡ ವಿಶ್ವವಿದ್ಯಾಲಯ ಕರ್ನಾಟಕದಲ್ಲಿ ಅಲ್ಲದೆ ಭಾರತದಲ್ಲಿಯೇ ಬಹಳ ವಿಶಿಷ್ಟವಾದ ವಿಶ್ವವಿದ್ಯಾಲಯ. ನಮ್ಮ ವಿಶ್ವವಿದ್ಯಾಲಯದಲ್ಲಿ ಅಂತರ್ ಶಿಸ್ತೀಯ ಮತ್ತು ಬಹುಶಿಸ್ತೀಯ ಅಧ್ಯಯನಕ್ಕೆ ಆದ್ಯತೆ ನೀಡಲಾಗುತ್ತದೆ ಎಂದು ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ.ಡಿ.ವಿ. ಪರಮಶಿವಮೂರ್ತಿ ಅವರು ಅಭಿಪ್ರಾಯಪಟ್ಟರು. ಕನ್ನಡ ವಿಶ್ವವಿದ್ಯಾಲಯದ ನುಡಿ ಕಟ್ಟಡದಲ್ಲಿ ಆಯೋಜಿಸಲಾದ 2024-25ನೇ ಸಾಲಿನ ಎಂ.ಎ. ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಸ್ವಾಗತ ಸಮಾರಂಭದಲ್ಲಿ ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮ ಚಾಲನೆ ನೀಡಿ ಮಾತನಾಡಿದರು. ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳು ಭಾಷಾಂತರ, ಶಾಸನಶಾಸ್ತ್ರ ಮತ್ತು ದ್ರಾವಿಡ ಮತ್ತು ಭಾಷಾಧ್ಯಯನ ವಿಷಯಗಳಲ್ಲಿ ಪರಿಣಿತಿ ಪಡೆಯಬಹುದು ಎಂದರು. ಮದ್ಯಕಾಲಿನ ಕನ್ನಡ ಸಾಹಿತ್ಯ ಮತ್ತು ದಾಸ ಸಾಹಿತ್ಯದ ನೆಲೆ ನಮ್ಮ ಹಂಪಿಯ ಪರಿಸರ. ಈ ಪ್ರದೇಶದಲ್ಲಿ ವಚನಗಳ ಸಂಗ್ರಹ ಮತ್ತು ಅದಕ್ಕೆ ಸೊಗಸಾದ ವ್ಯಾಖ್ಯಾನಗಳನ್ನು ಟೀಕೆ-ಟಿಪ್ಪಣಿಗಳನ್ನು ಬರೆಯಲಾಯಿತು. ಇಂತಹ ಪಾರಂಪರಿಕ ಸ್ಥಳದಲ್ಲಿ ಅಧ್ಯಯನ ಕೈಗೊಂಡಿರುವ ವಿದ್ಯಾರ್ಥಿ ಸಮೂಹದ ಜವಾಬ್ದಾರಿ ದೊಡ್ಡದು ಎಂದರು. ಅಧ್ಯಯನಾಂಗದ ನಿರ್ದೇಶಕರಾದ ಡಾ. ಅಮರೇಶ ಯತಗಲ್ ಅವರು ಮಾತನಾಡುತ್ತ ಕನ್ನಡ ವಿಶ್ವವಿದ್ಯಾಲಯ ಬಹಳ ಸಂಪತ್ತಭರಿತ ನೆಲ. ವಿದ್ಯಾರ್ಥಿಗಳು ಜೀವನದಲ್ಲಿ ಏಳು ಬೀಳುಗಳನ್ನು ಸರಿ ಸಮಾನವಾಗಿ ತೆಗೆದುಕೊಳ್ಳಬೇಕು. ಕನ್ನಡ ವಿಶ್ವವಿದ್ಯಾಲಯದಲ್ಲಿ ಜ್ಞಾನಕ್ಕೆ ಮೊದಲ ಆದ್ಯತೆ. ವಿದ್ಯಾರ್ಥಿಗಳು ಮನಸ್ಸನ್ನು ಬೇರೆಡೆಗೆ ಹರಿಯಬಿಡದೆ,  ವಿದ್ಯಾಭ್ಯಾಸದ ಕಡೆ ಗಮನ ನೀಡಬೇಕು. ಸಮಯವನ್ನು ಎಲ್ಲರೂ ಸರಿಯಾಗಿ ಬಳಸಿಕೊಳ್ಳಿ. ನಿಮ್ಮ ಬಾಳು ಬಂಗಾರವಾಗಲಿ ಎಂದು ಆರೈಸಿದರು. ಕನ್ನಡ ವಿಶ್ವವಿದ್ಯಾಲಯ ಭಾಷಾ ನಿಕಾಯದ ಡೀನರಾದ ಡಾ.ಎಫ್‌.ಟಿ. ಹಳ್ಳಿಕೇರಿ ಅವರು ಮಾತನಾಡುತ್ತಾ ಪ್ರತಿಯೊಬ್ಬ ವಿದ್ಯಾರ್ಥಿಯ ಪಾಲಿಗೆ ಸ್ನಾತಕೋತರ ಪದವಿಯು ಒಂದು ಪ್ರಮುಖ ಮೈಲುಗಲ್ಲು. ಕನ್ನಡ ವಿಶ್ವವಿದ್ಯಾಲಯದ ಸೌಲಭ್ಯ, ಮತ್ತೆ ಎಲ್ಲೂ ಸಿಗುವುದಿಲ್ಲ. ಈ ಸೌಲಭ್ಯಗಳನ್ನು ಬಳಸಿಕೊಂಡು ನಾಡಿಗೆ ಮತ್ತು ದೇಶಕ್ಕೆ ಒಳ್ಳೆಯ ಕೊಡುಗೆಯನ್ನು ನೀಡಬೇಕು ಎಂದು ತಿಳಿಸಿದರು. ಎಂ.ಎ ಕನ್ನಡ ಸ್ನಾತಕೋತ್ತರ ಪದವಿ ಸಂಚಾಲಕರಾದ ಡಾ. ವೆಂಕಟಗಿರಿ ದಳವಾಯಿ ಅವರು ಮಾತನಾಡುತ್ತ ಸ್ವಾಗತ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಪ್ರತಿಭೆ ಮತ್ತು ಕೌಶಲ್ಯಗಳನ್ನು ಹೊರತರುವ ಅತ್ಯುತ್ತಮ ವೇದಿಕೆ. ವಿದ್ಯಾರ್ಥಿ ಜೀವನ ಎನ್ನುವುದು ಸುವರ್ಣ ಯುಗ. ಇದರ ನೆನಪು ಸದಾ ಹಸಿರಾಗಿರುತ್ತದೆ ಎಂದರು. ಈ ಕಾರ್ಯಕ್ರಮದಲ್ಲಿ ವಿವಿಧ ನಿಕಾಯದ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.