ಶಾಲೆಯಲ್ಲಿ ಮಕ್ಕಳ ಸಂತೆ ವೀಕ್ಷಿಸಿದ ಕಲ್ಮಠದ ಶ್ರೀಗಳು

ಲೋಕದರ್ಶನ  ವರದಿ

ಚನ್ನಮ್ಮನ ಕಿತ್ತೂರು 02:  ಪ್ರತಿವಾರದಂತೆ ಕಿತ್ತೂರಿನ ಸೋಮವಾರ ಪೇಟೆಯಲ್ಲಿ ಮಳೆ ರಾಯನ ಆಗಮನದಿಂದ ಸಂತೆ  ಸ್ವಲ್ಪ ಮಂದಗತಿಯಲ್ಲಿ ನಡೆಯುತ್ತಿದ್ದರೆ ಇಲ್ಲಿಯ ಶ್ರೀರಾಜಗುರು ಪ್ರತುಷ್ಠಾನದ ಕನ್ನಡ ಮತ್ತು ಆಂಗ್ಲ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಂದ ಸಂತೆ ಹಬ್ಬೋತ್ಸವವು ಜೋರಾಗಿಯೇ ನಡೆಯಿತು.

ವಿವಿಧ ಬಗೆಯ ತರಕಾರಿಗಳನ್ನು, ಕಾಳುಗಳನ್ನು, ಕಾಯಿಪಲ್ಯೆಗಳನ್ನು, ಚಿಕ್ಕ ಚಿಕ್ಕ ಪಾತ್ರೆಗಳನ್ನು, ಸಿಹಿ ಪದಾರ್ಥಗಳನ್ನು, ಕಿರಾಣಿ ಸಾಮಾನುಗಳನ್ನು, ಚುನಮರಿ, ಅವಲಕ್ಕಿ ಬಜಿ ಮುಂತಾದವುಗಳನ್ನು ವಿದ್ಯಾರ್ಥಿಗಳನ್ನು ಮನೆಯಿಂದಲೇ ತಂದು ಮಾರಾಟ ಮಾಡುತ್ತಿದ್ದುದು ವಿಶೇಷವಾಗಿತ್ತು. ಕೃಷಿಕರ ಮಕ್ಕಳು ಹೊಲದಲ್ಲಿ ಬೆಳೆದವುಗಳನ್ನು, ವ್ಯಾಪಾರಸ್ಠರ ಮಕ್ಕಳು ಕಿರಾಣಿ ಸಾಮಾನುಗಳನ್ನು, ಬಟ್ಟೆ ಅಂಗಡಿಯ ಮಕ್ಕಳು ಕರ್ಚೀಪ್-ಟಾವೆಲ್ಗಳನ್ನು, ಬಾಂಡೆ ಅಂಗಡಿಯ ಮಕ್ಕಳು ಸಣ್ಣ ಪಾತ್ರೆಗಳನ್ನು, ಇತರರು ಮನೆಯಲ್ಲಿ ತಯಾರಿಸಿದ ಸಾಮಾನುಗಳನ್ನು, ಕೋತಂಬ್ರಿ, ಲಿಂಬೇ ಹಣ್ಣ್ರು ಮತ್ತು ಕರಿಬೇವು  ತಂದು ಮಾರುತ್ತಿದ್ದುದು ನೋಡುಗರಿಗೆ ಖುಷಿ ತಂದಿತು. ವಿದ್ಯಾರ್ಥಿಗಳು ತಮ್ಮ ಸಾಮಾನುಗಳನ್ನು ಖರೀದಿಸುವಂತೆ ಒತ್ತಾಯಿಸುತ್ತ ದರದಲ್ಲಿಯೂ ರಿಯಾಯತಿ ನೀಡುವದಾಗಿ ಹೇಳುತ್ತಿದ್ದುದು ಎಲ್ಲರ ಗಮನ ಸೆಳೆಯುತ್ತಿತ್ತು. ಪಾಲಕರು ಮತ್ತು ಶಿಕ್ಷಕರು ಸಂತಸದಿಂದ ಮಕ್ಕಳ ಮಾರಾಟದ ವಸ್ತುಗಳನ್ನು ಖರೀದಿಸುತ್ತಿರುವದು ಆಕರ್ಷಣೀಯವಾಗಿತ್ತು.

   ಮಕ್ಕಳ ಸಂತೆ ನೋಡಲು ಬಂದ ಕಲ್ಮಠದ ಪೂಜ್ಯ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ಮಾತನಾಡಿ, ಮಕ್ಕಳಲ್ಲಿ ವ್ಯವಹಾರ ಜ್ಞಾನವನ್ನು ಮತ್ತು ಹಣಕಾಸಿನ ಪ್ರಜ್ಞೆ ಮೂಡಿಸುವದರ ಜೊತೆಗೆ ಸಂತೆಯ ಬಗೆಗೆ ಮಾಹಿತಿಯನ್ನು ಮೂಡಿಸಲು ಶಾಲೆಗಳಲ್ಲಿ ನಡೆಯುವ ಇಂತಹ ಕಾರ್ಯಕ್ರಮಗಳು ಸಹಾಯಕವಾಗಲಿವೆ ಎಂದು ಶುಭ ಹಾರೈಸಿದರು. 

ಕಿನಾವಿವ ಸಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ಡಾ.ಎಸ್.ಬಿ.ದಳವಾಯಿ ಮಾತನಾಡಿ, ನಗರ ಪ್ರದೇಶಗಳಲ್ಲಿ ಮಹಾಲ್ ಗಳಲ್ಲಿ ಎಲ್ಲ ವಸ್ತುಗಳನ್ನು ತರಲಾಗುತ್ತಿದೆ. ಈ ಪ್ರವೃತ್ತಿ ಇದೀಗ ಹಳ್ಳಿಗಳಲ್ಲಿಯೂ ಕಂಡು ಬರುತ್ತಿದ್ದು ಮಕ್ಕಳಲ್ಲಿ ಸಂತೆಯ ಬಗೆಗೆ ತಿಳುವಳಿಕೆ ಮಾಯವಾಗ ತೊಡಗಿದೆ ಎಂದರು. 

  ಎಸ್.ಎಸ್.ನರಸಣ್ಣವರ, ಗಂಗಣ್ಣ ಕರೀಕಟ್ಟಿ, ಮುಖ್ಯಾಧ್ಯಾಪಕರುಗಳಾದ ಲಕ್ಷ್ಮೀ ಲಂಗೋಟಿ ಮತ್ತು ರಾಜೇಶ್ವರಿ ಕಳಸಣ್ಣವರ, ಪಾಲಕರು, ಶಿಕ್ಷಕರು ಮತ್ತು ಕಛೇರಿ ಸಿಬ್ಬಂದಿಯವರು ಉಪಸ್ಥಿತರಿದ್ದರು.