ಪತ್ರಿಕೋದ್ಯಮಕ್ಕೆ ನಾಡಿನ ದಿಕ್ಕನ್ನು ಬದಲಾಯಿಸುವ ಶಕ್ತಿ ಇದೆ: ಶಶಿಧರ್

ಲೋಕದರ್ಶನ ವರದಿ

ಹೊಸಪೇಟೆ 26: ಸಮಾಜದ ಡೊಂಕುಗಳನ್ನು ತಿದ್ದುವಲ್ಲಿ ಮಾಧ್ಯಮಗಳ ಪಾತ್ರ ಹಿರಿದು ಎಂದು ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್ ಎಂ ಶಶಿಧರ್ ಅವರು ಹೇಳಿದರು.

ಹೂವಿನ ಹಡಗಲಿಯ ಶೋಭ ಪ್ರಕಾಶನ ಹಾಗೂ ಬಳ್ಳಾರಿಯ ಸಂಸ್ಕೃತಿ ಪ್ರಕಾಶನದ ಸಹಯೋಗದಲ್ಲಿ ನಗರದ ಪಿಡಿಐಟಿಯಲ್ಲಿ ಜರುಗಿದ ಕವಿ ಪ್ರಕಾಶ ಮಲ್ಕಿ ಒಡೆಯರ್ ಅವರ ನಾಡು ನಾಡಿ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಪತ್ರಿಕೋದ್ಯಮಕ್ಕೆ ನಾಡಿನ ದಿಕ್ಕನ್ನು ಬದಲಾಯಿಸುವ ಶಕ್ತಿ ಇದ್ದು ಸಮಾಜದ  ಸಮಸ್ಯೆಗಳನ್ನು ಸರಕಾರ ಇಲ್ಲವೇ ವ್ಯವಸ್ಥೆಯ ಗಮನಕ್ಕೆ ತರುವ ಗುರುತರ ಕಾರ್ಯವನ್ನು ಪತ್ರಕರ್ತರು ನಿರ್ವಹಿಸುತ್ತಾರೆ ಎಂದರು.

'ನಾಡು ನಾಡಿ' ಕೃತಿಯ ಬರಹಗಳು ವೈವಿಧ್ಯತೆಯಿಂದ ಕೂಡಿದ್ದು ಕೃಷಿ, ರಾಜಕಾರಣ, ಸಂಸ್ಕೃತಿ ಕ್ಷೇತ್ರಕ್ಕೆ ಸಂಬಂಧಿಸಿದ ಮೌಲಿಕ ಚಿಂತನೆಗಳು ಕೂಡಿದ್ದು ಯುವ ಬರಹಗಾರರಿಗೆ ಕೈಪಿಡಿಯಂತಿವೆ ಎಂದು ತಿಳಿಸಿದರು.

ಕೃತಿ ಪರಿಚಯಿಸಿದ ಕನ್ನಡ ವಿವಿಯ ಸಾಹಿತಿ ಎಂ ಎಂ ಶಿವಪ್ರಕಾಶ ಅವರು, ಎರಡು ದಶಕಗಳ ಹಿಂದೆ ಬರೆದ ಕೃತಿಯ ಲೇಖನಗಳು ಪ್ರಸ್ತುತವಾಗಿವೆ. ಪತ್ರಿಕೆಗಳ ಓದುಗರು ಬರೆದ ಪತ್ರಗಳು ಸರಕಾರದ ಗಮನಸೆಳೆದ ಸಾವಿರಾರು ಉದಾಹರಣೆಗಳು ಇವೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹಾಯಕ ಪ್ರಾಧ್ಯಾಪಕ ಡಾ. ಕೆ. ವೆಂಕಟೇಶ್, ಬರಹಗಾರರಿಗೆ ನೆಲದ ಸಂಸ್ಕೃತಿ ಮತ್ತು ಚರಿತ್ರೆಯ ಅರಿವಿದ್ದರೆ ಜೀವಪರವಾದ ಬರಹಗಳು ಸೃಷ್ಟಿಯಾಗಲು ಸಾಧ್ಯ ಎಂದರು.

ಗ್ರಾಮೀಣ ಭಾಗದಿಂದ ಹೆಚ್ಚೆಚ್ಚು ಪತ್ರಕರ್ತರು ಬರುವ ಮೂಲಕ ಈ ಭಾಗಗಳ ಜ್ವಲಂತ ಸಮಸ್ಯೆಗಳಿಗೆ ದನಿಯಾಗಬೇಕಿದೆ ಎಂದು ಆಶಿಸಿದರು. ಕವಿ, ಛಾಯಾಗ್ರಾಹಕ ಶಿವಶಂಕರ ಬಣಗಾರ, ಕಸಾಪ ಹಗರಿಬೊಮ್ಮನಹಳ್ಳಿ ತಾಲೂಕು ಘಟಕದ ಉಪಾಧ್ಯಕ್ಷ ಚಿನ್ನಪ್ಪ ಮಲ್ಕಿ ಒಡೆಯರ್, ಪ್ರಕಾಶಕಿ ಶೋಭ ಪ್ರಕಾಶನದ ಶೋಭ ಮಲ್ಕಿ ಒಡೆಯರ್, ಕೃತಿಕಾರ ಪ್ರಕಾಶ ಮಲ್ಕಿ ಒಡೆಯರ್ ಮಾತನಾಡಿದರು.

ಇದೇ ಸಂದರ್ಭದಲ್ಲಿ ಸಂಸ್ಕೃತಿ ಪ್ರಕಾಶನದ ಪರವಾಗಿ ಸಾಹಿತಿ ದಂಪತಿ ಪ್ರಕಾಶ ಮಲ್ಕಿ ಒಡೆಯರ್ ಮತ್ತು ಶೋಭ ಮಲ್ಕಿ ಒಡೆಯರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಬಿ ಕೆ ಮುರಳೀಧರ್ ಸ್ವಾಗತಿಸಿದರು. ವಿದ್ಯಾಥರ್ಿನಿ ಶ್ವೇತಾ ಪ್ರಾಥರ್ಿಸಿದರು. ಸಂಸ್ಕೃತಿ ಪ್ರಕಾಶನದ ಸಿ. ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಉಪನ್ಯಾಸಕಿ ಡಾ. ಕೃಷ್ಣವೇಣಿ ನಿರೂಪಿಸಿದರು. ಉಪನ್ಯಾಸಕ ಪ್ರಕಾಶ್ ಬೂದಗುಂಪ ವಂದಿಸಿದರು.