ಜಮಾಬಂಧಿ ಸಭೆ

ಕಾರವಾರ:  ಹೊನ್ನಾವರ ತಾಲೂಕಿನ ಕೆಳಗಿನೂರು ಗ್ರಾಮ ಪಂಚಾಯತ್‌ನಲ್ಲಿ ಜಮಾಬಂಧಿ ಹಾಗೂ ನರೇಗಾ ಅರಿವು ಕಾರ್ಯಕ್ರಮವನ್ನು ತಾಲೂಕು ಪಂಚಾಯತ್ ನರೇಗಾ ಸಹಾಯಕ ನಿರ್ದೇಶಕ ಕೃಷ್ಣಾನಂದ ಕೆ ಅವರ ನೇತೃತ್ವದಲ್ಲಿ ಜರುಗಿತು. 

ಅವರು ಬುಧವಾರ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪ್ರಸಕ್ತ ಸಾಲಿನಲ್ಲಿ ವಿವಿಧ ಯೋಜನೆಗಳಡಿ ಕೈಗೊಂಡ ಕಾಮಗಾರಿಗಳ ಖರ್ಚು ವೆಚ್ಚಗಳ ಕುರಿತು ಮಾಹಿತಿ ಪಡೆದು ಕಾಮಗಾರಿಗೆ ಸಂಬಂಧಿಸಿದ ಕಡತಗಳು ಹಾಗೂ ದಾಖಲೆಗಳನ್ನು ಪರೀಶೀಲಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. 

ನಂತರ ಮುಗಳಿ ಗ್ರಾಮದಲ್ಲಿ ಸಂಜೀವಿನಿ ಒಕ್ಕೂಟದಡಿ ನಿರ್ಮಾಣವಾದ ಸಾಮೂದಾಯಿಕ ಕೋಳಿ ಶೆಡ್‌ಗೆ ಭೇಟಿ ನೀಡಿ ಫಲಾನುಭವಿಗಳ ಕಾರ್ಯವೈಖರಿ ಹಾಗೂ ಅಭಿವೃದ್ಧಿಯ ಬಗ್ಗೆ ವಿಚಾರಿಸಿದರು. ನರೇಗಾದಡಿ ಗುಣವಂತೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಗತಿಯಲ್ಲಿರುವ ಅಡುಗೆಕೋಣೆ ಕಾಮಗಾರಿ ಹಾಗೂ ತೋಟಗಾರಿಕಾ ಇಲಾಖೆಯಡಿ ಅಭಿವೃದ್ಧಿಪಡಿಸಿರುವ ಮಂಜು ಗೌಡ ಅವರ ಅಪ್ಪೆಮಿಡಿ ತೋಟ ಹಾಗೂ ಅಡಿಕೆ ಬೆಳೆಯನ್ನು ಪರೀಶೀಲಿಸಿದರು. 

ಮುಗ್ವಾ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಸಿಬ್ಬಂದಿಗಳ ಹಾಜರಾತಿ, ಕಾಮಗಾರಿ ಮಾಹಿತಿ ಪಡೆದು ನರೇಗಾದಡಿ ನಿರ್ಮಾಣವಾಗುತ್ತಿರುವ ಎನ್‌ಆರ್‌ಎಲ್‌ಎಮ್ ವರ್ಕ್‌ಶೆಡ್ ಕಾಮಗಾರಿ ಪರೀಶೀಲನೆ ನಡೆಸಿದರು. 

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಿತ್ರಾಕ್ಷಿ ಗೌಡ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಣ್ಣಪ್ಪ ಮುಕ್ರಿ, ಗ್ರಾ.ಪಂ ಸದಸ್ಯರು, ಸಿಬ್ಬಂದಿಗಳು, ಐಇಸಿ ಸಂಯೋಜಕರು ಹಾಜರಿದ್ದರು.