ಬಿದ್ದ ಮನೆಗಳಿಗೆ ಆದೇಶ ಪತ್ರ ವಿತರಣೆ

ಮುನವಳ್ಳಿ 02: ಅ 1 ರಂದು ಸಂಜೆ : 4-30 ಕ್ಕೆ ಪಟ್ಟಣದ ಪುರಸಭೆಯಲ್ಲಿ ಇತ್ತೀಚಿಗೆ ಮಲಪ್ರಭಾ ನದಿ ಪ್ರವಾಹದಿಂದ ಸಂಪೂರ್ಣ, ಅಪೂರ್ಣ ಹಾಗೂ ಭಾಗಶಃ ಹಾನಿಗೊಳಗಾದ ಮನೆಗಳಿಗೆ ರಾಜ್ಯ ಸರ್ಕಾರದ ಪರಿಹಾರದ ಆದೇಶ ಪತ್ರಗಳನ್ನು ಸಂತ್ರಸ್ಥ ಕುಟುಂಬಗಳಿಗೆ  ಶಾಸಕ ಆನಂದ ಮಾಮನಿ ವಿತರಣೆ ಮಾಡಿದರು.

ನಂತರ ಮಾತನಾಡಿದ ಅವರು ರಾಜ್ಯ ಸರ್ಕಾರ ಸಂಪೂರ್ಣವಾಗಿ ಬಿದ್ದ ಮನೆಗಳಿಗೆ 5 ಲಕ್ಷ ರೂ. ಅಪೂರ್ಣವಾಗಿ ಬಿದ್ದ ಮನೆಗಳಿಗೆ 1 ಲಕ್ಷ ರೂ. ಹಾಗೂ ಭಾಗಶಃ ಬಿದ್ದ ಮನೆಗಳಿಗೆ 25 ಸಾವಿರ ರೂ.ಗಳನ್ನು ಪರಿಹಾರವಾಗಿ ನೀಡುತ್ತಿದ್ದು ಸಂಪೂರ್ಣವಾಗಿ ಬಿದ್ದ ಮನೆಗಳಿಗೆ ರಾಜೀವ ಗಾಂಧಿ ವಸತಿ ನಿಗಮದಡಿ ಪುರಸಭೆ ಮೂಲಕ ಹಂತ ಹಂತವಾಗಿ ಮನೆ ನಿರ್ಮಿಸಿ ಕೊಡಲಾಗುವುದು. ಮುನವಳ್ಳಿಯಲ್ಲಿ ಒಟ್ಟು 363 ಮನೆಗಳ ಪೈಕಿ ಸಂಪೂರ್ಣವಾಗಿ ಬಿದ್ದ ಮನೆಗಳು 44, ಅಪೂರ್ಣವಾಗಿ ಬಿದ್ದ ಮನೆಗಳು 134, ಭಾಗಶಃ ಬಿದ್ದ ಮನೆಗಳು 185 ಇವೆ ಎಂದರು. ಸವದತ್ತಿಯ ಸಹಶೀಲ್ದಾರ ಶಂಕರ ಗೌಡಿ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಯಶವಂತಕುಮಾರ. ಪುರಸಭೆ ಮುಖ್ಯಾಧಿಕಾರಿ ಮಹೆಂದ್ರ ತಿಮ್ಮಾಣಿ ಸೇರಿದಂತೆ ಪುರಸಭೆ ಸದಸ್ಯರು ಉಪಸ್ಥಿತರಿದ್ದರು.